ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬ್ರೆಂಡನ್‌ ಟೇಲರ್‌..!

By Suvarna NewsFirst Published Sep 13, 2021, 5:24 PM IST
Highlights

* ಜಿಂಬಾಬ್ವೆ ತಂಡದ ಮಾಜಿ ನಾಯಕ ಬ್ರೆಂಡನ್‌ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ

* ಐರ್ಲೆಂಡ್ ವಿರುದ್ದ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಲಿರುವ ಟೇಲರ್

* ಟ್ವೀಟ್‌ ಮೂಲಕ ನಿವೃತ್ತಿ ಘೋಷಿಸಿದ ಜಿಂಬಾಬ್ವೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌

ಹರಾರೆ(ಸೆ.13): ಜಿಂಬಾಬ್ವೆ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಬ್ರೆಂಡನ್‌ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ಎನ್ನುವಂತೆ ವಿದಾಯ ಘೋಷಿಸಿದ್ದಾರೆ. ಐರ್ಲೆಂಡ್ ವಿರುದ್ದ ಇಂದು(ಸೆ.13) ನಡೆಯಲಿರುವ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯವೇ ಬ್ರೆಂಡನ್‌ ಟೇಲರ್‌ ಪಾಲಿಗೂ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಎನಿಸಲಿದೆ.

ಬ್ರೆಂಡನ್‌ ಟೇಲರ್ 2004ರಲ್ಲಿ ಶ್ರೀಲಂಕಾ ವಿರುದ್ದ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ದಶಕಗಳ ಕಾಲ ಬ್ರೆಂಡನ್ ಟೇಲರ್‌ ಜಿಂಬಾಬ್ವೆ ತಂಡದ ಅತ್ಯಂತ ಯಶಸ್ವಿ ಕ್ರಿಕೆಟಿಗ ಎನಿಸಿಕೊಂಡಿದ್ದರು. ಬ್ರೆಂಡನ್ ಟೇಲರ್ ಜಿಂಬಾಬ್ವೆ 34 ಟೆಸ್ಟ್‌, 204 ಏಕದಿನ ಹಾಗೂ 45 ಟಿ20 ಪಂದ್ಯಗಳನ್ನಾಡಿ ಕ್ರಮವಾಗಿ 2320 , 6677 ಹಾಗೂ 934 ರನ್‌ ಬಾರಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 6 ಶತಕ ಹಾಗೂ 12 ಶತಕ ಬಾರಿಸಿದ್ದರೆ, ಏಕದಿನ ಕ್ರಿಕೆಟ್‌ನಲ್ಲಿ 11 ಶತಕ ಹಾಗೂ 39 ಅರ್ಧಶತಕ ಸಿಡಿಸಿದ್ದರು. ಇನ್ನು ಟಿ20 ಕ್ರಿಕೆಟ್‌ನಲ್ಲಿ 5 ಅರ್ಧಶತಕ ಬಾರಿಸಿದ್ದಾರೆ.

ಟೀಂ ಇಂಡಿಯಾ ನಾಯಕತ್ವ ಬದಲಾವಣೆ: ಕೊಹ್ಲಿ ಬಗ್ಗೆ ಕೊನೆಗೂ ತುಟಿಬಿಚ್ಚಿದ ಬಿಸಿಸಿಐ..!

ನಾನು ನನ್ನ ಪ್ರೀತಿಯ ದೇಶದ ಪರ ಕೊನೆಯ ಪಂದ್ಯವನ್ನಾಡಲು ಸಿದ್ದವಾಗಿದ್ದೇನೆ ಎಂದು ಘೋಷಿಸಲು ಹೃದಯತುಂಬಿ ಬಂದಿದೆ. 17 ವರ್ಷಗಳ ವೃತ್ತಿಜೀವನದಲ್ಲಿ ನಾನು ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ. ಇಷ್ಟು ದೀರ್ಘಕಾಲ ರಾಷ್ಟ್ರವನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. 2004ರಲ್ಲಿ ನಾನು ತಂಡ ಕೂಡಿಕೊಂಡಿದ್ದಾಗ ನಾನು ಹಾಕಿಕೊಂಡ ಗುರಿಯೆಂದರೆ, ನನ್ನ ತಂಡವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯಬೇಕು ಎನ್ನುವುದಾಗಿತ್ತು ಎಂದು ಭಾವನಾತ್ಮಕವಾಗಿ ಬ್ರೆಂಡನ್ ಟೇಲರ್ ಟ್ವೀಟ್‌ ಮಾಡಿದ್ದಾರೆ.

Forever grateful for the journey. Thank you 🙏 pic.twitter.com/tOsYzoE5eH

— Brendan Taylor (@BrendanTaylor86)

ಐರ್ಲೆಂಡ್ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಬ್ರೆಂಡನ್‌ ಟೇಲರ್ 49 ರನ್‌ ಬಾರಿಸುವ ಮೂಲಕ ಜಿಂಬಾಬ್ವೆ ತಂಡ ಗೆಲುವಿನ ನಗೆ ಬೀರಲು ಪ್ರಮುಖ ಪಾತ್ರವಹಿಸಿದ್ದರು. ಇದರೊಂದಿಗೆ ಜಿಂಬಾಬ್ವೆ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿತ್ತು. ಇನ್ನು ಎರಡನೇ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಮೂರನೇ ಪಂದ್ಯದಲ್ಲಿ ಬ್ರೆಂಡನ್‌ ಟೇಲರ್ ಮತ್ತೊಮ್ಮೆ ಉತ್ತಮ ಪ್ರದರ್ಶನ ತೋರಿ ಗೆಲುವಿನೊಂದಿಗೆ ತಮ್ಮ ಅಭಿಯಾನವನ್ನು ಮುಗಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
 

click me!