ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ ಯುವರಾಜ್ ಸಿಂಗ್!

Published : Apr 05, 2026, 02:06 PM IST
Yashasvi Jaiswal, Yuvraj Singh, Rohit Sharma and Virat Kohli

ಸಾರಾಂಶ

2027ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಪಾಲ್ಗೊಳ್ಳುವಿಕೆಯ ಬಗ್ಗೆ ಟೀಂ ಮ್ಯಾನೇಜ್‌ಮೆಂಟ್ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮಾಜಿ ಆಟಗಾರ ಯುವರಾಜ್ ಸಿಂಗ್ ಒತ್ತಾಯಿಸಿದ್ದಾರೆ. ಈ ಇಬ್ಬರು ದಿಗ್ಗಜ ಆಟಗಾರರೊಂದಿಗೆ ಪಾರದರ್ಶಕ ಮಾತುಕತೆ ನಡೆಸಿ, ಅವರ ಭವಿಷ್ಯದ ಬಗ್ಗೆ ಗೊಂದಲವಿಲ್ಲದಂತೆ ನೋಡಿಕೊಳ್ಳಬೇಕು ಎಂದು ಯುವಿ ಸಲಹೆ ನೀಡಿದ್ದಾರೆ.

ಮುಂಬೈ: 2027ರ ಏಕದಿನ ವಿಶ್ವಕಪ್‌ಗೆ ಇನ್ನೂ ಸಮಯವಿದೆ. ಆದರೆ, ಟೀಂ ಇಂಡಿಯಾದ ಸೀನಿಯರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಭವಿಷ್ಯದ ಬಗ್ಗೆ ಈಗಲೇ ಚರ್ಚೆ ಶುರುವಾಗಿದೆ. ಈ ಇಬ್ಬರು ದಿಗ್ಗಜ ಆಟಗಾರರ ವಿಚಾರದಲ್ಲಿ ಟೀಂ ಮ್ಯಾನೇಜ್‌ಮೆಂಟ್ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಬೇಕು ಎಂದು ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ.

ಇಷ್ಟೆಲ್ಲಾ ಸಾಧನೆ ಮಾಡಿದ ಆಟಗಾರರ ಜೊತೆ ಪಾರದರ್ಶಕವಾಗಿ ಮಾತಾಡಬೇಕು, ಗೊಂದಲಗಳಿಗೆ ಅವಕಾಶ ಕೊಡಬಾರದು ಅಂತ ಯುವಿ ಒತ್ತಾಯಿಸಿದ್ದಾರೆ. ಸದ್ಯ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ, ಟೆಸ್ಟ್ ಹಾಗೂ ಟಿ20ಯಿಂದ ದೂರ ಉಳಿದಿದ್ದು, ಏಕದಿನ ಕ್ರಿಕೆಟ್ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

ರೋಹಿತ್-ಕೊಹ್ಲಿ ಜತೆ ಭವಿಷ್ಯದ ಬಗ್ಗೆ ಬಿಸಿಸಿಐ ನೇರ ಮಾತುಕತೆ ನಡೆಸಲಿ

"ಅವರಿಬ್ಬರ ಮನಸ್ಸಲ್ಲಿ ಏನಿದೆ ಅಂತ ನನಗೆ ಗೊತ್ತಿಲ್ಲ. ಅವರಿಬ್ಬರಿಗೂ ವಿಶ್ವಕಪ್ ಆಡೋ ಆಸೆ ಇದೆ ಅನ್ಸುತ್ತೆ. ಆದರೆ, ಅವರ ಭವಿಷ್ಯದ ಬಗ್ಗೆ ಸೆಲೆಕ್ಟರ್ಸ್ ಮತ್ತು ಆಟಗಾರರ ನಡುವೆ ಚರ್ಚೆ ಆಗಬೇಕು. ಇಲ್ಲಿ ಒಂದು ನೇರವಾದ ಮಾತುಕತೆ ಬೇಕು. ಒಂದು ವೇಳೆ ಟೀಂ ಮ್ಯಾನೇಜ್‌ಮೆಂಟ್ ಯುವ ಆಟಗಾರರಿಗೆ ಮಣೆ ಹಾಕುವುದಾದರೆ, ಅದನ್ನು ಅವರಿಗೆ ಸ್ಪಷ್ಟವಾಗಿ ಹೇಳಬೇಕು. ಭಾರತೀಯ ಕ್ರಿಕೆಟ್‌ನಲ್ಲಿ ಇಂತಹ ನೇರ ಮಾತುಕತೆಗಳು ಹೆಚ್ಚಾಗಿ ನಡೆಯುವುದಿಲ್ಲ" ಅಂತ ಯುವರಾಜ್ ಸಿಂಗ್ ರಾಷ್ಟ್ರೀಯ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಂಕಿಅಂಶಗಳನ್ನು ನೋಡಿದರೆ, ಇಬ್ಬರೂ ಈಗಲೂ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. 2025ರ ಅಂತ್ಯದ ವೇಳೆಗೆ ತಮ್ಮ ಹಳೆಯ ಫಾರ್ಮ್‌ಗೆ ಮರಳಿದ್ದ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 151ರ ಸರಾಸರಿಯಲ್ಲಿ 302 ರನ್ ಗಳಿಸಿ ಐಸಿಸಿ ರ‍್ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನಕ್ಕೇರಿದ್ದರು. ಇತ್ತ ರೋಹಿತ್, ಆಸ್ಟ್ರೇಲಿಯಾದಲ್ಲಿ 101ರ ಸರಾಸರಿಯಲ್ಲಿ 202 ರನ್ ಗಳಿಸಿ ಸಿಡ್ನಿಯಲ್ಲಿ ಭಾರತಕ್ಕೆ ಸರಣಿ ಗೆಲ್ಲಿಸಿಕೊಟ್ಟಿದ್ದರು. ಆದರೆ, ಅದರ ನಂತರ ನಡೆದ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ರೋಹಿತ್ ಶರ್ಮಾ ಕೇವಲ 61 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ಐಪಿಎಲ್ ನಂತರ ನಿರ್ಧಾರವಾಗಲಿ

ಯಶಸ್ವಿ ಜೈಸ್ವಾಲ್ ಅವರಂತಹ ಯುವ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಹೀಗಿರುವಾಗ, ತಂಡದಲ್ಲಿ ಬದಲಾವಣೆ ಬೇಕೇ ಅನ್ನೋದು ಬಿಸಿಸಿಐಗೆ ದೊಡ್ಡ ಸವಾಲಾಗಿದೆ. ಆದರೆ, ಈ ಬಾರಿಯ ಐಪಿಎಲ್ ನಂತರ ಈ ಬಗ್ಗೆ ಒಂದು ನಿರ್ಧಾರ ಆಗಬೇಕು ಅನ್ನೋದು ಯುವರಾಜ್ ಅವರ ನಂಬಿಕೆ.

"2027ರ ಏಕದಿನ ವಿಶ್ವಕಪ್‌ಗೆ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದಾದರೆ, ಪೂರ್ತಿ ಬೆಂಬಲ ಕೊಡಿ. ಇಲ್ಲವಾದರೆ, ನಾವು ಯುವಕರನ್ನು ನೋಡುತ್ತಿದ್ದೇವೆ ಅಂತ ಅವರ ಬಳಿ ನೇರವಾಗಿ ಹೇಳಿ. ವಿಶ್ವಕಪ್‌ನಂತಹ ದೊಡ್ಡ ಟೂರ್ನಿಗಳಲ್ಲಿ ಅನುಭವ ಬಹಳ ಮುಖ್ಯ. ರೋಹಿತ್, ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟ ನಾಯಕ. ವಿರಾಟ್ ಕೊಹ್ಲಿ ಈ ತಲೆಮಾರಿನ ಶ್ರೇಷ್ಠ ಆಟಗಾರ. ಅವರಿಬ್ಬರಿಗೂ ಸಿಗಬೇಕಾದ ಗೌರವ ಸಿಗಲೇಬೇಕು" ಎಂದು ಯುವರಾಜ್ ಒತ್ತಿ ಹೇಳಿದ್ದಾರೆ.

2027ರ ಏಕದಿನ ವಿಶ್ವಕಪ್ ಟೂರ್ನಿಯ ಮೇಲೆ ಕಣ್ಣಿಟ್ಟ ರೋ-ಕೋ ಜೋಡಿ

2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಟೀಂ ಇಂಡಿಯಾ ಒಂದು ದಶಕಗಳ ಕಾಲ ಐಸಿಸಿ ಟ್ರೋಫಿ ಬರ ಅನುಭವಿಸಿತ್ತು. ಇದಾದ ಬಳಿಕ 2024ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ, ಐಸಿಸಿ ಟಿ20 ವಿಶ್ವಕಪ್ ಜಯಿಸಿತ್ತು. ಇದಾದ ಬಳಿಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇನ್ನು 2025ರ ಆರಂಭದಲ್ಲೇ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲೇ ಟೀಂ ಇಂಡಿಯಾ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ 2027ರ ಏಕದಿನ ವಿಶ್ವಕಪ್ ಟೂರ್ನಿಯ ಮೇಲೆ ಕಣ್ಣಿಟ್ಟಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಅಬ್ಬರಕ್ಕೆ ಚೆನ್ನೈ ಅಪ್ಪಚ್ಚಿ! ಈ ಸೀಸನ್ ಐಪಿಎಲ್‌ನಲ್ಲಿ ಸಿಎಸ್‌ಕೆಗೆ ಹ್ಯಾಟ್ರಿಕ್ ಸೋಲು!
ಸಿಎಸ್‌ಕೆ ಬೌಲರ್‌ಗಳನ್ನು ಅಟ್ಟಾಡಿಸಿ ಹೊಡೆದ ಆರ್‌ಸಿಬಿ! ಈ ಸೀಸನ್‌ನಲ್ಲಿ ಹೊಸ ದಾಖಲೆ ನಿರ್ಮಾಣ