ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ ಬಗ್ಗೆ ಬಿಸಿಸಿಐಗೆ ಯುವರಾಜ್ ಸಿಂಗ್ ಖಡಕ್ ಸಂದೇಶ..!

Published : Oct 31, 2026, 10:26 AM IST
Yuvraj Singh

ಸಾರಾಂಶ

ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ವೈಭವ್ ಸೂರ್ಯವಂಶಿ ಅವರಿಗೆ ಭಾರತ ಏಕದಿನ ಕ್ರಿಕೆಟ್ ತಂಡದಲ್ಲಿ ಅವಕಾಶ ನೀಡಬೇಕೆಂದು ಯುವರಾಜ್ ಸಿಂಗ್ ಒತ್ತಾಯಿಸಿದ್ದಾರೆ. ಹಿರಿಯ ಆಟಗಾರರ ಉಪಸ್ಥಿತಿಯಿಂದಾಗಿ ಯುವ ಪ್ರತಿಭೆಗಳಿಗೆ ಸ್ಥಾನ ಸಿಗುವುದು ಸವಾಲಾಗಿದ್ದರೂ, 50 ಓವರ್‌ಗಳ ಕ್ರಿಕೆಟ್‌ನಲ್ಲಿ ಅವರಿಗೆ ಅವಕಾಶ ನೀಡದಿದ್ದರೆ ಅನ್ಯಾಯವಾಗುತ್ತದೆ ಎಂದು ಯುವಿ ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ(ಅ.31): ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ವೈಭವ್ ಸೂರ್ಯವಂಶಿ ಅವರಂತಹ ಪ್ರತಿಭಾವಂತ ಆಟಗಾರರನ್ನು ಏಕದಿನ ತಂಡಕ್ಕೆ ನಿಯಮಿತವಾಗಿ ಆಯ್ಕೆ ಮಾಡದಿದ್ದರೇ ಅವರ ಸಾಮರ್ಥ್ಯಕ್ಕೆ ನ್ಯಾಯ ಒದಗಿಸಿದಂತಾಗುವುದಿಲ್ಲ ಎಂದು ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಅಭಿಷೇಕ್ ಶರ್ಮಾ ಅವರನ್ನು ಏಕದಿನ ತಂಡದಲ್ಲಿ ನೋಡಲು ತಾವು ಬಯಸುವುದಾಗಿ ಹೇಳಿರುವ ಯುವರಾಜ್, ಈ ಯುವ ಆಟಗಾರರು 50 ಓವರ್‌ಗಳ ಕ್ರಿಕೆಟ್‌ನಲ್ಲೂ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಪಡೆಯಬೇಕು ಎಂದು ಹೇಳಿದ್ದಾರೆ.

ಪ್ರೋಟೋಕಾಲ್ 32 ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲಿ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಯುವಿ, “ಅಭಿಷೇಕ್ ಏಕದಿನ ಪಂದ್ಯಗಳಲ್ಲಿ ಆಡುವುದನ್ನು ನೋಡಲು ನಾನು ಬಯಸುತ್ತೇನೆ. ಈ ಹಿಂದೆ ಕೂಡ ಇದನ್ನು ಹೇಳಿದ್ದೇನೆ. ಇಶಾನ್ ಕಿಶನ್, ಅಭಿಷೇಕ್ ಮತ್ತು ವೈಭವ್ ಸೂರ್ಯವಂಶಿ ಅವರಂತಹ ಆಟಗಾರರನ್ನು ನಾವು 50 ಓವರ್‌ಗಳ ಕ್ರಿಕೆಟ್‌ಗೆ ಆಯ್ಕೆ ಮಾಡದಿದ್ದರೆ, ಅವರ ಪ್ರತಿಭೆಗೆ ಎಲ್ಲೋ ಒಂದು ಹಂತದಲ್ಲಿ ಅನ್ಯಾಯ ಮಾಡಿದಂತಾಗುತ್ತದೆ” ಎಂದು ತಿಳಿಸಿದ್ದಾರೆ.

ಯುವ ಆಟಗಾರರಿಗೆ ಸ್ಥಾನ ಸಿಗುವುದು ಕಷ್ಟ

ಅಭಿಷೇಕ್ ಶರ್ಮಾ ಅವರ ದೀರ್ಘಕಾಲದ ಮಾರ್ಗದರ್ಶಕರಾಗಿರುವ ಯುವರಾಜ್ ಸಿಂಗ್, ತಂಡದಲ್ಲಿ ಹಿರಿಯ ಆಟಗಾರರು ಇರುವುದರಿಂದ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ಸುಲಭವಲ್ಲ ಎಂಬುದನ್ನೂ ಒಪ್ಪಿಕೊಂಡಿದ್ದಾರೆ. “ನಮ್ಮ ತಂಡದಲ್ಲಿ ಅತ್ಯುತ್ತಮ ಆಟಗಾರರಿದ್ದಾರೆ ಎಂಬುದು ನನಗೆ ಗೊತ್ತಿದೆ. ಹೀಗಾಗಿ ಹೊಸ ಆಟಗಾರರಿಗೆ ಸ್ಥಾನ ಕಲ್ಪಿಸುವುದು ಕಷ್ಟವಾಗುತ್ತದೆ. ಆದರೆ ಯುವ ಬ್ಯಾಟರ್‌ಗಳು ಈಗ ಆಡುತ್ತಿರುವ ರೀತಿಯನ್ನು ನೋಡಿದರೆ, ಶೀಘ್ರದಲ್ಲೇ ಅವರಿಗೆ ತಂಡದಲ್ಲಿ ಸ್ಥಾನ ಸಿಗಬಹುದು ಎಂಬ ಭರವಸೆಯಿದೆ. ಅಭಿಷೇಕ್ ಇಂದು ಏನನ್ನು ಸಾಧಿಸಿದ್ದಾರೋ, ಅದು ಅವರ ಕಠಿಣ ಪರಿಶ್ರಮದ ಫಲ. ಅದರ ಸಂಪೂರ್ಣ ಶ್ರೇಯಸ್ಸು ಅವರಿಗೆ ಸಲ್ಲಬೇಕು” ಎಂದು ಯುವರಾಜ್ ಹೇಳಿದ್ದಾರೆ.

ಯುವರಾಜ್ ಮಾರ್ಗದರ್ಶನದಲ್ಲಿ ಬೆಳೆದ ಅಭಿಷೇಕ್

ಅಭಿಷೇಕ್ ಶರ್ಮಾ ಅವರು ಯುವರಾಜ್ ಸಿಂಗ್ ಅವರನ್ನು ತಮ್ಮ ಗುರು ಎಂದೇ ಕರೆಯುತ್ತಾ ಬಂದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅಭಿಷೇಕ್, ತಮ್ಮ ಆಟವನ್ನು ಉತ್ತಮಪಡಿಸಿಕೊಳ್ಳಲು ಯುವರಾಜ್ ಅವರಿಂದ ಸಲಹೆ ಮತ್ತು ಮಾರ್ಗದರ್ಶನ ಪಡೆಯುತ್ತಿದ್ದಾರೆ. ಇಬ್ಬರೂ ಪಂಜಾಬ್ ಮೂಲದವರಾಗಿದ್ದು, ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಟಿ20 ಕ್ರಿಕೆಟ್ ಆರಂಭಿಕ ಹಂತದಲ್ಲಿದ್ದಾಗಲೇ ಯುವರಾಜ್ ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದ್ದರು.

2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿ ಯುವರಾಜ್ ಇತಿಹಾಸ ನಿರ್ಮಿಸಿದ್ದರು. ಈ ಮೂಲಕ ಅವರು ಕೇವಲ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಇದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತೀಯ ಆಟಗಾರನೊಬ್ಬ ದಾಖಲಿಸಿರುವ ಅತಿ ವೇಗದ ಅರ್ಧಶತಕವಾಗಿದೆ.

15 ಎಸೆತಗಳಲ್ಲಿ ಅರ್ಧಶತಕ, 35 ಎಸೆತಗಳಲ್ಲಿ ಶತಕ!

ಇತ್ತೀಚೆಗೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೂಡ ಯುವರಾಜ್ ಅವರ ದಾಖಲೆಯ ಸಮೀಪಕ್ಕೆ ಬಂದಿದ್ದರು. ಅವರು ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಬಳಿಕ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿ ಕೇವಲ 35 ಎಸೆತಗಳಲ್ಲಿ ಶತಕ ದಾಖಲಿಸಿದರು. ಅಭಿಷೇಕ್ ಅರ್ಧಶತಕ ಗಳಿಸಿದ ಬಳಿಕ ಯುವರಾಜ್ ಸಿಂಗ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದರು.

“ನೀನು ಇನ್ನೂ 12 ಎಸೆತಗಳಲ್ಲಿ 50 ರನ್ ಗಳಿಸಲು ಸಾಧ್ಯವಾಗಿಲ್ಲ, ಅಲ್ವಾ @OfficialAbhi04! ಎಂದು ಅಭಿಷೇಕ್ ಶರ್ಮಾ ಅವರನ್ನು ಯುವಿ ಕಾಲೆಳೆದಿದ್ದರು.

'12 ಎಸೆತಗಳಲ್ಲಿ 50 ರನ್ ಗಳಿಸುವುದು ಅಷ್ಟು ಸುಲಭವಲ್ಲ'

ಯುವರಾಜ್ ಅವರ ಈ ಸವಾಲಿನ ರೀತಿಯ ತಮಾಷೆಗೆ ಅಭಿಷೇಕ್ ಕೂಡ ಪ್ರತಿಕ್ರಿಯಿಸಿದ್ದರು. 12 ಎಸೆತಗಳಲ್ಲಿ ಅರ್ಧಶತಕ ಗಳಿಸುವುದು ಅಷ್ಟು ಸುಲಭವಲ್ಲ ಎಂದು ಹೇಳಿರುವ ಅವರು, ಬ್ಯಾಟರ್‌ಗಳು ಇಂತಹ ದಾಖಲೆಗಳನ್ನು ಗುರಿಯಾಗಿಟ್ಟುಕೊಂಡು ಕಣಕ್ಕಿಳಿಯುವುದಿಲ್ಲ ಎಂದಿದ್ದಾರೆ. ಮಂಗಳವಾರ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಆರು ವಿಕೆಟ್‌ಗಳ ಗೆಲುವು ದಾಖಲಿಸಿತ್ತು. ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅಭಿಷೇಕ್, ತಮ್ಮ ಶತಕದ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಪಂದ್ಯದ ಬಳಿಕದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅಭಿಷೇಕ್, “ಆ ಸಮಯದಲ್ಲಿ ಅವರು (ಯುವರಾಜ್) ಯಾವ ರೀತಿಯ ಕ್ರಿಕೆಟ್ ಆಡುತ್ತಿದ್ದರೋ ನನಗೆ ಗೊತ್ತಿಲ್ಲ. ಆದರೆ 12 ಎಸೆತಗಳಲ್ಲಿ 50 ರನ್ ಗಳಿಸುವುದು ಖಂಡಿತವಾಗಿಯೂ ಅಷ್ಟು ಸುಲಭವಲ್ಲ” ಎಂದು ಹೇಳಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

21 ವರ್ಷಗಳಿಂದ ಧೋನಿ ದಾಖಲೆ ಹಾಗೆಯೇ ಇದೆ, ಯಾವ ಕ್ರಿಕೆಟ್ ದೈತ್ಯರಿಂದಲೂ ಬ್ರೇಕ್ ಮಾಡಲು ಆಗಿಲ್ಲ
ಸೂರ್ಯಗೆ ಆದ ಅನುಭವ ಅಯ್ಯರ್‍‌ಗೆ ಪಾಠ ಆಗಬೇಕು, ತಿದ್ದಿಕೊಳ್ಳದಿದ್ದರೆ ಶ್ರೇಯಸ್‌ಗೂ ಅದೇ ಗತಿ