'ಹಾಗೆ ಹೇಳೋಕೆ ಅವನ್ಯಾರು?' ಅರ್ಜುನ್ ತೆಂಡೂಲ್ಕರ್ ಬಗ್ಗೆ ಮಾತಾಡಿದ ಅಶ್ವಿನ್ ಮೇಲೆ ಕೆಂಡ ಕಾರಿದ ಯೋಗರಾಜ್ ಸಿಂಗ್!

Published : Mar 26, 2026, 11:50 AM IST
Arjun Tendulkar with LSG Skipper Rishabh Pant

ಸಾರಾಂಶ

ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್‌ಗೆ ಆಡುವ ಅವಕಾಶ ಸಿಗುವುದಿಲ್ಲ ಎಂಬ ಆರ್. ಅಶ್ವಿನ್ ಹೇಳಿಕೆಗೆ, ಅರ್ಜುನ್ ಕೋಚ್ ಯೋಗರಾಜ್ ಸಿಂಗ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅಶ್ವಿನ್ ಹೇಳಿಕೆ ಅಸಂಬದ್ಧ ಎಂದಿರುವ ಅವರು, ಅರ್ಜುನ್ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಅಶ್ವಿನ್‌ಗೆ ತಿಳಿದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಮುಂಬೈ: ಲಖನೌ ಸೂಪರ್ ಜೈಂಟ್ಸ್ ತಂಡದ ಆಟಗಾರ ಅರ್ಜುನ್ ತೆಂಡೂಲ್ಕರ್‌ಗೆ ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಚಾನ್ಸ್ ಸಿಗಲ್ಲ ಎಂಬ ಆರ್. ಅಶ್ವಿನ್ ಹೇಳಿಕೆಗೆ, ಅರ್ಜುನ್ ಕೋಚ್ ಯೋಗರಾಜ್ ಸಿಂಗ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅಶ್ವಿನ್ ಹೇಳಿದ್ದು ಶುದ್ಧ ಅಸಂಬದ್ಧ, ಇನ್ನೊಬ್ಬರ ಬಗ್ಗೆ ಹೇಗೆ ಮಾತಾಡಬೇಕು ಅಂತ ಮೊದಲು ಕಲಿಯಲಿ ಎಂದು ಯೋಗರಾಜ್ ಸಿಂಗ್ ಕಿಡಿಕಾರಿದ್ದಾರೆ.

ಐಪಿಎಲ್‌ನ ಈ ಸೀಸನ್‌ನಲ್ಲಿ ಲಖನೌ ತಂಡದ ಸಂಭಾವ್ಯ ಪ್ಲೇಯಿಂಗ್ XI ಬಗ್ಗೆ ಮಾತನಾಡುವಾಗ ಅಶ್ವಿನ್, "ಅರ್ಜುನ್ ತೆಂಡೂಲ್ಕರ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗುತ್ತೆ ಅಂತ ನನಗನಿಸಲ್ಲ. ಆ ಯೋಚನೆಯೇ ಬೇಡ. ಮೊಹಮ್ಮದ್ ಶಮಿ, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ಅವೇಶ್ ಖಾನ್ ಅವರಂತಹ ಘಟಾನುಘಟಿ ವೇಗದ ಬೌಲರ್‌ಗಳಿರುವಾಗ ಅರ್ಜುನ್‌ಗೆ ತಂಡದಲ್ಲಿ ಜಾಗ ಸಿಗೋದು ಕಷ್ಟ" ಎಂದು ಅಶ್ವಿನ್ ಹೇಳಿದ್ದರು.

ಅಶ್ವಿನ್ ಮೇಲೆ  ಕಿಡಿಕಾರಿದ ಯೋಗರಾಜ್ ಸಿಂಗ್

ಆದರೆ, ಇದಕ್ಕೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆಯೂ ಆಗಿರುವ ಯೋಗರಾಜ್ ಸಿಂಗ್ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. "ಅಶ್ವಿನ್ ಯಾರೇ ಆಗಿರಲಿ, ಅವರು ಹೇಳಿದ್ದು ಶುದ್ಧ ಅಸಂಬದ್ಧ. ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಕನಿಷ್ಠ ಮರ್ಯಾದೆ ಇರಬೇಕು. ಟಿವಿಯಲ್ಲಿ ಕೂತುಕೊಂಡು ಅವನಿಂದ ಅದು ಸಾಧ್ಯವಿಲ್ಲ, ಇದು ಸಾಧ್ಯವಿಲ್ಲ ಅಂತ ಹೇಳೋಕೆ ನೀನ್ಯಾರು? ಅವನು ಸಚಿನ್ ತೆಂಡೂಲ್ಕರ್ ಮಗ ಅನ್ನೋದು ಬೇರೆ ವಿಷಯ. ಅವನು ಬರೀ ಬೌಲರ್ ಅಲ್ಲ, ಅವನ ಬ್ಯಾಟಿಂಗ್ ಸಾಮರ್ಥ್ಯವನ್ನು ಅಶ್ವಿನ್ ಇನ್ನೂ ನೋಡಿಲ್ಲ" ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ.

ಈ ಬಾರಿ ಮುಂಬೈ ಇಂಡಿಯನ್ಸ್‌ನಿಂದ ಟ್ರೇಡ್ ಮೂಲಕ ಅರ್ಜುನ್ ಲಖನೌ ತಂಡಕ್ಕೆ ಬಂದಿದ್ದಾರೆ. ಇವರ ಬದಲಿಗೆ ಶಾರ್ದೂಲ್ ಠಾಕೂರ್ ಅವರನ್ನು ಮುಂಬೈ ತಂಡ ಪಡೆದುಕೊಂಡಿದೆ. ಅರ್ಜುನ್ ಇದುವರೆಗೆ ಐದು ಐಪಿಎಲ್ ಪಂದ್ಯಗಳನ್ನು ಆಡಿದ್ದು, ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ, ಈ ಸೀಸನ್‌ನ ದೇಶೀಯ ಕ್ರಿಕೆಟ್‌ನಲ್ಲಿ ಗೋವಾ ಪರ ಅಷ್ಟೇನೂ ಉತ್ತಮ ಪ್ರದರ್ಶನ ನೀಡಿಲ್ಲ. ವಿಜಯ್ ಹಜಾರೆ ಟ್ರೋಫಿ ಮತ್ತು ರಣಜಿ ಟ್ರೋಫಿಯಲ್ಲಿ ಅವರದ್ದು ಸಾಧಾರಣ ಪ್ರದರ್ಶನವಾಗಿತ್ತು.

ಅರ್ಜುನ್ ಸಾಮರ್ಥ್ಯದ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿರುವ ಯೋಗರಾಜ್ ಸಿಂಗ್, ಹಿಂದೆ ಯುವರಾಜ್ ಸಿಂಗ್‌ಗೆ ತರಬೇತಿ ನೀಡಿದಷ್ಟೇ ಗಂಭೀರವಾಗಿ ಅರ್ಜುನ್‌ಗೂ ತರಬೇತಿ ನೀಡುತ್ತಿದ್ದಾರೆ. ಅಶ್ವಿನ್ ಮಾತಿಗೆ ಅರ್ಜುನ್ ಮೈದಾನದಲ್ಲೇ ಉತ್ತರ ನೀಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

ಮಾರ್ಚ್ 28ರಿಂದ ಐಪಿಎಲ್ ಆರಂಭ

19ನೇ ಸೀಸನ್ ಐಪಿಎಲ್ ಟೂರ್ನಿಯು ಇದೇ ಮಾರ್ಚ್ 28ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಈಗಾಗಲೇ ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಸೋಲ್ಡೌಟ್ ಆಗಿವೆ.

ಇನ್ನು ರಿಷಭ್ ಪಂತ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು ಏಪ್ರಿಲ್ 01ರಂದು ಡೆಲ್ಲಿ ಕ್ಯಾಪಿಟಲ್ಸ್ ಎದುರು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯವು ಲಖನೌದ ಏಕಾನಾ ಮೈದಾನದಲ್ಲಿ ನಡೆಯಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟೀಕಿಸಿದವರ ಎದುರೇ ಬೆಳೆದ ಆರ್‌ಸಿಬಿ ನನ್ನ ಡಿಎನ್‌ಎ ಭಾಗ, ರಾಯಲ್ ಚಾಲೆಂಜರ್ಸ್ ಹುಚ್ಚುತನ ಇಂದು 37 ಪಟ್ಟು ಬೆಳೆದಿದೆ: ಮಲ್ಯ ಟ್ವೀಟ್
ಶೇನ್ ವಾರ್ನ್ 'ಮಾಸ್ಟರ್ ಸ್ಟ್ರೋಕ್': ದಿಗ್ಗಜ ಸ್ಪಿನ್ನರ್ ಸಣ್ಣ ಹೂಡಿಕೆಯಿಂದಾಗಿ ಇಂದು ಅವರ ಕುಟುಂಬಕ್ಕೆ ಸಿಗಲಿದೆ ₹450 ಕೋಟಿ!