ಸಾಕಷ್ಟು ಅಳೆದು-ತೂಗಿ ಆಟಗಾರ್ತಿಯರನ್ನು ಖರೀದಿಸಿದ ಆರ್‌ಸಿಬಿ ಫ್ರಾಂಚೈಸಿ
5 ಆಟಗಾರ್ತಿಯರ ಖರೀದಿಗೆ ಮುಕ್ಕಾಲು ಬಜೆಟ್ ಮೀಸಲಿಟ್ಟ ಬೆಂಗಳೂರು ಫ್ರಾಂಚೈಸಿ
ಬೆಂಗಳೂರು ತಂಡ ಕೂಡಿಕೊಂಡ ಟಿ20 ಸ್ಪೆಷಲಿಸ್ಟ್‌ಗಳು
ಬೆಂಗಳೂರು(ಫೆ.14): ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಆರ್‌ಸಿಬಿಯ ತಂತ್ರಗಾರಿಕೆ ಎಲ್ಲರನ್ನೂ ಅಚ್ಚರಿಗೊಳಿಸಿತು. ಮೊದಲು ಮುಂಬೈ ಜೊತೆ ಪೈಪೋಟಿ ನಡೆಸಿ ಸ್ಮೃತಿ ಮಂಧನಾರನ್ನು ಖರೀದಿಸಿದ ಆರ್‌ಸಿಬಿ, ಬಳಿಕ ನ್ಯೂಜಿಲೆಂಡ್ ನಾಯಕಿ ಸೋಫಿ ಡಿವೈನ್‌ರನ್ನು ಮೂಲಬೆಲೆ 50 ಲಕ್ಷ ರು.ಗೆ ತನ್ನ ತೆಕ್ಕೆಗೆ ಹಾಕಿಕೊಂಡಿತು. ಇದಾದ ಮೇಲೆ ಆಸ್ಪ್ರೇಲಿಯಾದ ದಿಗ್ಗಜೆ ಎಲೈಸಿ ಪೆರ್ರಿಯನ್ನು 1.7 ಕೋಟಿ ರು. ನೀಡಿ ಖರೀದಿಸಿದ ಆರ್‌ಸಿಬಿ, 3 ಆಟಗಾರ್ತಿಯರ ಮೇಲೆ ಅಂದಾಜು 6 ಕೋಟಿ ರು. ಖರ್ಚು ಮಾಡಿತು.
ಇಷ್ಟಕ್ಕೆ ನಿಲ್ಲಿಸದ ಆರ್‌ಸಿಬಿ ಆಕ್ರಮಣಕಾರಿ ಬಿಡ್ಡಿಂಗ್ ಮುಂದುವರಿಸಿ, ಭಾರತದ ತಾರಾ ವೇಗಿ, ಐಸಿಸಿ ವರ್ಷದ ಉದಯೋನ್ಮುಖ ಆಟಗಾರ್ತಿ ರೇಣುಕಾ ಸಿಂಗ್‌ರನ್ನು 1.5 ಕೋಟಿ ರು.ಗೆ ಖರೀದಿಸಿದ ತಂಡ, ಆ ನಂತರ ಯುವ ವಿಕೆಟ್ ಕೀಪರ್, ಸ್ಫೋಟಕ ಬ್ಯಾಟರ್ ರಿಚಾ ಘೋಷ್‌ಗೆ 1.9 ಕೋಟಿ ರು. ನೀಡಿತು. ಐವರು ಆಟಗಾರ್ತಿಯರ ಖರೀದಿಗೇ 9 ಕೋಟಿ ರು. ಖರ್ಚಾಯಿತು. ಉಳಿದ 3 ಕೋಟಿ ರು.ಗಳಲ್ಲಿ 10 ಆಟಗಾರ್ತಿಯರನ್ನು ಖರೀದಿಸಿತು.
ಸ್ಮೃತಿಗೆ ಭಾರೀ ಡಿಮ್ಯಾಂಡ್!
ಹರಾಜು ಆರಂಭವಾಗಿದ್ದೇ ಸ್ಮೃತಿ ಮಂಧನಾ ಹೆಸರಿನಿಂದ. ಮುಂಬೈ ಹಾಗೂ ಆರ್‌ಸಿಬಿ ಫ್ರಾಂಚೈಸಿಗಳು ಸ್ಮೃತಿಯನ್ನು ಖರೀದಿಸಲು ಪೈಪೋಟಿಗೆ ಬಿದ್ದವು. ನೋಡನೋಡುತ್ತಿದ್ದಂತೆ ಬಿಡ್ 3 ಕೋಟಿ ರು. ತಲುಪಿತು. 3.20 ಕೋಟಿ ರು.ಗೆ ಮುಂಬೈ ಬಿಡ್ ನಿಲ್ಲಿಸಿದರೆ, ಆರ್‌ಸಿಬಿ 3.4 ಕೋಟಿ ರು.ಗೆ ಖರೀದಿ ಮಾಡಿತು.
ಜೆರ್ಸಿ ನಂ.18 ಬಗ್ಗೆ ಆರ್‌ಸಿಬಿ ಒಲವು!
ಆರ್‌ಸಿಬಿ ಫ್ರಾಂಚೈಸಿಯು 18 ಸಂಖ್ಯೆಯ ಜೆರ್ಸಿ ಬಗ್ಗೆ ತುಂಬಾ ಒಲವು ಹೊಂದಿದಂತಿದ್ದು, ವಿರಾಟ್ ಕೊಹ್ಲಿ ಬಳಿಕ ಸ್ಮೃತಿ ಮಂಧನಾ ಅವರನ್ನೂ ತಂಡಕ್ಕೆ ಸೇರಿಸಿಕೊಂಡಿದೆ. ಇವರಿಬ್ಬರ ಜೆರ್ಸಿ ನಂ.18 ಎನ್ನುವುದು ವಿಶೇಷ. ಮಂಧನಾರನ್ನು ಆರ್‌ಸಿಬಿ ಖರೀದಿಸಿದ ಬೆನ್ನಲ್ಲೇ ಸಾಮಾಜಿಕ ತಾಣಗಳಲ್ಲಿ ಕಿಂಗ್ ಮತ್ತು ಕ್ವೀನ್, ನಂ.18 ಜೆರ್ಸಿ ಹಾಗೂ ಇವರಿಬ್ಬರನ್ನು ಹೋಲಿಕೆ ಮಾಡುವ ಹಲವು ಫೋಟೋಗಳು ಟ್ರೆಂಡ್ ಆಗಿವೆ.
WPL Auction: ಸ್ಮೃತಿ ಮಂಧನಾ, ರಿಚಾ ಘೋಷ್ ಸೇರಿದಂತೆ ಬಲಿಷ್ಠ ಮಹಿಳಾ ತಂಡವನ್ನು ಕಟ್ಟಿದ RCB..!
ಆರ್‌ಸಿಬಿ ಸೇರಿದವರಿವರು:
ಸ್ಮೃತಿ ಮಂಧನಾ .3.4 ಕೋಟಿ ರುಪಾಯಿ, ರಿಚಾ ಘೋಷ್ 1.9 ಕೋಟಿ ರುಪಾಯಿ, ಎಲೈಸಿ ಪೆರ್ರಿ 1.7 ಕೋಟಿ ರುಪಾಯಿ, ರೇಣುಕಾ ಸಿಂಗ್ 1.5 ಕೋಟಿ ರುಪಾಯಿ, ಸೋಫಿ ಡಿವೈನ್ 50 ಲಕ್ಷ ರುಪಾಯಿ, ಹೀಥರ್ ನೈಟ್ 40 ಲಕ್ಷ ರುಪಾಯಿ, ಮೇಗನ್ ಶುಟ್ 40 ಲಕ್ಷ ರುಪಾಯಿ, ಕನಿಕಾ ಅಹುಜಾ 35 ಲಕ್ಷ ರುಪಾಯಿ, ವಾನ್ ನೀಕಕ್ 30 ಲಕ್ಷ ರುಪಾಯಿ, ಎರಿನ್ ಬರ್ನ್ಸ್ 30 ಲಕ್ಷ ರುಪಾಯಿ, ಪ್ರೀತಿ ಬೋಸ್ 30 ಲಕ್ಷ ರುಪಾಯಿ, ಕೋಮಲ್ ಜಂಜದ್ 25 ಲಕ್ಷ ರುಪಾಯಿ, ಆಶಾ ಶೋಭನಾ 10 ಲಕ್ಷ ರುಪಾಯಿ, ದಿಶಾ ಕಸಟ್ 10 ಲಕ್ಷ ರುಪಾಯಿ, ಇಂದ್ರಾನಿ ರಾಯ್ 10 ಲಕ್ಷ ರುಪಾಯಿ, ಪೂನಂ ಕೆಮ್ನರ್ 10 ಲಕ್ಷ ರುಪಾಯಿ, ಸಹನಾ ಪವಾರ್ 10 ಲಕ್ಷ ರುಪಾಯಿ, ಶ್ರೇಯಾಂಕಾ ಪಾಟೀಲ್ 10 ಲಕ್ಷ ರುಪಾಯಿ.
The RCB squad for WPL. pic.twitter.com/1DbHxoSEtW
— Mufaddal Vohra (@mufaddal_vohra)ಹೋಟೆಲಲ್ಲೇ ಹರಾಜು ವೀಕ್ಷಿಸಿದ ಮಹಿಳಾ ತಂಡ
ಟಿ20 ವಿಶ್ವಕಪ್ ಆಡಲು ದಕ್ಷಿಣ ಆಫ್ರಿಕಾದಲ್ಲಿರುವ ಭಾರತ ಮಹಿಳಾ ತಂಡದ ಆಟಗಾರ್ತಿಯರು ಅಲ್ಲಿನ ಹೋಟೆಲ್ನಲ್ಲಿ ಕುಳಿತು ಹರಾಜು ಪ್ರಕ್ರಿಯೆಯನ್ನು ವೀಕ್ಷಿಸಿದರು. ಆಟಗಾರ್ತಿಯರು ವಿವಿಧ ತಂಡಗಳಿಗೆ ಬಿಕರಿಯಾದಾಗ ಒಟ್ಟಾಗಿ ಸಂಭ್ರಮಿಸುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಅದರಲ್ಲೂ ಆರಂಭದಲ್ಲೇ ಸ್ಮೃತಿ ದೊಡ್ಡ ಮೊತ್ತಕ್ಕೆ ಬಿಕರಿಯಾಗುತ್ತಿದ್ದಂತೆ ಆಟಗಾರ್ತಿಯರು ಕುಣಿದು ಸಂಭ್ರಮಿಸಿದರು.