
ಬೆಂಗಳೂರು(ಮಾ.04): ಸಾಕಷ್ಟು ವರ್ಷಗಳ ಕಾಯುವಿಕೆಯ ಬಳಿಕ ಕೊನೆಗೂ ಮಹಿಳಾ ಐಪಿಎಲ್ ಟೂರ್ನಿಗೆ ವೇದಿಕೆ ಸಜ್ಜಾಗಿದೆ. ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಇಂದಿನಿಂದ(ಮಾ.04) ಆರಂಭವಾಗಲಿದ್ದು, ನವಿ ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಕಾದಾಡಲಿವೆ.
ಹರ್ಮನ್‌ಪ್ರೀತ್ ಕೌರ್ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದರೆ, ಆಸ್ಟ್ರೇಲಿಯಾದ ಬೆಥ್ ಮೂನಿ ಗುಜರಾತ್ ಜೈಂಟ್ಸ್ ತಂಡದ ಸಾರಥ್ಯ ವಹಿಸಿದ್ದಾರೆ. ಸಾಕಷ್ಟು ತಾರಾ ಆಟಗಾರ್ತಿಯರನ್ನೊಳಗೊಂಡ ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್, ಯಾಶ್ತಿಕಾ ಭಾಟಿಯಾ, ಹರ್ಲಿನ್ ಡಿಯೋಲ್, ಸ್ನೆಹ್ ರಾಣಾ ಮಾತ್ರವಲ್ಲದೇ, ನಥಾಲಿ ಶೀವರ್ ಬ್ರಂಟ್, ಅಮೆಲಿಯಾ ಕೆರ್, ಬೆಥ್ ಮೂನಿ, ಆಶ್ಲೆ ಗಾರ್ಡ್ನರ್ ಅವರಂತಹ ಬಲಾಢ್ಯ ಟಿ20 ಸ್ಪೆಷಲಿಸ್ಟ್ ಆಟಗಾರ್ತಿಯರು ಮೊದಲ ಪಂದ್ಯದಲ್ಲೇ ಮಿಂಚಲು ಸಜ್ಜಾಗಿದ್ದಾರೆ.
ಐದು ತಂಡಗಳು ಚೊಚ್ಚಲ ಆವೃತ್ತಿಯ WPL ಟ್ರೋಫಿ ಮೇಲೆ ಕಣ್ಣಿಟ್ಟಿದ್ದು, ಈ ಬಾರಿ ಯಾವ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎನ್ನುವುದನ್ನು ಈಗಲೇ ಊಹಿಸುವುದು ಕಷ್ಟ ಸಾಧ್ಯವಾದ ವಿಚಾರ. ಯಾಕೆಂದರೇ ಮೇಲ್ನೋಟಕ್ಕೆ ಎಲ್ಲಾ ತಂಡಗಳು ಸದೃಢವಾಗಿಯೇ ಗುರುತಿಸಿಕೊಂಡಿವೆ.
ಇನ್ನು ಮೊದಲ ಪಂದ್ಯದಲ್ಲಿ ಯಾರು ಗೆಲ್ಲಬಹುದು ಎನ್ನುವುದನ್ನು ನೋಡುವುದಾದರೇ, ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ಮೇಲ್ನೋಟಕ್ಕೆ ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಹಾಗಂತ ಬೆಥ್ ಮೂನಿ ನೇತೃತ್ವದ ಗುಜರಾತ್ ಜೈಂಟ್ಸ್ ತಂಡವನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ.
ಸದ್ಯ ಗುಜರಾತ್ ಜೈಂಟ್ಸ್ ತಂಡದಲ್ಲಿ ಅನುಭವಿ ಭಾರತೀಯ ಆಟಗಾರ್ತಿಯರ ಕೊರತೆ ತಂಡಕ್ಕೆ ಕೊಂಚ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ. ಯಾಕೆಂದರೆ, ತಂಡದಲ್ಲಿ ಎಸ್ ಮೇಘನಾ, ಹರ್ಲಿನ್ ಡಿಯೋಲ್ ಮತ್ತು ಸ್ನೆಹ್ ರಾಣಾ ಅವರಂತಹ ಆಟಗಾರ್ತಿಯರಿದ್ದರೂ ಸಹಾ, ರಾಷ್ಟ್ರೀಯ ತಂಡದಲ್ಲಿ ಭದ್ರವಾಗಿ ನೆಲೆ ಕಂಡುಕೊಳ್ಳಲು ವಿಫಲವಾಗಿದ್ದಾರೆ. ಮುಂಬೈನಂತಹ ಬಲಿಷ್ಠ ತಂಡದ ಎದುರು ಗೆಲುವು ದಾಖಲಿಸಬೇಕಿದ್ದರೂ ಗುಜರಾತ್ ಜೈಂಟ್ಸ್ ಪಡೆಯು ಸಾಕಷ್ಟು ಬೆವರು ಹರಿಸಬೇಕಿದೆ.
WPL 2023: ಮುಂಬೈ ಇಂಡಿಯನ್ಸ್-ಗುಜರಾತ್ ಜೈಂಟ್ಸ್ ನಡುವಿನ ಉದ್ಘಾಟನಾ ಪಂದ್ಯ ಕೊಂಚ ತಡವಾಗಿ ಆರಂಭ..!
ಇನ್ನೊಂದೆಡೆ ಗುಜರಾತ್ ಜೈಂಟ್ಸ್‌ಗಿಂತ ಮುಂಬೈ ಇಂಡಿಯನ್ಸ್ ಸಾಕಷ್ಟು ಸಮತೋಲಿತವಾಗಿ ಕಂಡು ಬರುತ್ತಿದೆ. ಮುಂಬೈ ತಂಡದ ಎಲ್ಲಾ ವಿಭಾಗದಲ್ಲೂ ಸಾಕಷ್ಟು ಮ್ಯಾಚ್ ವಿನ್ನರ್‌ಗಳಿದ್ದಾರೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ಮಾತ್ರವಲ್ಲದೇ, ಆಲ್ರೌಂಡರ್ ಪೂಜಾ ವಸ್ತ್ರಾಕರ್ ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಕ್ಷಮತೆ ಹೊಂದಿದ್ದಾರೆ.
ಯಾಶ್ತಿಕಾ ಭಾಟಿಯಾ, ಹೀಲಿ ಮ್ಯಾಥ್ಯೂಸ್ ಮಾತ್ರವಲ್ಲದೇ ನಥಾಲಿ ಶೀವರ್ ಬ್ರಂಟ್ ಕೂಡಾ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಆಸರೆಯಾಗುವ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್ ವಿಭಾಗ ಕೊಂಚ ದುರ್ಬಲವಾಗಿರುವಂತೆ ಕಂಡು ಬಂದಿದ್ದರೂ, ಆಲ್ರೌಂಡರ್‌ಗಳು ಆ ಕೊರತೆ ನೀಗಿಸುವ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಹರ್ಮನ್‌ಪ್ರೀತ್ ಕೌರ್ ಪಡೆ ತಮ್ಮ ಸಾಮರ್ಥ್ಯಕ್ಕೆ ತಕ್ಕಂತ ಪ್ರದರ್ಶನವನ್ನು ನೀಡಿದ್ದೇ ಆದಲ್ಲಿ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗೆಲುವಿನೊಂದಿಗೆ ಶುಭಾರಂಭ ಮಾಡುವ ಸಾಧ್ಯತೆಯಿದೆ.
ಸಂಭಾವ್ಯ ತಂಡಗಳು ಹೀಗಿವೆ
ಮುಂಬೈ ಇಂಡಿಯನ್ಸ್:
ಯಾಶ್ತಿಕಾ ಭಾಟಿಯಾ(ವಿಕೆಟ್ ಕೀಪರ್), ಹೀಲೆ ಮ್ಯಾಥ್ಯೂಸ್, ನಥಾಲಿ ಶೀವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್(ನಾಯಕಿ), ಧಾರಾ ಗುಜ್ಜರ್, ಅಮೆಲಿಯಾ ಕೆರ್ರ್, ಪೂಜಾ ವಸ್ತ್ರಾಕರ್, ಅಮನ್‌ಜೋತ್ ಕೌರ್, ಜಿಂತಿಮನಿ ಕಲಿತಾ, ಇಸ್ಸೆ ವಾಂಗ್, ಸೋನಂ ಯಾದವ್.
ಗುಜರಾತ್ ಜೈಂಟ್ಸ್:
ಬೆಥ್ ಮೂನಿ(ನಾಯಕಿ, ವಿಕೆಟ್ ಕೀಪರ್), ಶಬ್ಬಿನೇನಿ ಮೆಘನಾ, ಹರ್ಲಿನ್ ಡಿಯೋಲ್, ಆಶ್ಲೆ ಗಾರ್ಡ್ನರ್, ಡಿ ಹೇಮಲತಾ, ಕಿಮ್ ಗೆರತ್, ಅನಾಬೆಲ್ಲಾ ಸದರ್‌ಲೆಂಡ್, ಸ್ನೆಹ್ ರಾಣಾ, ಅಶ್ವಿನಿ ಕುಮಾರಿ, ಮಾನ್ಸಿ ಜೋಶಿ, ತನುಜಾ ಕನ್ವರ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.