
ದುಬೈ(ಫೆ.08): ಬಹುನಿರೀಕ್ಷಿತ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಯಾವಾಗ ಎನ್ನುವ ಕುತೂಹಲಕ್ಕೆ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ತೆರೆ ಎಳೆದಿದೆ. ಎರಡನೇ ಆವೃತ್ತಿಯ ಟೆಸ್ಟ್ ವಿಶ್ವಕಪ್ ಫೈನಲ್ ಪಂದ್ಯವು ಜೂನ್ 07ರಿಂದ 11ರ ವರೆಗೆ ಲಂಡನ್‌ನ ದಿ ಓವಲ್ ಮೈದಾನದಲ್ಲಿ ಜರುಗಲಿದೆ. ಜೂನ್ 12ರಂದು ಒಂದು ದಿನ ಮೀಸಲು ದಿನವನ್ನು ನಿಗದಿ ಪಡಿಸಲಾಗಿದೆ. 2021ರಲ್ಲಿ ಸೌಥಾಂಪ್ಟನ್‌ನಲ್ಲಿ ನಡೆದ ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿ ನ್ಯೂಜಿಲೆಂಡ್ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು.
ಸದ್ಯ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು 75.56% ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಇನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, 58.93% ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇದೀಗ ಉಭಯ ತಂಡಗಳು ಫೆಬ್ರವರಿ 09ರಿಂದ ಆರಂಭವಾಗಲಿರುವ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಕಾದಾಡಲಿವೆ. ಈ ಸರಣಿಯಲ್ಲಿ ಹೊರಬೀಳುವ ಫಲಿತಾಂಶವು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಕಾದಾಡುವ ತಂಡಗಳು ಯಾವುವು ಎನ್ನುವುದನ್ನು ತೀರ್ಮಾನಿಸಲಿದೆ.
ಇನ್ನು ಈ ಕುರಿತಂತೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್, "ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವನ್ನಾಡುವುದು, ನಮ್ಮ ತಂಡದ ಪಾಲಿಗೆ ದೊಡ್ಡ ಸ್ಪೂರ್ತಿಯಾಗಲಿದೆ. ಕಳೆದ ಬಾರಿ ಫೈನಲ್ ಆಡುವ ಅವಕಾಶದಿಂದ ವಂಚಿತರಾಗಿದ್ದೆವು, ಈಗ ಮತ್ತೆ ಈ ಅವಕಾಶವನ್ನು ಕಳೆದುಕೊಳ್ಳಲು ಬಯಸುವುದಿಲ್ಲ" ಎಂದು ಹೇಳಿದ್ದರು.
"ದ ಓವೆಲ್‌ನಂತಹ ತಟಸ್ಥ ಸ್ಥಳದಲ್ಲಿ ಎರಡು ತಂಡಗಳು ಫೈನಲ್‌ನಲ್ಲಿ ಕಣಕ್ಕಿಳಿಯುವುದು ಬೇರೆಯದ್ದೇ ರೀತಿಯ ಅನುಭವವಾಗಿರುತ್ತದೆ. ನಾವಂತೂ ಫೈನಲ್ ಆಡಲು ಉತ್ಸುಕರಾಗಿದ್ದೇವೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡಬೇಕೆನ್ನುವುದು ನಮ್ಮ ಬಹುಕಾಲದ ಗುರಿಯಾಗಿದ್ದು, ನಾವು ಫೈನಲ್ ಆಡುವ ವಿಶ್ವಾಸದಲ್ಲಿದ್ದೇವೆ. ಫೈನಲ್ ಆಡಿದರೆ, ಇದು ನಮ್ಮ ಆಟಗಾರರು ಹಾಗೂ ಸಿಬ್ಬಂದಿಗಳಿಗೆ ತಕ್ಕ ಪ್ರತಿಫಲ ಸಿಕ್ಕಂತಾಗುತ್ತದೆ" ಎಂದು ಪ್ಯಾಟ್ ಕಮಿನ್ಸ್ ಅಭಿಪ್ರಾಯಪಟ್ಟಿದ್ದಾರೆ.
Nagpur Test: ಮೊದಲ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ, ಸೂರ್ಯನಿಗೆ ಸಿಗುತ್ತಾ ಸ್ಥಾನ?
ಇನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡಾ ತಮ್ಮ ತಂಡವನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಕೊಂಡೊಯ್ಯುವ ವಿಶ್ವಾಸದಲ್ಲಿದ್ದಾರೆ. ಆಸೀಸ್ ಎದುರು ಉತ್ತಮ ಪ್ರದರ್ಶನ ತೋರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ರೋಹಿತ್ ಶರ್ಮಾ ಎದುರು ನೋಡುತ್ತಿದ್ದಾರೆ.
"ಭಾರತ ಕ್ರಿಕೆಟ್ ತಂಡವನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನಾಯಕನಾಗಿ ಮುನ್ನಡೆಸುವುದು ನಿಜಕ್ಕೂ ವಿಶೇಷ ಅನುಭವ. ನಾವು ಈ ಸ್ಪರ್ಧೆಯಲ್ಲಿ ಒಂದು ತಂಡವಾಗಿ ಸಾಕಷ್ಟು ಬೆಳೆದಿದ್ದೇವೆ. ಜೂನ್‌ನಲ್ಲಿ ದ ಓವೆಲ್ ಮೈದಾನದಲ್ಲಿ ನಡೆಯಲಿರುವ ಫೈನಲ್ ಗೆದ್ದು ಐಸಿಸಿ ಮೇಸ್ ಎತ್ತಿ ಹಿಡಿಯಲು ಎದುರು ನೋಡುತ್ತಿದ್ದೇವೆ. ಇದಕ್ಕಾಗಿ ಆಸ್ಟ್ರೇಲಿಯಾ ಸವಾಲನ್ನು ಮೆಟ್ಟಿನಿಲ್ಲಬೇಕು ಎನ್ನುವ ಅರಿವು ನಮಗಿದೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಆಸ್ಟ್ರೇಲಿಯಾ, ಭಾರತ ಮಾತ್ರವಲ್ಲದೇ ಶ್ರೀಲಂಕಾ(53.33%) ಹಾಗೂ ದಕ್ಷಿಣ ಆಫ್ರಿಕಾ(48.72%) ಕೂಡಾ ಎರಡನೇ ಆವೃತ್ತಿಯ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಲ್ಲಿವೆ. ಶ್ರೀಲಂಕಾ ತಂಡವು ತವರಿನಾಚೆ ನ್ಯೂಜಿಲೆಂಡ್ ಎದುರು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಇನ್ನೊಂದೆಡೆ ದಕ್ಷಿಣ ಆಫ್ರಿಕಾ ತಂಡವು ತವರಿನಲ್ಲಿ ವೆಸ್ಟ್ ಇಂಡೀಸ್ ಎದುರು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.
ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಲು ಏನು ಮಾಡಬೇಕು..?:
ಟೀಂ ಇಂಡಿಯಾ ತವರಿನಲ್ಲಿ ಆಸ್ಟ್ರೇಲಿಯಾ ಎದುರು 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನಾಡಲಿದ್ದು, ಈ ಸರಣಿಯನ್ನು ಟೀಂ ಇಂಡಿಯಾ ಒಂದಕ್ಕಿಂತ ಹೆಚ್ಚು ಪಂದ್ಯವನ್ನು ಸೋಲದೇ 3-1, 2-1 ಅಂತರದಲ್ಲಿ ಜಯಿಸಿದರೆ ಸಾಕು, ಅನಾಯಾಸವಾಗಿ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.