* ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭ
* ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿ
* ನನ್ನ ಪಾಲಿಗಿದು ವಿಶ್ವಕಪ್ ಫೈನಲ್ ಎಂದು ಬಣ್ಣಿಸಿದ ಕಿವೀಸ್ ವೇಗಿ ನೀಲ್ ವ್ಯಾಗ್ನರ್
ಲಂಡನ್(ಮೇ.31): ಮುಂಬರುವ ಭಾರತ ವಿರುದ್ದದ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನನ್ನ ಪಾಲಿಗೆ ವಿಶ್ವಕಪ್ ಫೈನಲ್ ಇದ್ದಂತೆ ಎಂದು ಸೀಮಿತ ಓವರ್‌ಗಳ ಕ್ರಿಕೆಟ್ ಆಡದ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ವೇಗದ ಬೌಲರ್ ನೀಲ್ ವ್ಯಾಗ್ನರ್ ಅಭಿಪ್ರಾಯ ಪಟ್ಟಿದ್ದಾರೆ.
ಹೌದು, ಇದು ನನ್ನ ಪಾಲಿಗೆ ವಿಶ್ವಕಪ್ ಫೈನಲ್ ಇದ್ದಂತೆ. ನಾನು ನ್ಯೂಜಿಲೆಂಡ್ ತಂಡದ ಪರ ಏಕದಿನ ಕ್ರಿಕೆಟ್ ಅಥವಾ ಟಿ20 ಕ್ರಿಕೆಟ್ ಆಡಿಲ್ಲ ಎನ್ನುವುದೇ ನನ್ನ ಪಾಲಿನ ಅತಿದೊಡ್ಡ ನಿರಾಸೆಯ ಕ್ಷಣ ಎಂದು ಕಿವೀಸ್ ಅನುಭವಿ ವೇಗಿ ನೀಲ್ ವ್ಯಾಗ್ನರ್ 'ಇಎಸ್‌ಪಿಎನ್ ಕ್ರಿಕ್‌ಇನ್ಫೋ'ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಏಕದಿನ ಕ್ರಿಕೆಟ್ ಆಡುವ ಹಡಗು ಬಹುತೇಕ ಹೊರಟಾಗಿದೆ. ಮತ್ತೆ ಆ ಅವಕಾಶ ಸಿಗುತ್ತದೆ ಎಂದು ನನಗನಿಸುತ್ತಿಲ್ಲ. ಹೀಗಾಗಿ ನಾನು ನನ್ನೆಲ್ಲ ಗಮನ ಹಾಗೂ ಶ್ರಮವನ್ನು ಟೆಸ್ಟ್ ಕ್ರಿಕೆಟ್ ಮೇಲೆ ಹಾಕಿದ್ದೇನೆ. ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಲೇ ನನ್ನ ಪಾಲಿಗೆ ವಿಶ್ವಕಪ್ ಫೈನಲ್ ಇದ್ದಂತೆ ಎಂದು 35 ವರ್ಷದ ವೇಗಿ ವ್ಯಾಗ್ನರ್ ಹೇಳಿದ್ದಾರೆ.
ಟೆಸ್ಟ್ ಚಾಂಪಿಯನ್‌ಶಿಪ್ ಡ್ರಾ/ ಟೈ ಆದ್ರೆ ಏನಾಗುತ್ತೆ? ಕುತೂಹಲಕ್ಕೆ ತೆರೆ ಎಳೆದ ಐಸಿಸಿ
ಕಳೆದ ಮಾರ್ಚ್ ತಿಂಗಳಿನಲ್ಲಿ ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದೇ ರೀತಿಯ ಮಾತುಗಳನ್ನು ಆಡಿದ್ದರು. ಯಾರೆಲ್ಲ ಇನ್ನು ಮುಂದೆ ಸೀಮಿತ ಓವರ್‌ಗಳ ಕ್ರಿಕೆಟ್ ಆಡುವುದಿಲ್ಲವೋ ಅವರೆಲ್ಲರ ಪಾಲಿಗೆ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಎನ್ನುವುದು ವಿಶ್ವಕಪ್ ಫೈನಲ್ ಇದ್ದಂತೆ ಎಂದು ಬಣ್ಣಿಸಿದ್ದರು.
ಇದೇ ರೀತಿಯ ಮಾತುಗಳನ್ನು ಟೀಂ ಇಂಡಿಯಾ ವೇಗಿಗಳಾದ ಇಶಾಂತ್ ಶರ್ಮಾ, ಉಮೇಶ್ ಯಾದವ್, ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಸಹ ಪುನರುಚ್ಚರಿಸಿದ್ದರು.
ಬಹುನಿರೀಕ್ಷಿತ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ಜೂನ್ 18ರಿಂದ ಆರಂಭವಾಗಲಿದ್ದು, ಪ್ರಶಸ್ತಿಗಾಗಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಸೌಥಾಂಪ್ಟನ್ ಮೈದಾನ ಆತಿಥ್ಯವನ್ನು ವಹಿಸಲಿದೆ. ಈ ಟೆಸ್ಟ್ ಪಂದ್ಯವು ಒಂದು ವೇಳೆ ಟೈ ಅಥವಾ ಡ್ರಾ ಆದರೆ ಎರಡು ತಂಡಗಳು ಚಾಂಪಿಯನ್ ಎಂದು ಘೋಷಿಸಲಾಗುವುದು ಎಂದು ಐಸಿಸಿ ತಿಳಿಸಿದೆ.