ಮಾಜಿ ನಾಯಕ ವಿರಾಟ್ ಕೊಹ್ಲಿ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಟೀಮ್ ಇಂಡಿಯಾ, ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನಾಲ್ಕನೇ ಗೆಲುವು ಕಂಡಿದೆ. ಗುರುವಾರ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಬಾಂಗ್ಲಾದೇಶ ತಂಡವನ್ನು ಸೋಲಿಸಿತು.
ಪುಣೆ (ಅ.19): ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಭರ್ಜರಿ ಶತಕದ ನೆರವಿನಿಂದ ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 4ನೇ ಗೆಲುವು ಕಂಡಿದೆ. ಗುರುವಾರ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್‌ಗಳಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿತು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಮುಂದುವರಿದಿದೆ. ಶತಕ ಬಾರಿಸುವ ಹಾದಿಯಲ್ಲಿ ವಿರಾಟ್ ಕೊಹ್ಲಿ 26 ಸಾವಿರ ಅಂತಾರಾಷ್ಟ್ರೀಯ ರನ್‌ಗಳ ಸಾಧನೆಯನ್ನೂ ಮಾಡಿದರು.ಟೀಮ್ ಇಂಡಿಯಾ ಗೆಲುವು ಖಚಿತವಾದ ಬಳಿಕ, ವಿರಾಟ್ ಕೊಹ್ಲಿ ಸೆಂಚುರಿ ಮಾಡುತ್ತಾರೋ ಇಲ್ಲವೋ ಎನ್ನುವುದರ ಬಗ್ಗೆಯೇ ದೊಡ್ಡ ಕುತೂಹಲ ಹುಟ್ಟಿಕೊಂಡಿತ್ತು. ಬಾಂಗ್ಲಾದೇಶ ತಂಡ ವಿರಾಟ್ ಕೊಹ್ಲಿಯ 48ನೇ ಏಕದಿನ ಶತಕವನ್ನು ತಪ್ಪಿಸುವ ನಿಟ್ಟಿನಲ್ಲಿ ದೊಡ್ಡ ಪ್ರಯತ್ನ ಮಾಡಿತಾದರೂ, ವಿರಾಟ್ ಕೊಹ್ಲಿ 42ನೇ ಓವರ್‌ನ 3ನೇ ಎಸೆತವನ್ನು ಸಿಕ್ಸರ್‌ಗಟ್ಟುವ ಮೂಲಕ ತಮ್ಮ ಶತಕ ಹಾಗೂ ತಂಡದ ಗೆಲುವನ್ನು ಖಚಿತ ಮಾಡಿದರು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 8 ವಿಕೆಟ್‌ಗೆ 256 ರನ್ ಪೇರಿಸಿದರೆ, ಪ್ರತಿಯಾಗಿ ಟೀಮ್ ಇಂಡಿಯಾ 41.3 ಓವರ್‌ಗಲ್ಲಿ 4 ವಿಕೆಟ್ ನಷ್ಟಕ್ಕೆ 261 ರನ್ ಬಾರಿಸಿ 4ನೇ ಗೆಲುವು ಕಂಡಿತು.
ಪುಣೆಯಲ್ಲಿ ಅಭಿಮಾನಿಗಳು ಕೂಡ ಭಾರತ ತಂಡದ ಗೆಲುವಿನೊಂದಿಗೆ, ಭಾರತದ ಯಾರಾದರೂ ಒಬ್ಬರು ಶತಕ ಬಾರಿಸಿದರೆ ಅದನ್ನು ಕಣ್ತುಂಬಿಕೊಳ್ಳುವ ಇರಾದೆಯಲ್ಲಿ ಬಂದಿದ್ದರು. ಆದರೆ, ಗೆಲುವಿನಿಂದ ಭಾರತ 25 ರನ್ ದೂರವಿದ್ದಾಗ ಕ್ರೀಸ್‌ನಲ್ಲಿ ಕೊಹ್ಲಿ ಶತಕ ಬಾರಿಸುತ್ತಾರೆ ಎನ್ನುವ ಯೋಚನೆಗಳೇ ಜನರಲ್ಲಿ ಇದ್ದಿರಲಿಲ್ಲ. ಆದರೆ, ನಂತರದ ಕೆಲವು ಎಸೆತಗಳಲ್ಲಿ ಆಕ್ರಮಣಕಾರಿ ಶಾಟ್‌ಗಳನ್ನು ಭಾರಿಸಿದ ವಿರಾಟ್ ಕೊಹ್ಲಿ, ಒಂದೊಂದು ರನ್‌ಗೆ ನಿರಾಕರಿಸು ಮೂರಂಕಿ ಮೊತ್ತದತ್ತ ಮುನ್ನಡೆದರು. ಕೆಲವೊಮ್ಮೆ ಒಂದೊಂದು ರನ್ ಕದಿಯುವ ಸಮಯದಲ್ಲಿ ಬ್ಯಾಟಿಂಗ್ ಪಡೆಯುವ ಸಲುವಾಗಿ ಕೊಹ್ಲಿ, ಮತ್ಯೊಂದು ಬದಿಯಲ್ಲಿದ್ದ ರಾಹುಲ್‌ಗೆ ಇನ್ನಷ್ಟು ಕೆಲಸ ನೀಡಿ ಎರಡೆರಡು ರನ್ ಓಡಿದರು. ಕೊನೆಗೆ 42ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದು ಮಾತ್ರವಲ್ಲದೆ ಮೂರಂಕಿ ಮೊತ್ತವನ್ನು ಮುಟ್ಟಿದರು.
ಈ ಮೈದಾನದಲ್ಲಿ 257 ರನ್‌ಗಳ ಮೊತ್ತವನ್ನು ರಕ್ಷಿಸಿಕೊಳ್ಳಬಹುದಾಗಿದ್ದರೂ, ಚೇಸಿಂಗ್ ವೇಳೆ ಭಾರತದ ಆರಂಭ ಭರ್ಜರಿಯಾಗಿತ್ತು. ನಾಯಕ ರೋಹಿತ್ ಶರ್ಮ 40 ಎಸೆತಗಳ 48 ರನ್ ಬಾರಿಸಿದರು. ಆರಂಭಿಕರಾಗಿ ಕಣಕ್ಕಿಳಿದ್ದ ಶುಭ್‌ಮನ್ ಗಿಲ್ 55 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್‌ಗಳ ಅರ್ಧಶತಕ ಸಿಡಿಸಿದರು. ಶ್ರೇಯಸ್ ಅಯ್ಯರ್ ಅಮೂಲ್ಯ 19 ರನ್ ಮಾಡಿದರೆ, ಕೆಎಲ್ ರಾಹುಲ್ ಅಜೇಯ 34 ರನ್ ಬಾರಿಸಿ ಕೊಹ್ಲಿಯ ಶತಕಕ್ಕೆ ಜೊತೆಯಾದರು. ಬಾಂಗ್ಲಾದೇಶ ತಂಡದ ಬೌಲಿಂಗ್ ಭಾರತಕ್ಕೆ ಯಾವುದೇ ರೀತಿಯ ಸವಾಲು ನೀಡಲಿಲ್ಲ. ಇದರಿಂದಾಗಿ ಬಾಂಗ್ಲಾದೇಶ ತಂಡ ಸತತ ಮೂರನೇ ಸೋಲು ಕಂಡಿದ್ದರೆ, ಭಾರತದ ಅಜೇಯ ಓಟ ಮುಂದುವರಿದಿದೆ.
ಈ ಮುಖಾಮುಖಿಯಲ್ಲಿ ಭರ್ಜರಿ ಶತಕದೊಂದಿಗೆ ವಿರಾಟ್ ಕೊಹ್ಲಿ ಮಾಡಿದ ದಾಖಲೆಗಳು ಇಲ್ಲಿವೆ.
ಪುಣೆಯಲ್ಲಿ 551 ರನ್: ವಿರಾಟ್ ಕೊಹ್ಲಿ ಪುಣೆಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇಲ್ಲಿ ಆಡಿದ 8 ಏಕದಿನ ಇನ್ನಿಂಗ್ಸ್‌ಗಳಿಂದ ಅವರು 551 ರನ್ ಬಾರಿಸಿದ್ದಾರೆ. 78.71ರ ಸರಾಸರಿಯಲ್ಲಿ ಕೊಹ್ಲಿ ರನ್ ಬಾರಿಸಿದ್ದಾರೆ. ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ವಿರುದ್ಧ ಶತಕ ಬಾರಿಸಿದ್ದಾರೆ.
ಒಂದೇ ಸ್ಥಳದಲ್ಲಿ 500ಕ್ಕೂ ಅಧಿಕ ರನ್: ವಿರಾಟ್ ಕೊಹ್ಲಿ ಒಂದೇ ಸ್ಥಳದಲ್ಲಿ 500ಕ್ಕೂ ಅಧಿಕ ರನ್ ಬಾರಿಸಿದ ಐದನೇ ಸ್ಟೇಡಿಯಂ ಪುಣೆ. ಢಾಕಾ ಸ್ಟೇಡಿಯಂನಲ್ಲಿ 800 ರನ್ ಬಾರಿಸಿದ್ದರೆ, ಕೊಲಂಬೊದಲ್ಲಿ 644, ವಿಶಾಖಪಟ್ಟಣದಲ್ಲಿ 587, ಪೋರ್ಟ್ ಆಫ್ ಸ್ಪೇನ್‌ನಲ್ಲಿ 571 ಹಾಗೂ ಪುಣೆಯಲ್ಲಿ 551 ರನ್ ಬಾರಿಸಿದ್ದಾರೆ.
ಭಾರತದ ಒಂದೇ ಸ್ಥಳದಲ್ಲಿ ಗರಿಷ್ಠ ರನ್: ಪುಣೆಯಲ್ಲಿ ವಿರಾಟ್ ಕೊಹ್ಲಿ ಒಟ್ಟು 551 ರನ್ ಬಾರಿಸಿದ್ದಾರೆ. ಭಾರತದಲ್ಲಿ ಒಂದೇ ಸ್ಥಳದಲ್ಲಿ ಆಟಗಾರನೊಬ್ಬ ಬಾರಿಸಿದ 2ನೇ ಗರಿಷ್ಠ ರನ್ ಇದಾಗಿದೆ. ವಿಶಾಖಪಟ್ಟಣ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿಯೇ ಬಾರಿಸಿದ 587 ರನ್ ಅಗ್ರಸ್ಥಾನದಲ್ಲಿದೆ. ಉಳಿದಂತೆ ಸಚಿನ್ ತೆಂಡುಲ್ಕರ್ (534 ಬೆಂಗಳೂರು, 529 ಗ್ವಾಲಿಯರ್, 496 ಕೋಲ್ಕತಾ) ಅವರ ದಾಖಲೆ ನಂತರದ ಸ್ಥಾನದಲ್ಲಿದೆ.
IND vs BAN ಪಂದ್ಯದ ವೇಳೆ ಸಾರಾ ತೆಂಡುಲ್ಕರ್ ಪ್ರತ್ಯಕ್ಷ, ಗಿಲ್ ಸೆಂಚುರಿ ಪಕ್ಕಾ ಎಂದ ಫ್ಯಾನ್ಸ್!
ವಿರಾಟ್ ಕೊಹ್ಲಿ 3ನೇ ವಿಶ್ವಕಪ್ ಶತಕ: ವಿಶ್ವಕಪ್‌ನಲ್ಲಿ ಕೊಹ್ಲಿ ಅವರ 3ನೇ ಶತಕ ಇದಾಗಿದೆ. ಆ ಮೂಲಕ ವಿಶ್ವಕಪ್‌ನಲ್ಲಿ ಗರಿಷ್ಠ ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಶಿಖರ್ ಧವ್ ಅವರೊಂದಿಗೆ ಜಂಟಿ 4ನೇ ಸ್ಥಾನ ಪಡೆದರು. ರೋಹಿತ್ ಶರ್ಮ (7), ಸಚಿನ್ ತೆಂಡುಲ್ಕರ್ (6) ಹಾಗೂ ಸೌರವ್ ಗಂಗೂಲಿ (4) ಮೊದಲ ಮೂರು ಸ್ಥಾನದಲ್ಲಿದ್ದಾರೆ. ವಿಶ್ವಕಪ್‌ನ ಚೇಸಿಂಗ್‌ನಲ್ಲಿ ವಿರಾಟ್ ಕೊಹ್ಲಿಯ ಮೊದಲ ಶತಕ ಇದಾಗಿದೆ.
ವಿಶ್ವಕಪ್ ಕ್ರಿಕೆಟ್ 2023 ಎಫೆಕ್ಟ್: ಈ ಇಬ್ಬರು ಉದ್ಯಮಿಗಳಿಗೆ ಭರ್ಜರಿ ಹಣದ ಹೊಳೆ!