ಮಹಿಳಾ ವಿಶ್ವಕಪ್: ಆಸೀಸ್ ಎದುರಿನ ಗೆಲುವು ಸಾಧಾರಣವಾದದ್ದು ಅಲ್ಲ! ಸಿಹಿಯಾದ ಸೇಡು ತೀರಿಸಿಕೊಂಡ ಭಾರತ

Published : Oct 31, 2025, 11:47 AM IST
Jemimah Rodrigues

ಸಾರಾಂಶ

ನವಿ ಮುಂಬೈನಲ್ಲಿ ನಡೆದ ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡ, ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿದೆ. 339 ರನ್‌ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಭಾರತ, ಜೆಮಿಮಾ ರೋಡ್ರಿಗ್ಸ್‌ ಅವರ ಶತಕದ ನೆರವಿನಿಂದ ಫೈನಲ್‌ಗೆ ಪ್ರವೇಶಿಸಿದೆ.

ಮುಂಬೈ: ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಹೊಸ ಇತಿಹಾಸವನ್ನೇ ಬರೆದಿದೆ. ಮಹಿಳಾ ವಿಶ್ವಕಪ್‌ನ ರೋಚಕ ಎರಡನೇ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಮಣಿಸಿ ಭಾರತ ಫೈನಲ್‌ಗೆ ಪ್ರವೇಶಿಸಿದ್ದು, ಇದೊಂದು ಸಿಹಿ ಸೇಡು ಕೂಡ ಹೌದು. ಈ ಗೆಲುವು ಕ್ರಿಕೆಟ್ ಇತಿಹಾಸದ ಪುಸ್ತಕಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂತೆ ಮಾಡಿದೆ. ಇದು ಕೇವಲ ಭಾರತದ ಗೆಲುವಲ್ಲ, ಈ ಒಂದೇ ಪಂದ್ಯದಲ್ಲಿ ಹಲವಾರು ದಾಖಲೆಗಳು ಧೂಳೀಪಟವಾಗಿವೆ.

ಆಸೀಸ್ ಎದುರು ಭಾರತ ಸ್ವೀಟ್ ರಿವೇಂಜ್‌!

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡವು ಗ್ರೂಪ್ ಹಂತದಲ್ಲಿ ಅಸ್ಟ್ರೇಲಿಯಾ ಎದುರು 330 ರನ್ ಗಳಿಸಿದ ಹೊರತಾಗಿಯೂ ಮೂರು ವಿಕೆಟ್ ಅಂತರದ ಸೋಲು ಅನುಭವಿಸಿತ್ತು. ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು ದಾಖಲೆಯ ಮೊತ್ತದ ಗುರಿ ಬೆನ್ನತ್ತುವಲ್ಲಿ ಯಶಸ್ವಿಯಾಗಿತ್ತು. ಆದರೆ ಇದೀಗ ಸೆಮೀಸ್‌ನಲ್ಲಿ ಆಸೀಸ್‌ ನೀಡಿದ್ದ 339 ರನ್‌ಗಳ ಗುರಿಯನ್ನು ಭಾರತ ಇನ್ನೂ 9 ಎಸೆತ ಬಾಕಿ ಇರುವಂತೆಯೇ ಗೆಲುವು ಸಾಧಿಸುವ ಮೂಲಕ ಸಿಹಿಯಾದ ಸೇಡು ತೀರಿಸಿಕೊಂಡಿದೆ. ಇದಷ್ಟೇ ಅಲ್ಲದೇ ಏಳು ಬಾರಿಯ ಚಾಂಪಿಯನ್ ತಂಡವನ್ನು ಟೂರ್ನಿಯಿಂದ ಹೊರದಬ್ಬಿದ ಭಾರತ ಇದೀಗ ಫೈನಲ್‌ಗೆ ಲಗ್ಗೆಯಿಟ್ಟಿದೆ.

 

ಮುರಿದುಬಿದ್ದ ಪ್ರಮುಖ ದಾಖಲೆಗಳು

ಮಹಿಳಾ ಏಕದಿನ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಚೇಸ್: ಈ ಟೂರ್ನಿಯ ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ 331 ರನ್ ಚೇಸ್ ಮಾಡಿದ ದಾಖಲೆ ಈಗ ನುಚ್ಚುನೂರಾಗಿದೆ.

ನಾಕೌಟ್‌ನಲ್ಲಿ ಮೊದಲ 300+ ಚೇಸ್: ಏಕದಿನ ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ (ಪುರುಷ ಮತ್ತು ಮಹಿಳಾ) 300ಕ್ಕೂ ಹೆಚ್ಚು ರನ್​ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಅತಿ ಹೆಚ್ಚು ಮ್ಯಾಚ್ ಅಗ್ರಿಗೇಟ್: ಭಾರತ ಮತ್ತು ಆಸ್ಟ್ರೇಲಿಯಾ ಸೇರಿ ಗಳಿಸಿದ 679 ರನ್‌ಗಳು ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಮ್ಯಾಚ್ ಅಗ್ರಿಗೇಟ್ ಆಗಿದೆ. (ಹಳೆಯ ದಾಖಲೆ: ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ, 678 ರನ್, 2017).

ನಾಕೌಟ್‌ನಲ್ಲಿ ಶತಕ ಸಿಡಿಸಿದ ಅತಿ ಕಿರಿಯ ಆಟಗಾರ್ತಿ: ಆಸ್ಟ್ರೇಲಿಯಾದ ಆರಂಭಿಕ ಆಟಗಾರ್ತಿ ಫೋಬೆ ಲಿಚ್‌ಫೀಲ್ಡ್ ಮಹಿಳಾ ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಶತಕ ಗಳಿಸಿದ ಅತಿ ಕಿರಿಯ ಆಟಗಾರ್ತಿ ಎಂಬ ಇತಿಹಾಸ ನಿರ್ಮಿಸಿದ್ದಾರೆ.

ಈಗ ಫೈನಲ್ ಪಂದ್ಯಕ್ಕೆ ಕ್ಷಣಗಣನೆ

ಆಸ್ಟ್ರೇಲಿಯಾ ನೀಡಿದ 339 ರನ್‌ಗಳ ಬೃಹತ್ ಗುರಿಯನ್ನು ಭಾರತ, ಜೆಮಿಮಾ ರೋಡ್ರಿಗ್ಸ್‌ ಅವರ ಅಜೇಯ ಶತಕ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಅರ್ಧಶತಕದ ನೆರವಿನಿಂದ 48.3 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. 134 ಎಸೆತಗಳಲ್ಲಿ 127 ರನ್ ಗಳಿಸಿ ಜೆಮಿಮಾ ರೋಡ್ರಿಗ್ಸ್‌ ಅಜೇಯರಾಗಿ ಉಳಿದರೆ, ಅಮನ್‌ಜ್ಯೋತ್ ಕೌರ್ 8 ಎಸೆತಗಳಲ್ಲಿ 15 ರನ್ ಗಳಿಸಿ ಗೆಲುವಿಗೆ ಸಾಥ್ ನೀಡಿದರು. 88 ಎಸೆತಗಳಲ್ಲಿ 89 ರನ್ ಗಳಿಸಿದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಅರ್ಧಶತಕ, 16 ಎಸೆತಗಳಲ್ಲಿ 26 ರನ್ ಗಳಿಸಿದ ರಿಚಾ ಘೋಷ್ ಮತ್ತು 17 ಎಸೆತಗಳಲ್ಲಿ 24 ರನ್ ಗಳಿಸಿದ ದೀಪ್ತಿ ಶರ್ಮಾ ಅವರ ಇನ್ನಿಂಗ್ಸ್‌ಗಳು ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದವು. ಈ ಗೆಲುವಿನೊಂದಿಗೆ, ಈ ಬಾರಿ ಹೊಸ ಚಾಂಪಿಯನ್ ಸಿಗುವುದು ಖಚಿತವಾಗಿದೆ. ಭಾರತವು ಭಾನುವಾರ ಇದೇ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್‌ನಲ್ಲಿ ಸೆಣಸಲಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ