ಮಹಿಳಾ ಚುಟುಕು ವಿಶ್ವಕಪ್: ಹರಿಣಗಳನ್ನು ಮಣಿಸಿದ ಕಿವೀಸ್‌ಗೆ ಚೊಚ್ಚಲ ಟಿ20 ವಿಶ್ವಕಪ್ ಕಿರೀಟ!

By Naveen KodaseFirst Published Oct 21, 2024, 10:03 AM IST
Highlights

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿದ ನ್ಯೂಜಿಲೆಂಡ್ ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಜಯಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ

ದುಬೈ: 9ನೇ ಆವೃತ್ತಿ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಬರೋಬ್ಬರಿ 14 ವರ್ಷಗಳ ಬಳಿಕ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದ ಕಿವೀಸ್ ತಂಡ, ಚೊಚ್ಚಲ ಟ್ರೋಫಿ ಗೆದ್ದು ಸಂಭ್ರಮಿಸಿತು. ದಕ್ಷಿಣ ಆಫ್ರಿಕಾ ಸತತ 2ನೇ ಬಾರಿಯೂ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಭಾನುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಕಿವೀಸ್‌ 32 ರನ್‌ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 158 ರನ್‌ ಕಲೆಹಾಕಿತು. ಸುಜೀ ಬೇಟ್ಸ್‌(32) ತಂಡಕ್ಕೆ ಉತ್ತಮ ಆರಂಭ ಒದಗಿಸಿದರೆ, ಅಮೇಲಿ ಕೇರ್‌(43) ಹಾಗೂ ಬ್ರೂಕ್‌ ಹಾಲಿಡೆ(38) ಅಬ್ಬರದ ಆಟವಾಡಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

Latest Videos

ಐಪಿಎಲ್ ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಯಾರಿಗೆಲ್ಲಾ ಗೇಟ್ ಪಾಸ್ ಕೊಡುತ್ತೆ?

ದೊಡ್ಡ ಗುರಿ ಬೆನ್ನತ್ತಿದ ದ.ಆಫ್ರಿಕಾ ಉತ್ತಮ ಆರಂಭದ ಹೊರತಾಗಿಯೂ 9 ವಿಕೆಟ್‌ಗೆ 126 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಆರಂಭಿಕರಾದ ಲಾರಾ ವೊಲ್ವಾರ್ಟ್‌(33) ಹಾಗೂ ತಜ್ಮೀನ್‌ ಬ್ರಿಟ್ಸ್‌(17) ಪವರ್‌-ಪ್ಲೇನಲ್ಲಿ 47 ರನ್‌ ಸಿಡಿಸಿದರು. ಆದರೆ ಬ್ರಿಟ್ಸ್‌ ಔಟಾದ ಬಳಿಕ ತಂಡ ದಿಢೀರ್‌ ಕುಸಿತಕ್ಕೆ ಒಳಗಾಯಿತು. ಸತತ ವಿಕೆಟ್‌ ಕಳೆದುಕೊಂಡ ತಂಡ ಒತ್ತಡಕ್ಕೊಳಗಾಗಿ ಟ್ರೋಫಿ ಕೈ ಚೆಲ್ಲಿತು. ಅಮೇಲಿ ಕೇರ್‌, ರೊಸಾಮೆರಿ ಮೈರ್‌ ತಲಾ 3 ವಿಕೆಟ್‌ ಕಿತ್ತರು.

ಸ್ಕೋರ್:
ನ್ಯೂಜಿಲೆಂಡ್‌ 158/5 (ಅಮೇಲಿ 43, ಬ್ರೂಕ್‌ 38, ಸುಜೀ 32, ಮ್ಲಾಬಾ 2-31) 
ದ.ಆಫ್ರಿಕಾ 126/9 (ವೊಲ್ವಾರ್ಟ್‌ 33, ತಜ್ಮೀನ್‌ 17, ಅಮೇಲಿ 3-24, ಮೈರ್‌ 3-25)

ಒಂದೇ ವರ್ಷದಲ್ಲಿ 2 ಟಿ20 ವಿಶ್ವಕಪ್‌ ಮಿಸ್‌!

ದ.ಆಫ್ರಿಕಾ 2024ರಲ್ಲಿ ಎರಡು ಟಿ20 ವಿಶ್ವಕಪ್‌ ಟ್ರೋಫಿ ತಪ್ಪಿಸಿಕೊಂಡಿತು. ಪುರುಷರ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ವಿರುದ್ಧ ಸೋತಿದ್ದ ದ.ಆಫ್ರಿಕಾ, ಮಹಿಳಾ ವಿಭಾಗದಲ್ಲಿ ನ್ಯೂಜಿಲೆಂಡ್‌ಗೆ ಶರಣಾಯಿತು. ಎರಡೂ ಫೈನಲ್‌ಗಳಲ್ಲಿ ದ.ಆಫ್ರಿಕಾ ಒಂದು ಹಂತದಲ್ಲಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡು, ಬಳಿಕ ಸೋಲಿನ ಶರಣಾಗಿದ್ದು ವಿಪರ್ಯಾಸ.

02ನೇ ಬಾರಿ: ದ.ಆಫ್ರಿಕಾ ಸತತ 2ನೇ ಬಾರಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಸೋಲನುಭವಿಸಿತು.

02ನೇ ವಿಶ್ವಕಪ್‌: ನ್ಯೂಜಿಲೆಂಡ್‌ಗೆ ಇದು 2ನೇ ವಿಶ್ವಕಪ್‌. 2000ರಲ್ಲಿ ಕಿವೀಸ್ ಮಹಿಳಾ ಏಕದಿನ ವಿಶ್ವಕಪ್‌ ಜಯಿಸಿತ್ತು.

click me!