
ಮುಂಬೈ: ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್‌ಗೂ ಮುನ್ನ ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಭಾರತದ ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್, ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ. ನಿನ್ನೆ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪ್ರತಿಕಾ ಅವರ ಪಾದಕ್ಕೆ ಗಾಯವಾಗಿತ್ತು. ಫೀಲ್ಡಿಂಗ್ ಮಾಡುವಾಗ ಪ್ರತಿಕಾ ಅವರ ಕಾಲು ಮಡಚಿತ್ತು. ನಂತರ ಫಿಸಿಯೋ ಸಹಾಯದಿಂದ ಭಾರತದ ಆರಂಭಿಕ ಆಟಗಾರ್ತಿ ಮೈದಾನದಿಂದ ಹೊರನಡೆದರು. ಗುರುವಾರ ನವಿ ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಪ್ರತೀಕಾ ಆಡೋದು ಅನುಮಾನ ಎನ್ನಲಾಗುತ್ತಿದೆ.
ಪ್ರತಿಕಾ ವೈದ್ಯಕೀಯ ತಂಡದ ಆರೈಕೆಯಲ್ಲಿದ್ದು, ಗಾಯದ ತೀವ್ರತೆಯ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ನಿನ್ನೆ ಸ್ಪಷ್ಟಪಡಿಸಿದ್ದರು. ಈ ಮಧ್ಯೆ, ಆಟಗಾರ್ತಿಯ ಗಾಯದ ಬಗ್ಗೆ ಭಾರತದ ಮಾಜಿ ಆಟಗಾರ್ತಿ ಮಿಥಾಲಿ ರಾಜ್ ಕಳವಳ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಆಡಲು ಪ್ರತಿಕಾ ಫಿಟ್ ಆಗದಿದ್ದರೆ, ಹರ್ಲೀನ್ ಡಿಯೋಲ್ ಅವರನ್ನು ಆರಂಭಿಕರನ್ನಾಗಿ ಕಣಕ್ಕಿಳಿಸಬೇಕು ಎಂದು ಮಿಥಾಲಿ ಹೇಳಿದ್ದಾರೆ. ಇಲ್ಲದಿದ್ದರೆ, ವಿಕೆಟ್ ಕೀಪರ್ ಉಮಾ ಛೆಟ್ರಿ ಅವರನ್ನೂ ಪರಿಗಣಿಸಬಹುದು ಎಂದು ಮಿಥಾಲಿ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಯುವ ಆರಂಭಿಕ ಬ್ಯಾಟರ್ ಆಗಿರುವ ಪ್ರತಿಕಾ ರಾವಲ್, ಸದ್ಯ ಭಾರತ ಮಹಿಳಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಅಸ್ತ್ರವಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಈ ಬಾರಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪ್ರತಿಕಾ ರಾವಲ್ ಒಂದು ಶತಕ ಹಾಗೂ ಒಂದು ಅರ್ಧಶತಕ ಸಹಿತ 51.33ರ ಬ್ಯಾಟಿಂಗ್ ಸರಾಸರಿಯಲ್ಲಿ 308 ರನ್ ಸಿಡಿಸಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು 365 ರನ್ ಸಿಡಿಸಿರುವ ಸ್ಮೃತಿ ಮಂಧನಾ ಮೊದಲ ಸ್ಥಾನದಲ್ಲಿದ್ದಾರೆ. ಒಂದು ಪ್ರತಿಕಾ ರಾವಲ್, ಸಮಿಫೈನಲ್‌ಗೆ ಅಲಭ್ಯರಾದರೇ, ಭಾರತಕ್ಕೆ ದೊಡ್ಡ ಹಿನ್ನಡೆಯುಂಟಾಗುವ ಸಾಧ್ಯತೆಯಿದೆ.
ಇದೇ ವೇಳೆ, ಭಾರತ-ಬಾಂಗ್ಲಾದೇಶ ಪಂದ್ಯವು ಭಾರಿ ಮಳೆಯಿಂದಾಗಿ ರದ್ದಾಗಿತ್ತು. ಬಾಂಗ್ಲಾದೇಶ ವಿರುದ್ಧ 120 ರನ್‌ಗಳ ಗುರಿ ಬೆನ್ನಟ್ಟಿದ ಭಾರತ, 8.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 57 ರನ್ ಗಳಿಸಿದ್ದಾಗ ಮಳೆ ಬಂದಿತ್ತು. ನಂತರ ಪಂದ್ಯವನ್ನು ರದ್ದುಗೊಳಿಸಲಾಯಿತು. ಸ್ಮೃತಿ ಮಂಧಾನ (34) ಮತ್ತು ಅಮನ್‌ಜೋತ್ ಕೌರ್ (15) ಕ್ರೀಸ್‌ನಲ್ಲಿದ್ದರು. ಇದಕ್ಕೂ ಮುನ್ನ, ಆಗಾಗ ಮಳೆ ಅಡ್ಡಿಪಡಿಸಿದ್ದರಿಂದ ಪಂದ್ಯವನ್ನು 27 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು.
ನವಿ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ಒಂಬತ್ತು ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿತ್ತು. 36 ರನ್ ಗಳಿಸಿದ ಶರ್ಮಿನ್ ಅಖ್ತರ್ ಬಾಂಗ್ಲಾದೇಶದ ಟಾಪ್ ಸ್ಕೋರರ್. ಶೋಭನಾ ಮೊಸ್ತರಿ 26 ರನ್ ಗಳಿಸಿದರು. ಭಾರತದ ಪರ ರಾಧಾ ಯಾದವ್ ಮೂರು ವಿಕೆಟ್ ಪಡೆದರು. ಶ್ರೀ ಚರಣಿ ಎರಡು ವಿಕೆಟ್ ಪಡೆದರು. ಇದಕ್ಕೂ ಮುನ್ನ, ಟಾಸ್ ಗೆದ್ದ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಬಾಂಗ್ಲಾದೇಶವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.