
ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯವಾಗಿದೆ. ಹೀಗಾಗಿ ಆಂಡರ್‌ಸನ್-ತೆಂಡುಲ್ಕರ್ ಟೆಸ್ಟ್ ಸರಣಿಯಲ್ಲಿ ನಾಲ್ಕು ಪಂದ್ಯಗಳ ಅಂತ್ಯದ ವೇಳೆಗೆ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು 2-1ರ ಮುನ್ನಡೆ ಸಾಧಿಸಿದೆ. ಹೀಗಾಗಿ ಸರಣಿ ಡ್ರಾ ಮಾಡಿಕೊಳ್ಳಬೇಕಿದ್ದರೇ, ಇದೇ ಜುಲೈ 31ರಿಂದ ಆರಂಭವಾಗಲಿರುವ 5ನೇ ಟೆಸ್ಟ್ ಪಂದ್ಯವು ಭಾರತ ತಂಡದ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿಕೊಂಡಿದೆ. ಹೀಗಾಗಿ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗದ ಅಸ್ತ್ರ ಜಸ್ಪ್ರೀತ್ ಬುಮ್ರಾ ತಂಡಕ್ಕೋಸ್ಕರ ಕಣಕ್ಕಿಳಿಯುತ್ತಾರಾ ಎನ್ನುವ ಕುತೂಹಲ ಜೋರಾಗಿದೆ. ಈ ಕುರಿತಂತೆ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯ ಮುಕ್ತಾಯದ ಬಳಿಕ ಗಂಭೀರ್ ಅವರನ್ನು ಮಾಧ್ಯಮದವರು ಪ್ರಶ್ನಿಸಿದಾಗ, ಟೀಂ ಇಂಡಿಯಾ ಹೆಡ್ ಕೋಚ್ ಖಡಕ್ ಉತ್ತರ ನೀಡಿದ್ದಾರೆ.
ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿ ಆರಂಭಕ್ಕೂ ಮೊದಲೇ ಜಸ್ಪ್ರೀತ್ ಬುಮ್ರಾ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೇವಲ ಮೂರು ಪಂದ್ಯಗಳನ್ನಷ್ಟೇ ಆಡಲಿದ್ದಾರೆ ಎಂದು ಸ್ವತಃ ಗೌತಮ್ ಗಂಭೀರ್ ಹಾಗೂ ನಾಯಕ ಶುಭ್‌ಮನ್ ಗಿಲ್ ಹೇಳಿದ್ದರು. ಜಸ್ಪ್ರೀತ್ ಬುಮ್ರಾ, ಹೆಡಿಂಗ್ಲೆ, ಲಾರ್ಡ್ಸ್ ಹಾಗೂ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯಗಳನ್ನಾಡಿದ್ದರು. ಹೀಗಾಗಿ ಭಾರತದ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿರುವ ಕೊನೆಯ ಟೆಸ್ಟ್‌ನಲ್ಲಿ ಬುಮ್ರಾ ತಮ್ಮ ನಿರ್ಧಾರವನ್ನು ಬದಲಿಸಿ ಕಣಕ್ಕಿಳಿಯುತ್ತಾರಾ ಎನ್ನುವ ಕುತೂಹಲ ಜೋರಾಗಿದೆ. ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯ ಮುಕ್ತಾಯದ ಬಳಿಕ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಬುಮ್ರಾ ಅವರನ್ನು ಈ ಕುರಿತಾಗಿ ಪ್ರಶ್ನಿಸಲಾಯಿತು. 'ಈ ಬಗ್ಗೆ ಇದುವರೆಗೂ ಯಾವುದೇ ಮಾತುಕತೆಗಳಾಗಿಲ್ಲ ಹಾಗೆಯೇ ಕೊನೆಯ ಟೆಸ್ಟ್ ಬುಮ್ರಾ ಆಡುತ್ತಾರೆಯೇ ಅಥವಾ ಇಲ್ಲವೇ ಎನ್ನುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಯಾರೇ ಆಡಿದರೂ, ದೇಶಕ್ಕಾಗಿ ಸಮರ್ಪಣಾ ಭಾವದಿಂದ ತಂಡವನ್ನು ಗೆಲ್ಲಿಸಲು ಪೂರ್ಣ ಪ್ರಮಾಣದಲ್ಲಿ ಪ್ರಯತ್ನಿಸಲಿದ್ದಾರೆ' ಎಂದು ಹೇಳಿದ್ದಾರೆ.
ಟೀಂ ಇಂಡಿಯಾ ಬೌಲರ್‌ಗಳ ಗಾಯದ ಬಗ್ಗೆ ತುಟಿಬಿಚ್ಚಿದ ಗಂಭೀರ್:
ಇದೇ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್, ಭಾರತ ತಂಡದ ಬೌಲರ್‌ಗಳ ಗಾಯದ ಸಮಸ್ಯೆಯ ಕುರಿತಂತೆಯೂ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಅಂದಹಾಗೆ ನಾಲ್ಕನೇ ಟೆಸ್ಟ್ ಪಂದ್ಯದ ಅಭ್ಯಾಸದ ವೇಳೆಯಲ್ಲಿ ಅರ್ಶದೀಪ್ ಸಿಂಗ್ ಕೈಬೆರಳಿನ ಗಾಯಕ್ಕೆ ತುತ್ತಾಗಿ ಮ್ಯಾಂಚೆಸ್ಟರ್ ಟೆಸ್ಟ್‌ಗೆ ಅಲಭ್ಯರಾಗಿದ್ದರು. ಇದರ ಜತೆಗೆ ಗಾಯದ ಸಮಸ್ಯೆಯಿಂದಾಗಿ ವೇಗಿ ಆಕಾಶ್‌ದೀಪ್ ಕೂಡಾ ನಾಲ್ಕನೇ ಟೆಸ್ಟ್‌ನಿಂದ ಹೊರಗುಳಿದಿದ್ದರು. ಇದೀಗ ಐದನೇ ಟೆಸ್ಟ್‌ಗೂ ಮುನ್ನ ತಂಡದ ಎಲ್ಲಾ ವೇಗದ ಬೌಲರ್‌ಗಳು ಸಂಪೂರ್ಣ ಫಿಟ್ ಆಗಿದ್ದು, ಯಾರಿಗೂ ಗಾಯದ ಸಮಸ್ಯೆಯಿಲ್ಲ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ದಿ ಓವಲ್ ಟೆಸ್ಟ್‌ನಲ್ಲಿ ಭಾರತ ತಂಡದಲ್ಲಿ ಬದಲಾವಣೆ ಫಿಕ್ಸ್:
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವುದು ಖಚಿತವಾಗಿದೆ. ಗಾಯದ ಸಮಸ್ಯೆಯಿಂದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, 5ನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಪಂತ್ ಸ್ಥಾನಕ್ಕೆ ಧ್ರುವ್ ಜುರೆಲ್ ಕಣಕ್ಕಿಳಿಯಲಿದ್ದಾರೆ. ಇನ್ನು ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಪಾದಾರ್ಪಣೆ ಮಾಡಿದ ಅನ್ಶೂಲ್ ಕಂಬೋಜ್ ಕೇವಲ ಒಂದು ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದರು. ಈಗಾಗಲೇ ಉಳಿದ ಬೌಲರ್‌ಗಳು ಫಿಟ್ ಆಗಿದ್ದಾರೆ ಎಂದು ಗಂಭೀರ್ ಹೇಳಿರುವುದರಿಂದ ಕಂಬೋಜ್ ಬದಲಿಗೆ ಆಕಾಶ್‌ದೀಪ್ ತಂಡ ಕೂಡಿಕೊಳ್ಳಬಹುದು. ಇನ್ನು ಒಂದು ವೇಳೆ ಜಸ್ಪ್ರೀತ್ ಬುಮ್ರಾ ಕೊನೆಯ ಟೆಸ್ಟ್‌ನಿಂದ ಹೊರಗುಳಿದರೆ, ಅರ್ಶದೀಪ್ ಸಿಂಗ್ ಭಾರತ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.