ಟೀಂ ಇಂಡಿಯಾ ವಿಕೆಟ್ ಕೀಪರ್: ಅಚ್ಚರಿಯ ಹೇಳಿಕೆ ನೀಡಿದ ಕೊಹ್ಲಿ.!

By Kannadaprabha News  |  First Published Jan 21, 2020, 12:36 PM IST

ಟೀಂ ಇಂಡಿಯಾ ಪಾಲಿಗೆ ಕೆಲಕಾಲ ಕೆ.ಎಲ್ ರಾಹುಲ್ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಆಸೀಸ್ ವಿರುದ್ಧ ಸರಣಿ ಗೆಲುವಿನ ಬಳಿಕ ಕೊಹ್ಲಿ ಈ ಹೇಳಿಕೆ ನೀಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..


ಬೆಂಗಳೂರು(ಜ.21): ರಾಹುಲ್‌ ದ್ರಾವಿಡ್‌ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆಗಿ ಭಾರತ ತಂಡಕ್ಕೆ ಅಪಾರ ಕೊಡುಗೆ ನೀಡಿದ್ದರು. ಇದೀಗ ರಾಜ್ಯದ ಮತ್ತೊಬ್ಬ ರಾಹುಲ್‌,ಟೀಂ ಇಂಡಿಯಾದ ವಿಕೆಟ್‌ ಕೀಪರ್‌ ಆಗಿ ಮಿಂಚುವ ನಿರೀಕ್ಷೆ ಹುಟ್ಟಿಸಿದ್ದಾರೆ. ಆಸ್ಪ್ರೇಲಿಯಾ ವಿರುದ್ಧದ ಕೊನೆ 2 ಏಕದಿನ ಪಂದ್ಯಗಳಲ್ಲಿ ವಿಕೆಟ್‌ ಕೀಪಿಂಗ್‌ ಜವಾಬ್ದಾರಿ ಹೊತ್ತಿದ್ದ ಕೆ.ಎಲ್‌.ರಾಹುಲ್‌ ಬಗ್ಗೆ ನಾಯಕ ವಿರಾಟ್‌ ಕೊಹ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಸದ್ಯಕ್ಕೆ ಅವರನ್ನೇ ವಿಕೆಟ್‌ ಕೀಪರ್‌ ಆಗಿ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಭಾನುವಾರ ಸರಣಿ ಗೆದ್ದ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ವಿರಾಟ್‌, ‘ಕೆಲ ವಿಚಾರಗಳ ಬಗ್ಗೆ ಇರಬೇಕಾದ ಸ್ಪಷ್ಟನೆ ಇಲ್ಲದಿದ್ದ ಕಾರಣ ಈ ಹಿಂದೆ ನಷ್ಟ ಅನುಭವಿಸಿದ್ದೇವೆ. ರಾಹುಲ್‌ರನ್ನು ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆಗಿ ಆಡಿಸುವುದು ಸೂಕ್ತ ಎಂದು ಈಗ ಮನವರಿಕೆಯಾಗಿದೆ. ಮುಂಬರುವ ಸರಣಿಯಲ್ಲಿ ಇದೇ ಪ್ರಯೋಗ ಮುಂದುವರಿಸಲಿದ್ದು, ಎಷ್ಟರ ಮಟ್ಟಿಗೆ ಲಾಭದಾಯಕವಾಗಲಿದೆ ಎನ್ನುವುದನ್ನು ಕಂಡುಕೊಳ್ಳುತ್ತೇವೆ’ ಎಂದರು.

Latest Videos

undefined

ಧೋನಿ ಜಾಗಕ್ಕೆ ರಾಹುಲ್‌?: ಮಾಜಿ ನಾಯಕ ಎಂ.ಎಸ್‌.ಧೋನಿ ಕ್ರಿಕೆಟ್‌ನಿಂದ ದೂರ ಉಳಿದಿರುವ ಕಾರಣ, ಟೀಂ ಇಂಡಿಯಾದಲ್ಲಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ದೆಹಲಿಯ ಯುವ ಆಟಗಾರ ರಿಷಭ್‌ ಪಂತ್‌ರನ್ನು ಬಿಸಿಸಿಐ ಆಯ್ಕೆ ಸಮಿತಿ ಧೋನಿಯ ಉತ್ತರಾಧಿಕಾರಿ ಎಂದು ಗುರುತಿಸಿ, ಅವಕಾಶಗಳ ಮೇಲೆ ಅವಕಾಶಗಳನ್ನು ನೀಡುತ್ತಾ ಬಂದಿತು. ಆದರೆ ಪಂತ್‌ ತಲೆಗೆ ಪೆಟ್ಟು ಬಿದ್ದು ಒಂದು ಪಂದ್ಯದಿಂದ ಹೊರಗುಳಿದಿದ್ದು ಕರ್ನಾಟಕದ ಕೆ.ಎಲ್‌.ರಾಹುಲ್‌ ಪಾಲಿಗೆ ವರದಾನವಾಯಿತು. ರಾಜ್‌ಕೋಟ್‌ ಪಂದ್ಯದಲ್ಲಿ ಕೀಪರ್‌ ಆಗಿದ್ದ ರಾಹುಲ್‌ 5ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಸ್ಫೋಟಕ ಬ್ಯಾಟಿಂಗ್‌ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಆಟ ತಂಡದ ಆಡಳಿತದ ಗಮನ ಸೆಳೆದಿದೆ. ಭಾನುವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಪ್ರೇಲಿಯಾ ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ ಆಡಲು ಪಂತ್‌ ಫಿಟ್‌ ಇದ್ದರೂ, ರಾಹುಲ್‌ಗೇ ಅವಕಾಶ ನೀಡಲಾಯಿತು. ರಾಹುಲ್‌ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರು. ಧವನ್‌ ಗಾಯಗೊಂಡು ಬ್ಯಾಟಿಂಗ್‌ಗಿಳಿಯದ ಕಾರಣ ಆರಂಭಿಕನಾಗಿ ಕಣಕ್ಕಿಳಿದರು.

ಈ ಋುತುವಿನ ವಿಜಯ್‌ ಹಜಾರೆ ಹಾಗೂ ಮುಷ್ತಾಕ್‌ ಅಲಿ ಟಿ20 ಟೂರ್ನಿಗಳಲ್ಲಿ ಕರ್ನಾಟಕ ಪರ ಆಡಿದ್ದ ರಾಹುಲ್‌ ವಿಕೆಟ್‌ ಕೀಪರ್‌ ಆಗಿ ಕಾರ್ಯನಿರ್ವಹಿಸಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದರು.

ಸಮತೋಲನಕ್ಕೆ ಅನುಕೂಲ: ರಾಹುಲ್‌ಗೆ ವಿಕೆಟ್‌ ಕೀಪರ್‌ ಜವಾಬ್ದಾರಿ ನೀಡಿದರೆ ಒಬ್ಬ ಹೆಚ್ಚುವರಿ ಬ್ಯಾಟ್ಸ್‌ಮನ್‌ ಆಡಿಸಬಹುದು ಎಂದು ಕೊಹ್ಲಿ ಹೇಳಿದ್ದಾರೆ. ‘ರಾಹುಲ್‌ ಕೀಪಿಂಗ್‌ ಜವಾಬ್ದಾರಿ ವಹಿಸಿಕೊಂಡರೆ ಒಬ್ಬ ಹೆಚ್ಚುವರಿ ಬ್ಯಾಟ್ಸ್‌ಮನ್‌ ಆಡಿಸಲು ಅವಕಾಶ ಸಿಗಲಿದೆ. ಇದು ತಂಡ ಸಮತೋಲನ ಕಂಡುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ’ ಎಂದು ಕೊಹ್ಲಿ ತಿಳಿಸಿದ್ದಾರೆ.

ಇದೇ ವೇಳೆ ರಾಹುಲ್‌ ದ್ರಾವಿಡ್‌ ಬಗ್ಗೆಯೂ ಕೊಹ್ಲಿ ನೆನಪು ಮಾಡಿಕೊಂಡಿದ್ದಾರೆ. ‘2003ರ ವಿಶ್ವಕಪ್‌ನಲ್ಲಿ ರಾಹುಲ್‌ ದ್ರಾವಿಡ್‌ ವಿಕೆಟ್‌ ಕೀಪಿಂಗ್‌ ಮಾಡಿದ ಕಾರಣ, ತಂಡ ಉತ್ತಮ ಸಮತೋಲನ ಹೊಂದಿತ್ತು’ ಎಂದರು. ವಿಶ್ವಕಪ್‌ನಲ್ಲಿ ಭಾರತ ರನ್ನರ್‌-ಅಪ್‌ ಸ್ಥಾನ ಪಡೆದಿತ್ತು.

ಕಾಯಬೇಕಿದೆ ಪಂತ್‌?: ತಂಡದಲ್ಲಿ ಪದೇ ಪದೇ ಬದಲಾವಣೆ ಮಾಡುವುದು ಸರಿಯಲ್ಲ ಎನ್ನುವ ಮೂಲಕ ಕೊಹ್ಲಿ, ರಿಷಭ್‌ ಪಂತ್‌ಗೆ ಸದ್ಯಕ್ಕೆ ಆಡುವ ಹನ್ನೊಂದರಲ್ಲಿ ಸ್ಥಾನ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ರಾಹುಲ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಬೆಂಬಲಿಸಿದ್ದಾರೆ. ‘ರಾಹುಲ್‌ ಒಬ್ಬ ಅಪ್ಪಟ ಬ್ಯಾಟ್ಸ್‌ಮನ್‌. ಎಲ್ಲಾ ಮಾದರಿಗೂ ಸರಿಹೊಂದುವ ಆಟಗಾರ. ಮೊದಲ ಎಸೆತದಿಂದಲೇ ಹೊಡಿಬಡಿ ಆಟಕ್ಕೆ ನಿಲ್ಲುವುದಿಲ್ಲ. ಪರಿಸ್ಥಿತಿಗೆ ತಕ್ಕಂತೆ ಆಡುವ ಸಾಮರ್ಥ್ಯ ಅವರಿಗಿದೆ. ಕಳೆದ ಐದಾರು ತಿಂಗಳಲ್ಲಿ ಅವರ ಆಟದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ತಂಡದ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆ’ಎಂದು ಕೊಹ್ಲಿ ಹೇಳಿದ್ದಾರೆ.
 

click me!