ಭಾರತ-ವೆಸ್ಟ್ ಇಂಡೀಸ್ ಎರಡನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ
ಎರಡನೇ ಪಂದ್ಯಕ್ಕೆ ಮಳೆರಾಯನ ಭೀತಿ
ಈಗಾಗಲೇ ಮೊದಲ ಪಂದ್ಯ ಗೆದ್ದಿರುವ ಟೀಂ ಇಂಡಿಯಾ
ಬ್ರಿಡ್ಜ್‌ಟೌನ್(ಜು.29): ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡವು 1-0 ಮುನ್ನಡೆ ಸಾಧಿಸಿದೆ. ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು ಕೇವಲ 114 ರನ್‌ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ, ಆ ಬಳಿಕ ಸ್ಪಿನ್ ಟ್ರ್ಯಾಕ್ ಪಿಚ್‌ನಲ್ಲಿ ಭಾರತ ಕ್ರಿಕೆಟ್ ತಂಡವು 5 ವಿಕೆಟ್ ಭರ್ಜರಿ ಜಯ ಸಾಧಿಸಿದೆ.
ಇದೀಗ ಇಂದು(ಜು.29) ಕೆನ್ಸಿಂಗ್‌ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಮತ್ತೊಮ್ಮೆ ಭರ್ಜರಿ ಪ್ರದರ್ಶನ ತೋರುವ ಮೂಲಕ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ ಟೀಂ ಇಂಡಿಯಾ. ವೆಸ್ಟ್ ಇಂಡೀಸ್‌ಗೆ ಹೋಲಿಸಿದರೆ ಟೀಂ ಇಂಡಿಯಾ, ಎಲ್ಲಾ ವಿಭಾಗದಲ್ಲೂ ಸಾಕಷ್ಟು ಸದೃಢವಾಗಿ ಗುರುತಿಸಿಕೊಂಡಿದೆ. ಇನ್ನೊಂದೆಡೆ ಟೀಂ ಇಂಡಿಯಾ ಎದುರು ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿರುವ ಆತಿಥೇಯ ವೆಸ್ಟ್ ಇಂಡೀಸ್ ತಂಡವು ಎರಡನೇ ಪಂದ್ಯ ಗೆದ್ದು, ಸರಣಿ ಗೆಲ್ಲುವ ಕನಸನ್ನು ಜೀವಂತವಾಗಿರಿಸಿಕೊಳ್ಳಲು ಎದುರು ನೋಡುತ್ತಿದೆ. ಹೀಗಾಗಬೇಕಾದರೇ ತಂಡದ ಎಲ್ಲಾ ಹನ್ನೊಂದು ಆಟಗಾರರು 100% ಕೊಡುಗೆ ನೀಡಿದರಷ್ಟೇ ಕೆರಿಬಿಯನ್ ಪಡೆ ಬಲಿಷ್ಠ ಟೀಂ ಇಂಡಿಯಾಗೆ ತಿರುಗೇಟು ನೀಡಲು ಸಾಧ್ಯ.
undefined
ಹೀಗಿರುವಾಗಲೇ, ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಜುಲೈ 29ರಂದು ನಡೆಯಲಿರುವ ಪಂದ್ಯದ ಹವಾಮಾನ ವಾತಾವರಣ ಕ್ರಿಕೆಟ್ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಇಂದು ನಡೆಯುವ ಪಂದ್ಯದ ವೇಳೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾಗಶಃ ಮೋಡ ಹಾಗೂ ಇಬ್ಬನಿಯ ವಾತಾವರಣವಿರಲಿದೆ. ದುರಾದೃಷ್ಟವಶಾತ್ ಎರಡನೇ ಏಕದಿನ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಯಾಗಿದೆ. ಪಂದ್ಯ ನಡೆಯುವ ಸ್ಟೇಡಿಯಂ ಪ್ರದೇಶದಲ್ಲಿ ಸಂಜೆಯ ವೇಳೆಗೆ ಮೋಡ ಕವಿದ ವಾತಾವರಣವಿರಲಿದ್ದು, ತುಂತುರು ಅಥವಾ ಗುಡುಗು ಸಹಿತ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಪಂದ್ಯ ನಡೆಯುವ ಸಂದರ್ಭದಲ್ಲಿ ಗಾಳಿಯು ಪ್ರತಿ ಗಂಟೆಗೆ 25 ಕಿಲೋಮೀಟರ್ ವೇಗದಲ್ಲಿ ಬೀಸಲಿದೆ. ಇದು ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ. ಆಟಗಾರರು ಈ ವಾತಾವರಣಕ್ಕೆ ಸಜ್ಜಾಗಿಯೇ ಕಣಕ್ಕಿಳಿಯಬೇಕಾಗುತ್ತದೆ. ಇನ್ನು ಪಂದ್ಯದ ಸಂದರ್ಭದಲ್ಲಿ ಉಷ್ಣಾಂಶ 26ರಿಂದ 30 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಸಂಭಾವ್ಯ ತಂಡಗಳು ಹೀಗಿವೆ
ಭಾರತ:
ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್/ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಉಮ್ರಾನ್ ಮಲಿಕ್, ಮುಕೇಶ್ ಕುಮಾರ್.
ವೆಸ್ಟ್ ಇಂಡೀಸ್:
ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ಅಥನಾಜ್, ಶಾಯ್ ಹೋಪ್ (ನಾಯಕ), ಶಿಮ್ರೊನ್ ಹೆಟ್ಮೇಯರ್, ರೋವ್ಮನ್ ಪೋವೆಲ್/ ಕಾರ್ಟಿ, ರೊಮ್ಯಾರಿಯಾ ಶೆಫರ್ಡ್, ಡ್ರೇಕ್ಸ್, ಕರಿಹಾ, ಗುಡಾಕೇಶ್, ಜೇಡನ್ ಸೀಲ್ಸ್/ಅಲ್ಜಾರಿ ಜೋಸೆಫ್.
ಪಿಚ್ ರಿಪೋರ್ಟ್:
ಮೊದಲ ಪಂದ್ಯದಲ್ಲಿ ಬಾರ್ಬಡೋಸ್‌ನ ಪಿಚ್ ವರ್ತಿಸಿದ ರೀತಿ ನೋಡಿ ರೋಹಿತ್ ಹಾಗೂ ಹೋಪ್ ಇಬ್ಬರೂ ಅಚ್ಚರಿ ವ್ಯಕ್ತಪಡಿಸಿದ್ದರು. ಎರಡೂ ತಂಡಗಳು ಹೆಚ್ಚುವರಿ ಸ್ಪಿನ್ನರ್ ಅನ್ನು ಆಡಿಸಬಹುದು. ಶನಿವಾರ 50% ಮಳೆ ಬೀಳುವ ಸಾಧ್ಯತೆ ಇದ್ದು, ಪಂದ್ಯಕ್ಕೆ ಅಡ್ಡಿಯಾಗಬಹುದು.
ಪಂದ್ಯ ಆರಂಭ: ಸಂಜೆ 7 ಗಂಟೆ
ನೇರ ಪ್ರವಾರ: ಜಿಯೊ ಸಿನಿಮಾ, ಡಿಡಿ ಚಂದನ, ಡಿಡಿ ಸ್ಪೋರ್ಟ್ಸ್