ಸರ್ಫರಾಜ್ ಖಾನ್‌ಗೆ ಯಾಕಿಲ್ಲ ಟೀಂ ಇಂಡಿಯಾದಲ್ಲಿ ಸ್ಥಾನ? ಕೊನೆಗೂ ಮೌನ ಮುರಿದ ಬಿಸಿಸಿಐ..!

By Naveen KodaseFirst Published Jan 27, 2023, 2:06 PM IST
Highlights

ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫಲವಾಗಿರುವ ಸರ್ಫರಾಜ್ ಖಾನ್
ದೇಶಿ ಕ್ರಿಕೆಟ್‌ನಲ್ಲಿ ರನ್ ರಾಶಿ ಕಲೆಹಾಕಿರುವ ಮುಂಬೈ ಮೂಲದ ಕ್ರಿಕೆಟಿಗ ಸರ್ಫರಾಜ್
ಮೊದಲ ಬಾರಿಗೆ ಈ ಕುರಿತಂತೆ ಮೌನ ಮುರಿದ ಬಿಸಿಸಿಐ

ಮುಂಬೈ(ಜ.27): ಸದ್ಯದ ಮಟ್ಟಿಗೆ ದೇಶಿ ಕ್ರಿಕೆಟ್‌ನಲ್ಲಿ ಅತ್ಯದ್ಭುತ ಲಯದಲ್ಲಿರುವ ಬ್ಯಾಟರ್ ಯಾರು ಎಂದು ಕೇಳಿದರೇ ತಕ್ಷಣ ನೆನಪಾಗುವುದು ಮುಂಬೈ ಮೂಲದ ಪ್ರತಿಭಾನ್ವಿತ ಬ್ಯಾಟರ್ ಸರ್ಫರಾಜ್ ಖಾನ್. ರಣಜಿ ಟ್ರೋಫಿ ಸೇರಿದಂತೆ ಹಲವು ಟೂರ್ನಿಗಳಲ್ಲಿ ಶತಕಗಳ ಮೇಲೆ ಶತಕ ಸಿಡಿಸಿ ಅಬ್ಬರಿಸುತ್ತಿರುವ ಸರ್ಫರಾಜ್ ಖಾನ್‌, ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆಯಲು ಮತ್ತೆ ವಿಫಲವಾಗಿದ್ದಾರೆ. ಇದು ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಇದೀಗ ಸರ್ಫರಾಜ್ ಖಾನ್ ಅವರನ್ನು ಆಯ್ಕೆ ಮಾಡಲು ಇರುವುದಕ್ಕೆ ಕಾರಣವೇನು ಎನ್ನುವ ಬಗ್ಗೆ ಮೊದಲ ಬಾರಿಗೆ ಬಿಸಿಸಿಐ ತುಟಿಬಿಚ್ಚಿದೆ.

ಆಸ್ಟ್ರೇಲಿಯಾ ವಿರುದ್ದ ತವರಿನಲ್ಲಿ ನಡೆಯಲಿರುವ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ತಂಡವನ್ನು ಆಯ್ಕೆ ಮಾಡುವಾಗ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಅವರಿಗೆ ಮಣೆಹಾಕಲಾಗಿತ್ತು. ಆದರೆ ರನ್ ಮಷೀನ್ ಎಂದೇ ಗುರುತಿಸಿಕೊಂಡಿರುವ ಸರ್ಫರಾಜ್ ಖಾನ್ ಅವರನ್ನು ಕಡೆಗಣಿಸಿದ್ದು, ಸುನಿಲ್ ಗವಾಸ್ಕರ್ ಸೇರಿದಂತೆ ಹಲವು ದಿಗ್ಗಜ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

ಇದೀಗ ಭಾರತ ತಂಡದೊಳಗೆ ಸರ್ಫರಾಜ್ ಖಾನ್ ಅವರಿಗೆ ಸ್ಥಾನ ನೀಡದಿರುವ ಕುರಿತಂತೆ ಟೀಂ ಇಂಡಿಯಾ ಆಯ್ಕೆ ಸಮಿತಿ ಸದಸ್ಯ ಶ್ರೀಧರನ್ ಶರತ್, ಇದೇ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ. Sportstar ಸುದ್ದಿವಾಹಿನಿಗೆ ನೀಡಿದ ಪ್ರತಿಕ್ರಿಯೆ ವೇಳೆ ಶ್ರೀಧರನ್ ಶರತ್, "ಕೊಹ್ಲಿ ಈಗಲೂ ಮ್ಯಾಚ್ ವಿನ್ನರ್ ಆಗಿದ್ದಾರೆ. ಚೇತೇಶ್ವರ್ ಪೂಜಾರ ಬ್ಯಾಟಿಂಗ್‌ನಲ್ಲಿ ಆಸರೆಯಾಗುತ್ತಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದ ಜತೆಗೆ ಒಳ್ಳೆಯ ರೀತಿಯಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಶ್ರೇಯಸ್ ಅಯ್ಯರ್ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಶುಭ್‌ಮನ್ ಗಿಲ್ ಮತ್ತು ಕೆ ಎಲ್ ರಾಹುಲ್‌ ಕೂಡಾ ಒಳ್ಳೆಯ ಬ್ಯಾಟಿಂಗ್ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದು ಹೇಳಿದ್ದಾರೆ.  ತಂಡದೊಳಗೆ ಒಳ್ಳೆಯ ಹೊಂದಾಣಿಕೆ ಹಾಗೂ ಬ್ಯಾಲೆನ್ಸ್‌ ಇರುವುದರಿಂದಾಗಿಯೇ ಸರ್ಫರಾಜ್ ಖಾನ್‌ಗೆ ಭಾರತ ತಂಡದೊಳಗೆ ಸ್ಥಾನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸ್ಲಿಮ್ ಬೇಕಿದ್ದರೇ ಫ್ಯಾಶನ್ ಶೋಗೆ ಹೋಗಿ..! ಸರ್ಫರಾಜ್ ಕಡೆಗಣನೆ ಕುರಿತ ಆಯ್ಕೆ ಸಮಿತಿಗೆ ಚಾಟಿ ಬೀಸಿದ ಸನ್ನಿ..!

ಸರ್ಫರಾಜ್ ಖಾನ್ ಅವರು ನಮ್ಮ ನಿಗಾದಲ್ಲಿಯೇ ಇದ್ದಾರೆ. ಅವರಿಗೂ ಖಂಡಿತವಾಗಿಯೂ ತಂಡದೊಳಗೆ ಸ್ಥಾನ ಸಿಗಲಿದೆ. ನಾವು ತಂಡವನ್ನು ಆಯ್ಕೆ ಮಾಡುವಾಗ ಸಾಕಷ್ಟು ಸಮತೋಲಿತ ಹಾಗೂ ಸಂಯೋಜಿತ ತಂಡವನ್ನು ಆಯ್ಕೆ ಮಾಡುವುದಕ್ಕೆ ಹೆಚ್ಚು ಒತ್ತು ಕೊಡುತ್ತೇವೆ ಎಂದು ಶ್ರೀಧರನ್ ಶರತ್ ಹೇಳಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವು ಫೆಬ್ರವರಿ 09ರಿಂದ ಆರಂಭವಾಗಲಿದೆ. ಈಗಾಗಲೇ ಈ ಸರಣಿಯ ಮೊದಲೆರಡು ಪಂದ್ಯಗಳಿಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡಿದ್ದು, ಕೊನೆಯ ಎರಡು ಪಂದ್ಯಕ್ಕೆ ಸರ್ಫರಾಜ್ ಖಾನ್‌ಗೆ ಭಾರತ ತಂಡದಿಂದ ಬುಲಾವ್ ಬಂದರೂ ಅಚ್ಚರಿಯಿಲ್ಲ.

ಆಸೀಸ್‌ ಟೆಸ್ಟ್‌ ಸರಣಿಗೆ ಭಾರತ ತಂಡ ಹೀಗಿದೆ: 

ರೋಹಿತ್‌ ಶರ್ಮಾ, ಕೆ ಎಲ್ ರಾಹುಲ್‌, ಶುಭ್‌ಮನ್ ಗಿಲ್‌, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ ಎಸ್ ಭರತ್‌, ಇಶಾನ್ ಕಿಶನ್‌, ರವಿಚಂದ್ರನ್‌ ಅಶ್ವಿನ್‌, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌, ಉಮೇಶ್‌ ಯಾದವ್, ಜಯದೇವ್ ಉನಾದ್ಕತ್‌.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ವೇಳಾಪಟ್ಟಿ ಹೀಗಿದೆ: 

ಫೆಬ್ರವರಿ 9-12: ಮೊದಲ ಟೆಸ್ಟ್- ನಾಗ್ಪುರ
ಫೆಬ್ರವರಿ 17-21: ಎರಡನೇ ಟೆಸ್ಟ್- ಡೆಲ್ಲಿ
ಮಾರ್ಚ್‌ 01-05: ಮೂರನೇ ಟೆಸ್ಟ್ - ಧರ್ಮಶಾಲಾ
ಮಾರ್ಚ್‌ 09-13: ನಾಲ್ಕನೇ ಟೆಸ್ಟ್ - ಅಹಮದಾಬಾದ್
 

click me!