
ವಡೋದರ(ಜ.27): ಭಾರತ ಕ್ರಿಕೆಟ್ ತಂಡದ ತಾರಾ ಆಲ್ರೌಂಡರ್ ಅಕ್ಷರ್ ಪಟೇಲ್, ಗುರುವಾರ ತಮ್ಮ ಬಹುಕಾಲದ ಗೆಳತಿ ಮೆಹಾ ಪಟೇಲ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ತಮ್ಮ ಮದುವೆ ಕಾರ್ಯವಿದ್ದಿದ್ದರಿಂದಲೇ ಅಕ್ಷರ್ ಪಟೇಲ್, ತವರಿನಲ್ಲಿ ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿಯಿಂದ ಹಿಂದೆ ಸರಿದಿದ್ದರು. ಸಹ ಆಟಗಾರ ಕೆ ಎಲ್ ರಾಹುಲ್, ಆಥಿಯಾ ಶೆಟ್ಟಿಯವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಕೆಲವೇ ದಿನಗಳಲ್ಲಿ ಅಕ್ಷರ್ ಪಟೇಲ್ ಕೂಡಾ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಹೀಗಿದ್ದೂ ಅಕ್ಷರ್ ಪಟೇಲ್, ಇದುವರೆಗೂ ತಮ್ಮ ಮದುವೆಯ ಫೋಟೋ ಅಥವಾ ವಿಡಿಯೋವನ್ನು ಹಂಚಿಕೊಂಡಿಲ್ಲ, ಆದರೆ ಕೆಲವು ಅಭಿಮಾನಿಗಳು, ಹಾಗೂ ನೆಟ್ಟಿಗರು ಅಕ್ಷರ್ ಪಟೇಲ್ ಮದುವೆಯ ಝಲಕ್‌ನ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಅಕ್ಷರ್ ಪಟೇಲ್, ಭಾರತದ ತಾರಾ ಆಲ್ರೌಂಡರ್‌ಗಳಲ್ಲಿ ಒಬ್ಬರೆನಿಸಿದ್ದು, ಈಗಾಗಲೇ ಕೆಲವು ಪಂದ್ಯಗಳಲ್ಲಿ ಏಕಾಂಗಿಯಾಗಿಯೇ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಬೌಲಿಂಗ್ ಆಲ್ರೌಂಡರ್ ಆಗಿ ಭಾರತ ತಂಡ ಕೂಡಿಕೊಂಡಿದ್ದ, ಅಕ್ಷರ್ ಪಟೇಲ್, ಇದೀಗ ಬ್ಯಾಟಿಂಗ್‌ನಲ್ಲೂ ಮಹತ್ತರ ಕಾಣಿಕೆ ನೀಡುವ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಇದೀಗ ಅಕ್ಷರ್ ಪಟೇಲ್ ಅವರ ಮದುವೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಅಕ್ಷರ್ ಪಟೇಲ್ ವಿವಾಹದ ಸಂದರ್ಭದಲ್ಲಿ ತಮ್ಮ ಬಾಲ್ಯದ ಗೆಳೆಯ ಜಯದೇವ್ ಉನಾದ್ಕತ್ ಸೇರಿದಂತೆ ಹಲವು ಕ್ರಿಕೆಟಿಗರು ಭಾಗಿಯಾಗಿದ್ದರು.
ಮದುವೆಯಲ್ಲಿ ಬಿಂದಾಸ್ ಸ್ಟೆಪ್ಸ್ ಹಾಕಿದ ಅಕ್ಷರ್ ಪಟೇಲ್: ಟೀಂ ಇಂಡಿಯಾ ಆಲ್ರೌಂಡರ್ ಅಕ್ಷರ್ ಪಟೇಲ್, ಬಹುಕಾಲದಿಂದ ಮೆಹಾ ಪಟೇಲ್ ಜತೆ ಡೇಟಿಂಗ್ ನಡೆಸುತ್ತಿದ್ದು, ಕಳೆದ 2022ರ ಜನವರಿಯಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಕ್ಷರ್ ಪಟೇಲ್ ಪತ್ನಿ ಓರ್ವ ಡಯಟೇಷಿಯನ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ಸಕ್ರಿಯರಾಗಿದ್ದಾರೆ. ಇನ್ನು ಅಕ್ಷರ್ ಪಟೇಲ್ ಕೂಡಾ ಇದೀಗ ತಮ್ಮ ಮದುವೆಯಲ್ಲಿ ಬಿಂದಾಸ್ ಸ್ಟೆಪ್ಸ್ ಹಾಕಿ ಗಮನ ಸೆಳೆದಿದ್ದಾರೆ.
ಅಕ್ಷರ್ ಪಟೇಲ್, ಸದ್ಯ ಟೀಂ ಇಂಡಿಯಾ ಪರ ಬ್ಯಾಟ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿನ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇದೀಗ ನ್ಯೂಜಿಲೆಂಡ್ ಎದುರಿನ ಸೀಮಿತ ಓವರ್‌ಗಳ ಸರಣಿಯಿಂದ ಹಿಂದೆ ಸರಿದಿರುವ ಅಕ್ಷರ್ ಪಟೇಲ್, ಮುಂಬರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ವೇಳೆಗೆ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ. ತವರಿನಲ್ಲಿ ಅದ್ಭುತ ಪ್ರದರ್ಶನ ತೋರುತ್ತಾ ಬಂದಿರುವ ಅಕ್ಷರ್ ಪಟೇಲ್, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಬ್ಯಾಟರ್‌ಗಳನ್ನು ಕಾಡುವ ನಿರೀಕ್ಷೆಯಿದೆ.
ಅಳಿಯ ಕೆಎಲ್ ರಾಹುಲ್‌ಗೆ 50 ಕೋಟಿಯ ಬಂಗಲೆ ಗಿಫ್ಟ್ ನೀಡಿದ ಸುನೀಲ್ ಶೆಟ್ಟಿ?
ಆಸೀಸ್ ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ ಎಸ್ ಭರತ್, ಇಶಾನ್ ಕಿಶನ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ವೇಳಾಪಟ್ಟಿ ಹೀಗಿದೆ:
ಫೆಬ್ರವರಿ 9-12: ಮೊದಲ ಟೆಸ್ಟ್- ನಾಗ್ಪುರ
ಫೆಬ್ರವರಿ 17-21: ಎರಡನೇ ಟೆಸ್ಟ್- ಡೆಲ್ಲಿ
ಮಾರ್ಚ್ 01-05: ಮೂರನೇ ಟೆಸ್ಟ್ - ಧರ್ಮಶಾಲಾ
ಮಾರ್ಚ್ 09-13: ನಾಲ್ಕನೇ ಟೆಸ್ಟ್ - ಅಹಮದಾಬಾದ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.