
ಬೆಂಗಳೂರು: ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 5 ರನ್ ನೀಡಿ 3 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗೆದ್ದ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಟೀಂ ಇಂಡಿಯಾಗೆ ಯಾಕೆ ಪರಿಗಣಿಸುತ್ತಿಲ್ಲ ಎಂದು ಭಾರತದ ಮಾಜಿ ಚೀಫ್ ಸೆಲೆಕ್ಟರ್ ಕೃಷ್ಣಮಾಚಾರಿ ಶ್ರೀಕಾಂತ್ ಪ್ರಶ್ನಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭುವಿ ಬೌಲಿಂಗ್ ಪ್ರದರ್ಶನ ಅದ್ಭುತವಾಗಿತ್ತು ಎಂದು ಹೇಳಿದ್ದಾರೆ. "ಸೀಮ್ ಮತ್ತು ಸ್ವಿಂಗ್‌ನಿಂದ ಬ್ಯಾಟರ್‌ಗಳನ್ನು ನಡುಗಿಸುವ ತಾಕತ್ತು ಭುವಿಗೆ ಈಗಲೂ ಇದೆ. ಇಷ್ಟು ಒಳ್ಳೆ ಫಾರ್ಮ್‌ನಲ್ಲಿರುವ ಆಟಗಾರ ಟೀಂ ಇಂಡಿಯಾದಲ್ಲಿ ಇಲ್ಲ ಅನ್ನೋದನ್ನು ನಂಬೋಕೆ ಆಗ್ತಿಲ್ಲ. ತನ್ನ ಮೊದಲ ಸ್ಪೆಲ್‌ನಲ್ಲೇ ಪಂದ್ಯವನ್ನು ತಿರುಗಿಸುವ ಸಾಮರ್ಥ್ಯ ಅವನಿಗಿದೆ. 2022ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಒಂದು ಕೆಟ್ಟ ಸ್ಪೆಲ್ ಬೌಲ್ ಮಾಡಿದ್ದೇ ಭುವಿಗೆ ಟೀಂ ಇಂಡಿಯಾದಿಂದ ಹೊರಹೋಗಲು ಕಾರಣವಾಯ್ತು. ಆದರೆ, ಆ ನಂತರವೂ ಐಪಿಎಲ್‌ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಸೆಲೆಕ್ಟರ್ಸ್ ಕಡೆಗಣಿಸುತ್ತಿರುವುದು ಆಶ್ಚರ್ಯ ತಂದಿದೆ," ಎಂದು ಶ್ರೀಕಾಂತ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸೀಸನ್‌ನಲ್ಲಿ ಭುವನೇಶ್ವರ್ ಕುಮಾರ್ ಇಲ್ಲಿಯವರೆಗೆ 8 ಪಂದ್ಯಗಳಿಂದ 14 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಅವರ ಬೌಲಿಂಗ್ ಸರಾಸರಿ 17ಕ್ಕಿಂತ ಕಡಿಮೆ ಇದ್ದರೆ, ಎಕಾನಮಿ ರೇಟ್ 7.61 ಆಗಿದೆ. ಭುವನೇಶ್ವರ್ ಕುಮಾರ್ ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಮಾರಕ ಬೌಲಿಂಗ್ ದಾಳಿ ಸಂಘಟಿಸುವ ಮೂಲಕ ಎದುರಾಳಿ ಬ್ಯಾಟರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದಾರೆ. ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಎದುರು ಮೂರು ಓವರ್ ಬೌಲಿಂಗ್ ಮಾಡಿದ ಭುವಿ ಕೇವಲ ಐದು ರನ್ ನೀಡಿ ಪ್ರಮುಖ ಮೂರು ವಿಕೆಟ್ ಕಬಳಿಸಿ ಪಂದ್ಯ ಆರ್‌ಸಿಬಿ ತೆಕ್ಕೆಗೆ ಜಾರುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದೇ ವೇಳೆ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ಸಾಧಿಸಿದ್ದರೂ, ಆರ್‌ಸಿಬಿ ತಂಡದ ಆಯ್ಕೆಯ ಬಗ್ಗೆಯೂ ಶ್ರೀಕಾಂತ್ ಟೀಕಿಸಿದ್ದಾರೆ. ತಂಡದ ಆಲ್‌ರೌಂಡರ್ ರೊಮಾರಿಯೋ ಶೆಪರ್ಡ್ ಅವರನ್ನು ಪ್ಲೇಯಿಂಗ್ XI ನಲ್ಲಿ ಉಳಿಸಿಕೊಂಡಿರುವುದಕ್ಕೆ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
"ಆರ್‌ಸಿಬಿಗೆ ಉತ್ತಮ ಬೌಲಿಂಗ್ ಲೈನ್-ಅಪ್ ಇದೆ. ಶೆಪರ್ಡ್ ಅವರನ್ನು 'ಲಕ್ಕಿ ಚಾರ್ಮ್' ಆಗಿರಬಹುದು. ಕಳೆದ ವರ್ಷ ಕಪ್ ಗೆದ್ದಾಗಲೂ ಆತ ತಂಡದಲ್ಲಿದ್ದ, ಈಗಲೂ ತಂಡ ಗೆಲ್ಲುತ್ತಿದೆ. ಈ ಅದೃಷ್ಟದಿಂದ ಮಾತ್ರ ಶೆಪರ್ಡ್ ತಂಡದಲ್ಲಿದ್ದಾನೆ. ಪ್ರದರ್ಶನ ನೋಡಿ ಅಲ್ಲ," ಎಂದು ಶ್ರೀಕಾಂತ್ ನೇರವಾಗಿ ಹೇಳಿದ್ದಾರೆ. ಈ ಸೀಸನ್‌ನಲ್ಲಿ ಶೆಪರ್ಡ್ 14.50ರ ಕಳಪೆ ಎಕಾನಮಿ ರೇಟ್‌ನಲ್ಲಿ ಬೌಲಿಂಗ್ ಮಾಡಿದ್ದಾರೆ. ಡೆಲ್ಲಿ ವಿರುದ್ಧ ಆರ್‌ಸಿಬಿ ಬೌಲರ್‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರೂ, ಶೆಪರ್ಡ್ ಮಾತ್ರ ಎರಡು ಓವರ್‌ಗಳಲ್ಲಿ 21 ರನ್ ಬಿಟ್ಟುಕೊಟ್ಟಿದ್ದರು.
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ತಂಡವನ್ನು ಅವರದ್ದೇ ಮೈದಾನದಲ್ಲಿ 9 ವಿಕೆಟ್‌ಗಳ ಅಂತರದಲ್ಲಿ ಬಗ್ಗುಬಡಿಯುವ ಮೂಲಕ ತವರಿನಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ಗೆಲುವಿನೊಂದಿಗೆ ಆರ್‌ಸಿಬಿ ತಂಡವು ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಎರಡನೇ ಸ್ಥಾನಕ್ಕೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಸದ್ಯ ಆರ್‌ಸಿಬಿ ತಂಡವು ಆಡಿದ ಎಂಟು ಪಂದ್ಯಗಳ ಪೈಕಿ ಆರು ಗೆಲುವು ಹಾಗೂ ಎರಡು ಸೋಲು ಸಹಿತ 12 ಅಂಕಗಳನ್ನು ಹೊಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.