
ಬೆಂಗಳೂರು: 2010ರ ದಶಕದಿಂದ ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್ ಹಾಗೂ ಜೋ ರೂಟ್ ಇವರನ್ನು ಕ್ರಿಕೆಟ್ ಜಗತ್ತಿನ ಫ್ಯಾಬ್ 4 ಎಂದು ಕರೆಯಲಾಗುತ್ತಿತ್ತು. ಈ ನಾಲ್ವರು ಕ್ರಿಕೆಟ್ ಜಗತ್ತಿನ ಮೂರು ಮಾದರಿಯಲ್ಲೂ ಅತ್ಯದ್ಭುತ ಪ್ರದರ್ಶನ ತೋರುವ ಮೂಲಕ ತಮ್ಮ ಅಸಾಧಾರಣ ಪ್ರತಿಭೆಯ ಮೂಲಕ ಮಿಂಚಿದ್ದರು. ಎಲ್ಲಾ ಕ್ರಿಕೆಟಿಗರು ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿದ್ದರೂ, ಕೆಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.
ವಿರಾಟ್ ಕೊಹ್ಲಿ ಈಗಾಗಲೇ ಅಂತಾರಾಷ್ಟ್ರೀಯ ಟಿ20 ಹಾಗೂ ಟೆಸ್ಟ್ ಮಾದರಿಗೆ ವಿದಾಯ ಘೋಷಿಸಿದ್ದಾರೆ. ಇನ್ನು ಸ್ಟೀವ್ ಸ್ಮಿತ್ ಏಕದಿನ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದಾರೆ. ಹೀಗಿರುವಾಗಲೇ ಮುಂದಿನ ಫ್ಯಾಬ್ 4 ಯಾರಾಗಬಹುದು ಎನ್ನುವ ಚರ್ಚೆ ಜೋರಾಗಿದೆ. ಇದಕ್ಕೆ ನ್ಯೂಜಿಲೆಂಡ್ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಪ್ರತಿಕ್ರಿಯೆ ನೀಡಿದ್ದು, ಈ ಪಟ್ಟಿಯಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನ ನೀಡಿದ್ದಾರೆ.
ಮುಂಬರುವ ದಿನಗಳಲ್ಲಿ ಎಲ್ಲಾ ಮಾದರಿಯನ್ನು ಪ್ರತಿನಿಧಿಸುವ ಫ್ಯಾಬ್ 4 ಆಟಗಾರರು ಯಾರಾಗಬಹುದು ಎನ್ನು ಪ್ರಶ್ನೆಗೆ ಕೇನ್ ವಿಲಿಯಮ್ಸನ್ ಉತ್ತರ ನೀಡಿದ್ದಾರೆ. ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ರಚಿನ್ ರವೀಂದ್ರ, ಹ್ಯಾರಿ ಬ್ರೂಕ್ ಹಾಗೂ ಕ್ಯಾಮರೋನ್ ಗ್ರೀನ್ ಇವರೆಲ್ಲಾ ಸದ್ಯದ ಮಟ್ಟಿಗೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇವರೆಲ್ಲರೂ ಯುವ ಅಟಗಾರರಾಗಿದ್ದು, ಈಗ ಬೆಳೆಯುತ್ತಿದ್ದಾರೆ ಎಂದು ಕೇನ್ ವಿಲಿಯಮ್ಸನ್ ಅಭಿಪ್ರಾಯಪಟ್ಟಿದ್ದಾರೆ.
ಯಶಸ್ವಿ ಜೈಸ್ವಾಲ್ ಹಾಗೂ ಶುಭ್‌ಮನ್ ಗಿಲ್ ಇತ್ತೀಚಿಗಿನ ವರ್ಷಗಳಲ್ಲಿ ಟೀಂ ಇಂಡಿಯಾ ಪರ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿರುವುದರಿಂದ ಗಿಲ್ ಹಾಗೂ ಜೈಸ್ವಾಲ್ ಅವರ ಮೇಲೆ ಸಾಕಷ್ಟು ನಿರೀಕ್ಷೆ ಹಾಗೂ ಜವಾಬ್ದಾರಿಗಳು ಹೆಗಲೇರಿವೆ.
ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಡೇರಲ್ ಕಾಲಿನನ್, ಸದ್ಯದ ಫ್ಯಾಬ್ 4 ಆಟಗಾರರ ಪೈಕಿ ವಿರಾಟ್ ಕೊಹ್ಲಿ ಅತ್ಯುತ್ತಮ ಆಟಗಾರ ಎಂದು ಬಣ್ಣಿಸಿದ್ದರು. ಈ ಕುರಿತಂತೆ ಮಾತನಾಡಿದ ಅವರು, ಫ್ಯಾಬ್ ಫೋರ್ ಪೈಕಿ ಎಲ್ಲರೂ ಅದ್ಭುತ ಆಟವಾಡುತ್ತಿದ್ದಾರೆ. ಆದರೆ ವೈಯುಕ್ತಿಕವಾಗಿ ಹೇಳಬೇಕೆಂದರೆ, ವಿರಾಟ್ ಕೊಹ್ಲಿ, ಉಳಿದ ಮೂವರಿಗೆ ಹೋಲಿಸಿದರೆ, ಜವಾಬ್ದಾರಿ ಹೊತ್ತುಕೊಂಡು ಆಡುವ ವಿಚಾರದಲ್ಲಿ ವಿರಾಟ್ ಕೊಹ್ಲಿ ಉಳಿದೆಲ್ಲರಿಗಿಂತ ಮೇಲ್ಪಂಕ್ತಿಯಲ್ಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜೋ ರೂಟ್, ಕೇನ್ ವಿಲಿಯಮ್ಸನ್ ಹಾಗೂ ಸ್ಟೀವ್ ಸ್ಮಿತ್ ಈ ಮೂವರು ಒಳ್ಳೆಯ ಆಟಗಾರರು. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಭಾರತದ ಮಟ್ಟಿಗೆ ಪಂದ್ಯವನ್ನು ಗೆಲ್ಲಿಸುವುದರಿಂದ ಹಿಡಿದು, ದೊಡ್ಡ ಗುರಿ ಬೆನ್ನತ್ತುವಾಗ, ಇನ್ನಿಂಗ್ಸ್‌ನಲ್ಲಿ ಪರಿಸ್ಥಿತಿಗೆ ತಕ್ಕಂತೆ ಆಟವಾಡುವ ರೀತಿಯನ್ನು ಗಮನಿಸಿದಾಗ ಕೊಹ್ಲಿ ಉಳಿದವರಿಗಿಂತ ಭಿನ್ನವಾಗಿ ಕಾಣುತ್ತಾರೆ ಎಂದು ಡೇರಲ್ ಕಾಲಿನನ್ ಹೇಳಿದ್ದಾರೆ.
ಸದ್ಯ ಭಾರತದ ಶುಭ್‌ಮನ್ ಗಿಲ್ ಟೆಸ್ಟ್ ತಂಡದ ನೂತನ ನಾಯಕರಾಗಿ ನೇಮಕವಾಗಿದ್ದಾರೆ. ಇನ್ನು ಯಶಸ್ವಿ ಜೈಸ್ವಾಲ್ ಕೂಡಾ ಭಾರತ ತಂಡದ ಭವಿಷ್ಯದ ಸೂಪರ್ ಸ್ಟಾರ್ ಎಂದು ಗುರುತಿಸಿಕೊಂಡಿದ್ದಾರೆ. ಇದೀಗ ಭಾರತ ತಂಡವು ಇಂಗ್ಲೆಂಡ್ ಪ್ರವಾಸದಲ್ಲಿದ್ದು, 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಸಜ್ಜಾಗಿದೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ಪ್ರವಾಸ ಭಾರತದ ಪಾಲಿಗೆ ಅಗ್ನಿ ಪರೀಕ್ಷೆ ಎನಿಸಲಿದ್ದು, ಶುಭ್‌ಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಜವಾಬ್ದಾರಿಯುತ ಆಟವಾಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.