* ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೆ ಕ್ಷಣಗಣನೆ
* ಮೊದಲ ಸೆಮೀಸ್‌ನಲ್ಲಿ ಪಾಕಿಸ್ತಾನ-ನ್ಯೂಜಿಲೆಂಡ್ ಮುಖಾಮುಖಿ
* ಎರಡನೇ ಸೆಮೀಸ್‌ನಲ್ಲಿ ಭಾರತ- ಇಂಗ್ಲೆಂಡ್ ಕಾದಾಟ
* ಮಳೆಯಿಂದ ಸೆಮೀಸ್ ರದ್ದಾರೆ ಫೈನಲ್ ಪ್ರವೇಶ ಯಾರಿಗೆ?
ಬೆಂಗಳೂರು(ನ.08): ಕಾಂಗರೂ ನಾಡಿನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಳೆರಾಯ ಹಲವು ಪಂದ್ಯಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾನೆ. ಕೆಲ ಪಂದ್ಯಗಳು ಮಳೆಯಿಂದ ರದ್ದಾದರೇ, ಮತ್ತೆ ಕೆಲ ಪಂದ್ಯಗಳಲ್ಲಿ ಫಲಿತಾಂಶಕ್ಕಾಗಿ ಡೆಕ್ವರ್ಥ್ ಲೂಯಿಸ್ ನಿಯಮದ ಮೊರೆಹೋಗಲಾಯಿತು. ಹೀಗಾಗಿ ಇದೀಗ ಚುಟುಕು ಕ್ರಿಕೆಟ್ ವಿಶ್ವಕಪ್ ನಿರ್ಣಾಯಕ ಘಟ್ಟ ತಲುಪಿರುವ ಬೆನ್ನಲ್ಲೇ ಐಸಿಸಿ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಸದ್ಯ ನವೆಂಬರ್ 09ರಂದು ನಡೆಯಲಿರುವ ಮೊದಲ ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕೆ ಸಿಡ್ನಿ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ. ಇನ್ನೊಂದಡೆ ನವೆಂಬರ್ 10ರಂದು ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ದ ಕಾದಾಡಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಅಡಿಲೇಡ್ ಓವಲ್ ಮೈದಾನ ಸಾಕ್ಷಿಯಾಗಲಿದೆ. ಸೆಮಿಫೈನಲ್‌ನಲ್ಲಿ ವಿಜೇತವಾಗುವ ತಂಡಗಳು ನವೆಂಬರ್ 13ರಂದು ಐತಿಹಾಸಿಕ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.
undefined
360 ಡಿಗ್ರಿ ಬ್ಯಾಟಿಂಗ್ ಸೀಕ್ರೇಟ್: ರಬ್ಬರ್ ಬಾಲಲ್ಲಿ ಕ್ರಿಕೆಟ್ ಆಡ್ತಿದ್ದೆ ಎಂದ ಸೂರ್ಯಕುಮಾರ್
ಗುರುವಾರ ಭಾರತೀಯ ಕಾಲಮಾನ 1.30ರಿಂದ ಆರಂಭವಾಗಲಿರುವ ಎರಡನೇ ಸೆಮಿಫೈನಲ್ ಪಂದ್ಯವು ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯಲಿದ್ದು, ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಸೆಣಸಾಟ ನಡೆಸಲಿವೆ. ಸದ್ಯದ ಹವಾಮಾನ ವರದಿಯ ಪ್ರಕಾರ, ಅಡಿಲೇಡ್ ಓವಲ್ ಮೈದಾನದಲ್ಲಿ ಗುರುವಾರ ಮೋಡ ಕವಿದ ವಾತಾವರಣ ಇರಲಿದ್ದು, 8% ಮಳೆ ಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಸೆಮೀಸ್ ನಡೆಯುವ ಒಂದು ದಿನ ಮುನ್ನ 43-55% ಮಳೆ ಬೀಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಹೀಗಾಗಿ ಎರಡನೇ ಸೆಮೀಸ್‌ಗೂ ಮಳೆರಾಯ ಅಡ್ಡಿಯಾದರೂ ಅಚ್ಚರಿಪಡುವಂತಿಲ್ಲ.
ನಾಕೌಟ್ ಫಲಿತಾಂಶಕ್ಕೆ ತಲಾ 10 ಓವರ್ ಆಟ
ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಫಲಿತಾಂಶ ನಿರ್ಧರಿಸಲು ತಲಾ 10 ಓವರ್ ಆಟ ನಡೆಯುವುದು ಕಡ್ಡಾಯ ಎಂದು ಐಸಿಸಿ ತಿಳಿಸಿದೆ. ಟೂರ್ನಿಯ ಗುಂಪು ಹಂತದ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದರೆ ಫಲಿತಾಂಶ ನಿರ್ಣಯಿಸಲು ಎರಡೂ ತಂಡಗಳು ತಲಾ 5 ಓವರ್ ಆಡಿದ್ದರೆ ಸಾಕಿತ್ತು. ಆದರೆ ನಾಕೌಟ್ ಪಂದ್ಯಗಳಿಗೆ ಈಗ ಹೊಸ ನಿಯಮ ಜಾರಿಗೊಳಿಸಿದೆ. ಇನ್ನು ಸೆಮೀಸ್ ಹಾಗೂ ಫೈನಲ್ ಪಂದ್ಯಗಳಿಗೆ ಮೀಸಲು ದಿನ ಇದ್ದು, ನಿಗದಿತ ದಿನ ಮಳೆಯಿಂದಾಗಿ ಪಂದ್ಯ ನಡೆಯದಿದ್ದರೆ ಮರುದಿನ ಪಂದ್ಯ ನಡೆಸಲಾಗುತ್ತದೆ.
ಒಂದು ವೇಳೆ ಮೀಸಲು ದಿನವೂ ಪಂದ್ಯ ನಡೆಯದೇ ಹೋದರೆ ಫೈನಲ್‌ಗೇರೋದು ಯಾರು..?
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ನಾಕೌಟ್ ಪಂದ್ಯಗಳಿಗೆ ಮೀಸಲು ದಿನವನ್ನು ಇಡಲಾಗಿದೆ. ಒಂದು ವೇಳೆ ಮೀಸಲು ದಿನದಲ್ಲೂ ಮಳೆಯಿಂದಾಗಿ ಪಂದ್ಯ ನಡೆಯದೇ ಹೋದರೆ ಯಾವ ತಂಡಗಳು ಫೈನಲ್‌ಗೇರಲಿವೆ ಎನ್ನುವ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಇದೆ. ಹೌದು, ಒಂದು ವೇಳೆ ಮೀಸಲು ದಿನದಲ್ಲೂ ಪಂದ್ಯ ನಡೆಯದೇ ಹೋದರೇ, ಸೂಪರ್ 12 ಹಂತದ ಅಂತ್ಯದ ವೇಳೆಗೆ ಎರಡೂ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡಗಳು ನೇರವಾಗಿ ಫೈನಲ್‌ಗೆ ಲಗ್ಗೆಯಿಡಲಿವೆ. ಒಂದು ವೇಳೆ ಹೀಗಾದಲ್ಲಿ ನ್ಯೂಜಿಲೆಂಡ್ ಹಾಗೂ ಭಾರತ ತಂಡಗಳು ನವೆಂಬರ್ 13ರಂದು ಐತಿಹಾಸಿಕ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ.