Vijay Hazare Trophy: ಕರ್ನಾಟಕಕ್ಕೆ ಮಯಾಂಕ್‌ ಅಗರ್‌ವಾಲ್ ನಾಯಕ

By Naveen KodaseFirst Published Nov 8, 2022, 3:27 PM IST
Highlights

ವಿಜಯ್ ಹಜಾರೆ ಟೂರ್ನಿಗೆ ಕರ್ನಾಟಕ ಕ್ರಿಕೆಟ್ ತಂಡ ಪ್ರಕಟ
ನವೆಂಬರ್ 12ರಿಂದ ಕೋಲ್ಕತಾದಲ್ಲಿ ಆರಂಭವಾಗಲಿರುವ ಏಕದಿನ ಸರಣಿ
ರಾಜ್ಯ ತಂಡವನ್ನು ಮುನ್ನಡೆಸಲಿರುವ ಮಯಾಂಕ್ ಅಗರ್‌ವಾಲ್

ಬೆಂಗಳೂರು(ನ.08): ಮುಂಬರುವ ನವೆಂಬರ್ 12ರಿಂದ ಕೋಲ್ಕತಾದಲ್ಲಿ ಆರಂಭವಾಗಲಿರುವ ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ ಟೂರ್ನಿಗೆ ಕರ್ನಾಟಕ ತಂಡ ಪ್ರಕಟಿಸಲಾಗಿದ್ದು, ಮಯಾಂಕ್‌ ಅಗರ್‌ವಾಲ್‌ ತಂಡವನ್ನು ಮುನ್ನಡೆಸಲಿದ್ದಾರೆ. ಆರ್‌.ಸಮರ್ಥ್ ಉಪನಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ. 

ಕೆಎಸ್‌ಸಿಎ ಲೀಗ್ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಅಗ್ರಶ್ರೇಯಾಂಕಿತ ಬ್ಯಾಟರ್ ನಿಕಿನ್‌ ಜೋಸ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಗಾಯಾಳು ವಿಜಯ್‌ಕುಮಾರ್‌ ವೈಶಾಕ್‌ ಹೊರಗುಳಿಯಲಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ವೇಗಿ ವೈಶಾಕ್ ವಿಜಯ್‌ಕುಮಾರ್ ಕರ್ನಾಟಕ ತಂಡದ ಪರ ಎರಡನೇ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದರು. ಆದರೆ ಇದೀಗ ವಿಜಯ್‌ಕುಮಾರ್ ಬದಲಿಗೆ ಅನುಭವಿ ವೇಗಿ ರೋನಿತ್ ಮೋರೆ ಕರ್ನಾಟಕ ತಂಡ ಕೂಡಿಕೊಂಡಿದ್ದಾರೆ.

T20 World Cup: ಜೋರಾಯ್ತು ಫೈನಲ್ ಕ್ರೇಜ್‌, ಫನ್ನಿ ವೀಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ

ಕೋಲ್ಕತಾಗೆ ತೆರಳಲು ಕೇವಲ 48 ಗಂಟೆ ಬಾಕಿ ಇರುವಾಗ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು, ವಿಜಯ್ ಹಜಾರೆ ಟೂರ್ನಿಗೆ ಕರ್ನಾಟಕ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ.  ಗಾಯದಿಂದ ಇನ್ನಷ್ಟೇ ಚೇತರಿಸಿಕೊಳ್ಳುತ್ತಿರುವ ದೇವದತ್‌ ಪಡಿಕ್ಕಲ್‌ ಕೂಡಾ ತಂಡದಲ್ಲಿ ಸ್ಥಾನ ಪಡೆದಿಲ್ಲ. ಇನ್ನು ಇತ್ತೀಚೆಗಷ್ಟೇ ಎಲ್ಬೊ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡಿರುವ ಕೆ ವಿ ಸಿದ್ದಾರ್ಥ್ ಕೂಡಾ ರಾಜ್ಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಉಳಿದಂತೆ ಮನೀಶ್‌ ಪಾಂಡೆ, ಮನೋಜ್‌, ಕೆ.ಗೌತಮ್‌, ನಿಹಾಲ್‌ ಉಳ್ಳಾಲ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನಿಹಾಲ್ ಉಲ್ಲಾಳ್ ಎರಡನೇ ವಿಕೆಟ್ ಕೀಪರ್ ರೂಪದಲ್ಲಿ ರಾಜ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡವು 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಮೇಘಾಲಯ, ಡೆಲ್ಲಿ, ವಿದರ್ಭ, ಜಾರ್ಖಂಡ್, ಅಸ್ಸಾಂ, ರಾಜಸ್ಥಾನ ಮತ್ತು ಸಿಕ್ಕಿಂ ತಂಡಗಳು ಸ್ಥಾನ ಪಡೆದಿವೆ. ಮಯಾಂಕ್ ಅಗರ್‌ವಾಲ್ ನೇತೃತ್ವದ ಕರ್ನಾಟಕ ತಂಡವು ಮೊದಲ ಪಂದ್ಯದಲ್ಲಿ ಮೇಘಾಲಯ ತಂಡವನ್ನು ಎದುರಿಸಲಿದೆ.

ಕರ್ನಾಟಕದ ವೇಳಾಪಟ್ಟಿ ಹೀಗಿದೆ ನೋಡಿ

ನವೆಂಬರ್ 12: ಕರ್ನಾಟಕ-ಮೇಘಾಲಯ
ನವೆಂಬರ್ 13: ಕರ್ನಾಟಕ-ವಿದರ್ಭ
ನವೆಂಬರ್ 15: ಕರ್ನಾಟಕ-ಜಾರ್ಖಂಡ್
ನವೆಂಬರ್ 17: ಕರ್ನಾಟಕ-ಡೆಲ್ಲಿ
ನವೆಂಬರ್ 19: ಕರ್ನಾಟಕ-ಅಸ್ಸಾಂ
ನವೆಂಬರ್ 21: ಕರ್ನಾಟಕ-ಸಿಕ್ಕಿಂ
ನವೆಂಬರ್ 23: ಕರ್ನಾಟಕ-ರಾಜಸ್ಥಾನ 

ಕರ್ನಾಟಕ ತಂಡ: ಮಯಾಂಕ್‌ ಅಗರ್‌ವಾಲ್(ನಾಯಕ), ರವಿಕುಮಾರ್ ಸಮರ್ಥ್, ಮನೀಶ್ ಪಾಂಡೆ, ನಿಕಿನ್‌ ಜೋಸ್‌, ಮನೋಜ್‌, ಅಭಿನವ್‌ ಮನೋಹರ್‌, ಶರತ್‌. ನಿಹಾಲ್‌ ಉಲ್ಲಾಳ್, ಕೃಷ್ಣಪ್ಪ ಗೌತಮ್‌, ಶ್ರೇಯಸ್‌ ಗೋಪಾಲ್‌, ಜಗದೀಶ ಸುಚಿತ್‌, ಕಾವೇರಪ್ಪ, ಕೌಶಿಕ್‌, ರೋನಿತ್‌ ಮೋರೆ, ವೆಂಕಟೇಶ್‌.

click me!