ಕೊನೆಗೂ ಸಿಕ್ತು ವೀಸಾ: ಅಮೆರಿಕದ ಫ್ಲೋರಿಡಾದಲ್ಲೇ ನಡೆಯಲಿವೆ Ind vs WI ಕೊನೆಯ 2 ಟಿ20 ಪಂದ್ಯ..!

By Naveen Kodase  |  First Published Aug 5, 2022, 4:07 PM IST

* ಭಾರತ-ವೆಸ್ಟ್ ಇಂಡೀಸ್‌ ನಡುವಿನ 4ನೇ ಟಿ20 ಪಂದ್ಯಕ್ಕೆ ಕ್ಷಣಗಣನೆ
* ಕೊನೆಗೂ ಬಗೆಹರಿದ ಅಮೆರಿಕಾದ ವೀಸಾ ಸಮಸ್ಯೆ 
* ಕೊನೆಯ ಎರಡು ಟಿ20 ಪಂದ್ಯಗಳು ಆಗಸ್ಟ್ 6 ಹಾಗೂ 7ರಂದು ನಡೆಯಲಿವೆ


ಫ್ಲೋರಿಡಾ(ಆ.05): ಆಟಗಾರರ ವೀಸಾ ಸಮಸ್ಯೆ ಬಗೆಹರಿದ ಹಿನ್ನೆಲೆಯಲ್ಲಿ ಭಾರತ ಹಾಗೂ ವೆಸ್ಟ್‌ಇಂಡೀಸ್‌ ನಡುವಿನೆ ಕೊನೆ 2 ಟಿ20 ಪಂದ್ಯಗಳು ನಿಗದಿಯಂತೆ ಅಮೆರಿಕದ ಫ್ಲೋರಿಡಾದಲ್ಲೇ ನಡೆಸಲು ನಿರ್ಧರಿಸಲಾಗಿದೆ. ಈಗಾಗಲೇ ಸರಣಿಯ 3 ಪಂದ್ಯಗಳು ಮುಕ್ತಾಯಗೊಂಡಿದ್ದು, ಇನ್ನೆರಡು ಪಂದ್ಯಗಳು ಶನಿವಾರ ಹಾಗೂ ಭಾನುವಾರ ಫ್ಲೋರಿಡಾದಲ್ಲಿ ನಿಗದಿಯಾಗಿದೆ. ಆದರೆ ಅಮೆರಿಕದ ವೀಸಾ ಸಿಗದ ಕಾರಣ ಪಂದ್ಯಗಳು ಟ್ರಿನಿಡಾಡ್‌ ಇಲ್ಲವೇ ಸೇಂಟ್‌ ಕಿಟ್ಸ್‌ ಅಂಡ್‌ ನೆವಿಸ್‌ನಲ್ಲೇ ನಡೆಯುವ ಸಾಧ್ಯತೆ ಇತ್ತು. ಈ ನಡುವೆ ಗಯಾನ ಅಧ್ಯಕ್ಷ ಇರ್ಫಾನ್‌ ಅಲಿ ಮಧ್ಯಸ್ಥಿಕೆಯಿಂದಾಗಿ ಆಟಗಾರರ ವೀಸಾ ಸಮಸ್ಯೆ ಬಗೆಹರಿದಿದ್ದು, ಶುಕ್ರವಾರ ಎಲ್ಲಾ ಆಟಗಾರರು ಅಮೆರಿಕಕ್ಕೆ ತೆರಳಲಿದ್ದಾರೆ. 

ESPNcricinfo ವರದಿಯ ಪ್ರಕಾರ, ಭಾರತ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳು ಮೂರನೇ ಟಿ20 ಪಂದ್ಯ ಮುಗಿಯುತ್ತಿದ್ದಂತೆಯೇ ಸೇಂಟ್‌ ಕಿಟ್ಸ್‌ ಅಂಡ್‌ ನೆವಿಸ್‌ನಿಂದ ಚಾರ್ಚರ್‌ ಪ್ಲೈಟ್‌ ಮೂಲಕ ಜಾರ್ಜ್‌ಟನ್‌ಗೆ ಬಂದಿಳಿಯಬೇಕಿತ್ತು. ಕೊನೆಯ ಎರಡು ಟಿ20 ಪಂದ್ಯವನ್ನಾಡಲು ಉಭಯ ತಂಡಗಳು ಕೊಂಚ ಮುಂಚಿತವಾಗಿಯೇ ಅಮೆರಿಕಗೆ ಬಂದಿಳಿಯುವ ನಿರೀಕ್ಷೆಯಲ್ಲಿದ್ದವು. ಆದರೆ ವೀಸಾ ಸಮಸ್ಯೆಯಿಂದಾಗಿ ಮೂರನೇ ಟಿ20 ಪಂದ್ಯ ಮುಗಿಯುತ್ತಿದ್ದಂತೆಯೇ ಅಮೆರಿಕಗೆ ಹಾರಲು ಉಭಯ ತಂಡಗಳಿಗೆ ಸಾಧ್ಯವಾಗಿರಲಿಲ್ಲ.

Tap to resize

Latest Videos

ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಎರಡನೇ ಟಿ20 ಪಂದ್ಯದ ವೇಳೆ ಲಾಜಿಸ್ಟಿಕಲ್‌ ಸಮಸ್ಯೆ ತಲೆದೂರಿತ್ತು. ಹೀಗಾಗಿ ಎರಡನೇ ಟಿ20 ಪಂದ್ಯವು ಕೊಂಚ ತಡವಾಗಿ ಆರಂಭವಾಗಿತ್ತು. ಎರಡನೇ ಟಿ20 ಪಂದ್ಯವು ತಾಂತ್ರಿಕ ಅಡಚಣೆಯಿಂದಾಗಿ 8 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯವು 10 ಗಂಟೆಗೆ ಪಂದ್ಯ ಆರಂಭವಾಗುವುದಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು ತಿಳಿಸಿತ್ತು. ಭಾರತ ಕ್ರಿಕೆಟ್‌ ತಂಡದ ಕಿಟ್‌ ಬ್ಯಾಗ್‌ಗಳು ಮೈದಾನಕ್ಕೆ ಬರುವುದು ತಡವಾಗಿದ್ದರಿಂದ ಪಂದ್ಯದ ಆರಂಭಿಕ ಸಮಯವನ್ನು ಬದಲಿಸಲು ತೀರ್ಮಾನಿಸಲಾಗಿತ್ತು. ಹೀಗಾಗಿ 10 ಗಂಟೆಗೆ ಪಂದ್ಯ ಆರಂಭವಾಗಬಹುದು ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಕಿಟ್‌ಗಳು ಭಾರತೀಯ ಕಾಲಮಾನ 10 ಗಂಟೆಯಾದರೂ ಮೈದಾನ ತಲುಪದ ಕಾರಣ ರಾತ್ರಿ 11 ಗಂಟೆಗೆ(ಭಾರತೀಯ ಕಾಲಮಾನ) ಎರಡನೇ ಟಿ20 ಪಂದ್ಯವು ಆರಂಭವಾಗಿತ್ತು.

Asia Cup 2022 ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಪ್ರಕಟ: ಭಾರತಕ್ಕೆ ಮೊದಲ ಪಂದ್ಯದಲ್ಲೇ ಪಾಕ್ ಎದುರಾಳಿ..!

5 ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 3 ಪಂದ್ಯಗಳು ಮುಕ್ತಾಯದ ವೇಳೆಗೆ 2-1ರಿಂದ ಮುನ್ನಡೆಯಲ್ಲಿದೆ. ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 68 ರನ್‌ಗಳ ಗೆಲುವು ದಾಖಲಿಸಿತ್ತು. ಇನ್ನು ಎರಡನೇ ಪಂದ್ಯದಲ್ಲಿ ನಿಕೋಲಸ್ ಪೂರನ್ ನೇತೃತ್ವದ ವಿಂಡೀಸ್ ತಂಡವು 5 ವಿಕೆಟ್‌ಗಳ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿತ್ತು. ಆದರೆ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳ ಅಂತರದ ಗೆಲುವು ದಾಖಲಿಸುವ ಮೂಲಕ 2-1 ಅಂತರದ ಮುನ್ನಡೆ ಸಾಧಿಸಿದೆ. ಇದೀಗ ಪ್ಲೋರಿಡಾದಲ್ಲಿ ನಡೆಯಲಿರುವ ನಾಲ್ಕು ಹಾಗೂ ಐದನೇ ಟಿ20 ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

click me!