
ನವದೆಹಲಿ: ಟಿ20 ವಿಶ್ವಕಪ್ ಆಡಲು ಭಾರತಕ್ಕೆ ಹೋಗಲ್ಲ ಎಂದು ಪಟ್ಟು ಹಿಡಿದ ಬಾಂಗ್ಲಾದೇಶವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಟೂರ್ನಿಯಿಂದಲೇ ಹೊರಹಾಕಿದೆ. ಬಾಂಗ್ಲಾ ಬದಲು ಸ್ಕಾಟ್ಲೆಂಡ್‌ಗೆ ಅವಕಾಶ ನೀಡಲಾಗಿದೆ. ಬಾಂಗ್ಲಾ ವೇಗಿ ಮುಸ್ತಾಫಿಜುರ್ ರಹಮಾನ್‌ರನ್ನು ಐಪಿಎಲ್‌ನಿಂದ ಕೈಬಿಟ್ಟಾಗಿನಿಂದ ಶುರುವಾದ ಬಾಂಗ್ಲಾ ಕ್ರಿಕೆಟ್ ಮಂಡಳಿ ಕ್ಯಾತೆ, ಕೊನೆಗೆ ಅದಕ್ಕೇ ಕುತ್ತು ತಂದೊಡ್ಡಿದೆ.
ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಹೊರಹಾಕಿದ ಬೆನ್ನಲ್ಲೇ, ಆ ದೇಶಕ್ಕೆ ಅನ್ಯಾಯವಾಗಿ ಎಂದು ಅದರ ಬೆಂಬಲಕ್ಕೆ ನಿಂತಿರುವ ಪಾಕಿಸ್ತಾನ ತನಗೂ ವಿಶ್ವಕಪ್‌ನಲ್ಲಿ ಆಡಲು ಆಸಕ್ತಿ ಇಲ್ಲ. ತಾನೂ ಟೂರ್ನಿಯಿಂದ ಹಿಂದೆ ಸರಿಯಬಹುದು ಎಂದು ಐಸಿಸಿಗೆ ಪೊಳ್ಳು ಬೆದರಿಕೆ ಹಾಕಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷರೂ ಆಗಿರುವ ಪಾಕ್ ಗೃಹ ಸಚಿವ ಮೊಹ್ಸಿನ್ ನಖ್ವಿ, ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನಮ್ಮ ಪ್ರಧಾನಿ ಶಬಾಜ್ ಶರೀಫ್ ದೇಶದಿಂದ ಹೊರಗಿದ್ದಾರೆ. ಅವರು ವಾಪಸಾದ ಕೂಡಲೇ, ಅವರ ಮುಂದೆ ವಿಷಯ ಪ್ರಸ್ತಾಪಿಸುತ್ತೇವೆ. ನಾವು ಟಿ20 ವಿಶ್ವಕಪ್‌ನಲ್ಲಿ ಆಡಬೇಕೋ ಬೇಡವೋ ಎನ್ನುವುದನ್ನು ನಮ್ಮ ಸರ್ಕಾರ ನಿರ್ಧರಿಸುತ್ತದೆ’ ಎಂದರು.
‘ನಮ್ಮ ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತದೋ ಅದೇ ಅಂತಿಮ. ವಿಶ್ವಕಪ್‌ನಲ್ಲಿ ಆಡಲು ಹೋಗೋದು ಬೇಡ ಎಂದು ಪ್ರಧಾನಿ ಹೇಳಿದರೆ ಮುಗಿಯಿತು, ಐಸಿಸಿ ಬೇರೆ ತಂಡಕ್ಕೆ ಆಹ್ವಾನ ನೀಡಬಹುದು’ ಎಂದು ನಖ್ವಿ ತಿಳಿಸಿದರು. ಬಾಂಗ್ಲಾದೇಶವನ್ನು ಪ್ರಬಲ ಕ್ರಿಕೆಟಿಂಗ್ ದೇಶ ಎಂದು ಬಣ್ಣಿಸಿದ ನಖ್ವಿ, ‘ಒಂದು ದೇಶ ಕ್ರಿಕೆಟ್ ಲೋಕವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಅದು ಹೇಳಿದಂತೆ ಐಸಿಸಿ ಕೇಳುತ್ತದೆ. ಭಾರತ ತಂಡ ಪಾಕಿಸ್ತಾನಕ್ಕೆ ಬರಲ್ಲ ಎಂದಾಗ ಸ್ಥಳ ಬದಲಿಸಿದ ಐಸಿಸಿ, ಬಾಂಗ್ಲಾಕ್ಕೂ ಅದೇ ವ್ಯವಸ್ಥೆ ಮಾಡಲಿಲ್ಲ ಏಕೆ?’ ಎಂದು ಪ್ರಶ್ನಿಸಿದರು.
ಫೆ.7ರಿಂದ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.
ಒಂದೊಮ್ಮೆ ಪಾಕಿಸ್ತಾನ ವಿಶ್ವಕಪ್‌ನಿಂದ ಹೊರಗುಳಿಯಲು ನಿರ್ಧರಿಸಿದರೆ, ಆಗ ಐಸಿಸಿ ರ್‍ಯಾಂಕಿಂಗ್ ಆಧಾರದಲ್ಲಿ ಉಗಾಂಡಗೆ ಟೂರ್ನಿಯಲ್ಲಿ ಆಡಲು ಅವಕಾಶ ಸಿಗಲಿದೆ. ರ್‍ಯಾಂಕಿಂಗ್ ಪಟ್ಟಿಯಲ್ಲಿ ಉಗಾಂಡ 21ನೇ ಸ್ಥಾನದಲ್ಲಿದೆ.
ಶುಕ್ರವಾರ ಸಂಜೆ ನಡೆದ ಐಸಿಸಿ ಸಭೆಯಲ್ಲಿ ಬಾಂಗ್ಲಾ ಪರ ಮತ ಹಾಕಿದ್ದು ಪಾಕಿಸ್ತಾನ ಮಾತ್ರ. ಇನ್ನುಳಿದ 14 ಸದಸ್ಯ ರಾಷ್ಟ್ರಗಳು ಬಾಂಗ್ಲಾದೇಶ ಭಾರತಕ್ಕೆ ಹೋಗದಿದ್ದರೆ ಹೊರಹಾಕುವುದೇ ಸೂಕ್ತ ಎಂದವು. ಇದರಿಂದ ಪಾಕ್‌ಗೆ ಭಾರೀ ಮುಖಭಂಗವಾಯಿತು. ಇದೇ ಕಾರಣಕ್ಕೆ, ಬಾಂಗ್ಲಾಗೆ ಅನ್ಯಾಯವಾಗಿದೆ. ಅವರ ಪರ ನಾವು ನಿಲ್ಲುತ್ತೇವೆ. ನಾವೂ ವಿಶ್ವಕಪ್‌ನಲ್ಲಿ ಆಡಲ್ಲ ಎಂದು ಹೇಳುತ್ತಾ, ಪಾಕ್ ತನ್ನ ಮುಖ ಉಳಿಸಿಕೊಳ್ಳಲು ಯತ್ನಿಸುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.