ವಿಂಡೀಸ್ ಎದುರಿನ ಸರಣಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ
ಪ್ರತಿಭಾನ್ವಿತ ಆಟಗಾರರನ್ನು ಕೈಬಿಟ್ಟ ಆಯ್ಕೆ ಸಮಿತಿ
ಆಯ್ಕೆ ಸಮಿತಿ ವಿರುದ್ದ ಆಕ್ರೋಶ ಹೊರಹಾಕಿದ ವಾಸೀಂ ಜಾಫರ್
ನವದೆಹಲಿ(ಜೂ.25): ಮುಂದಿನ ಜುಲೈ 12ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ಎದುರಿನ ಎರಡು ಪಂದ್ಯಗಳ ಟೆಸ್ಟ್ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು ಕೆಲ ಯುವ ಕ್ರಿಕೆಟಿಗರಿಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ ಕೆಲವು ಅರ್ಹ ಕ್ರಿಕೆಟಿಗರಿಗೆ ತಂಡದಲ್ಲಿ ಮಣೆ ಹಾಕದ ಕುರಿತಂತೆ ಆಯ್ಕೆ ಸಮಿತಿಯ ವಿರುದ್ದ ಭಾರತದ ಹಲವು ಮಾಜಿ ಕ್ರಿಕೆಟಿಗರು ಅಸಮಧಾನ ಹೊರಹಾಕಿದ್ದಾರೆ. ಈಗಾಗಲೇ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್, ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ ಆಯ್ಕೆ ಸಮಿತಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟರ್ ವಾಸೀಂ ಜಾಫರ್ ಕೂಡಾ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಹೌದು, ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಗೆ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಅವರಂತಹ ಪ್ರತಿಭಾನ್ವಿತ ಆಟಗಾರರಿಗೆ ತಂಡದೊಳಗೆ ಮಣೆ ಹಾಕಲಾಗಿದೆ. ಆದರೆ ದೇಶಿ ಕ್ರಿಕೆಟ್‌ನಲ್ಲಿ ಮಿಂಚಿ ಟೆಸ್ಟ್ ಪಾದಾರ್ಪಣೆ ಮಾಡಲು ತುದಿಗಾಲಿನಲ್ಲಿ ನಿಂತಿರುವ ಸರ್ಫರಾಜ್ ಖಾನ್, ಅಭಿಮನ್ಯು ಈಶ್ವರನ್, ಪ್ರಿಯಾಂಕ್ ಪಾಂಚಾಲ್ ಅವರಂತಹ ಆಟಗಾರರಿಗೆ ಬಿಸಿಸಿಐ ಆಯ್ಕೆ ಸಮಿತಿ ಮತ್ತೊಮ್ಮೆ ಶಾಕ್ ನೀಡಿದೆ. ಈ ಕುರಿತಂತೆ ಬಿಸಿಸಿಐ ಆಯ್ಕೆ ಸಮಿತಿ ವಿರುದ್ದ ಮುಗಿಬಿದ್ದಿರುವ ವಾಸೀಂ ಜಾಫರ್, ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಮುಖ 3 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
Thoughts? pic.twitter.com/2YwaMuOwvN
— Wasim Jaffer (@WasimJaffer14)
undefined
ಆಯ್ಕೆ ಸಮಿತಿ ಮುಂದೆ ವಾಸೀಂ ಜಾಫರ್ ಕೇಳಿರುವ ಪ್ರಶ್ನೆಗಳು ಹೀಗಿವೆ:
1. ನಾಲ್ವರು ಆರಂಭಿಕರನ್ನು ಆಯ್ಕೆ ಮಾಡುವ ಅವಶ್ಯಕತೆ ಏನಿತ್ತು? ಇದರ ಬದಲಾಗಿ ಮಧ್ಯಮ ಕ್ರಮಾಂಕದ ಬ್ಯಾಟರ್ ಅಗಿ ಸರ್ಫರಾಜ್ ಖಾನ್ ಅವರನ್ನು ಆಯ್ಕೆ ಮಾಡಬಹುದಿತ್ತು ಅಲ್ಲವೇ. ಈ ಮೂಲಕ ದೇಶಿ ಕ್ರಿಕೆಟ್‌ನಲ್ಲಿ ಅವರು ತೋರಿದ ಪ್ರದರ್ಶನಕ್ಕೆ ಗೌರವ ಕೊಟ್ಟಂತೆ ಆಗುತ್ತಿತ್ತು ಅಲ್ಲವೇ?
2.ಅಭಿಮನ್ಯು ಈಶ್ವರನ್ ಮತ್ತು ಪ್ರಿಯಾಂಕ್ ಪಾಂಚಾಲ್ ರಣಜಿ ಹಾಗೂ ಭಾರತ 'ಎ' ತಂಡದ ಪರ ಅತ್ಯುತ್ತಮ ಪ್ರದರ್ಶನ ತೋರಿ ಸಾಕಷ್ಟು ಸಮಯದಿಂದ ಭಾರತ ಟೆಸ್ಟ್ ತಂಡದ ಬಾಗಿಲು ಬಡಿಯುತ್ತಿದ್ದಾರೆ. ಅವರು ಐಪಿಎಲ್ ಆಡಿಲ್ಲ ಎನ್ನುವ ಕಾರಣಕ್ಕೆ ಅವರನ್ನು ಕಡೆಗಣಿಸಿದಿರಾ? ಅಥವ ಅವರ ಪ್ರದರ್ಶನ ನಿಮ್ಮ ಕಣ್ಣಿಗೆ ಕಾಣಲಿಲ್ಲವೇ? ಋತುರಾಜ್ ಹೇಗೆ ಭಾರತ ಟೆಸ್ಟ್ ತಂಡಕ್ಕೆ ಜಂಪ್ ಮಾಡಿದರು?
3. ಸುಮಾರು ಒಂದು ತಿಂಗಳ ಬಿಡುವಿನ ಬಳಿಕ ಶಮಿಗೆ ಮತ್ತೆ ವಿಶ್ರಾಂತಿ ಕೊಟ್ಟಿದ್ದು ಅಚ್ಚರಿ ಮೂಡಿಸಿತು. ನನ್ನ ಪ್ರಕಾರ ಅವರು ಹೆಚ್ಚು ಹೆಚ್ಚು ಬೌಲಿಂಗ್ ಮಾಡಿದಷ್ಟು ಅವರು ಚೆನ್ನಾಗಿ ಆಡುತ್ತಾರೆ ಹಾಗೂ ಮತ್ತಷ್ಟು ಫಿಟ್ ಆಗುವ ಮೂಲಕ ಒಳ್ಳೆಯ ಫಾರ್ಮ್‌ನಲ್ಲಿ ಮುಂದುವರೆಯುತ್ತಾರೆ ಎಂದು ವಾಸೀಂ ಜಾಫರ್ ಟ್ವೀಟ್ ಮಾಡಿದ್ದಾರೆ.
ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸರ್ಫರಾಜ್ ಖಾನ್ ಇನ್ನೇನು ಮಾಡಬೇಕು ಹೇಳಿ.?
ವಾಸೀಂ ಜಾಫರ್ ಮಾಡಿರುವ ಟ್ವೀಟ್‌ನಲ್ಲಿ ಅರ್ಥವಿದೆ. ಯಾಕೆಂದರೆ ಆರಂಭಿಕರಾಗಿ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಹೀಗಿದ್ದ ಮೇಲೆ ಋತುರಾಜ್ ಗಾಯಕ್ವಾಡ್ ಹಾಗೂ ಯಶಸ್ವಿ ಜೈಸ್ವಾಲ್ ಬೆಂಚ್ ಕಾಯಿಸುವುದು ಬಹುತೇಕ ಖಚಿತವಾಗಿದೆ. ಅದರ ಬದಲು ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಸತತ ಮೂರು ಆವೃತ್ತಿಯಲ್ಲಿ ರನ್ ರಾಶಿ ಗುಡ್ಡೆ ಹಾಕಿರುವ ಸರ್ಫರಾಜ್ ಖಾನ್‌ಗೆ ಅವಕಾಶ ನೀಡಬಹುದಿತ್ತು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ ಅವರನ್ನು ಕೈಬಿಟ್ಟಿದ್ದು, ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಕೂಡಾ ಫಿಟ್ನೆಸ್ ಸಮಸ್ಯೆಯಿಂದಾಗಿ ತಂಡದ ಆಯ್ಕೆಗೆ ಅಲಭ್ಯರಾಗಿದ್ದಾರೆ. ಹೀಗಾಗಿ ದೇಶಿ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ತೋರುತ್ತಾ ಬಂದಿರುವ ಅಭಿಮನ್ಯು ಈಶ್ವರನ್ ಹಾಗೂ ಪ್ರಿಯಾಂಕ್ ಪಾಂಚಾಲ್ ಅವರಂತಹ ಆಟಗಾರರಿಗೆ ಒಂದು ಅವಕಾಶ ನೀಡಬಹುದಿತ್ತು.
ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಬಳಿಕ ಟೀಂ ಇಂಡಿಯಾ, ಬರೋಬ್ಬರಿ ಒಂದು ತಿಂಗಳು ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿಲ್ಲ. ಇದರ ಹೊರತಾಗಿಯೂ ಆಯ್ಕೆ ಸಮಿತಿಯು ಅನುಭವಿ ವೇಗಿ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.