
ಬಾರ್ಬಡೊಸ್: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಟೀಂ ಇಂಡಿಯಾ 7 ರನ್ ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕ್ರಿಕೆಟ್ ಅಭಿಮಾನಿಗಳನ್ನು ಕೊನೆಯ ಓವರ್‌ನ ಕೊನೆಯ ಎಸೆತದವರೆಗೂ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.
ಇನ್ನು ಟೀಂ ಇಂಡಿಯಾ ದಶಕದ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುತ್ತಿದ್ದಂತೆಯೇ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ ವಿರಾಟ್ ಕೊಹ್ಲಿ ದಿಢೀರ್ ಎನ್ನುವಂತೆ ಮೈದಾನದಲ್ಲಿಯೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದರು. ಟೀಂ ಇಂಡಿಯಾ ಗೆಲುವಿನ ಸಂಭ್ರಮದಲ್ಲಿದ್ದ ಭಾರತೀಯ ಅಭಿಮಾನಿಗಳಿಗೆ ಇದು ಒಂದು ರೀತಿ ಶಾಕ್ ಕೊಟ್ಟಂತೆ ಆಗಿತ್ತು. ಈ ಆಘಾತದಿಂದ ಹೊರಬರುವ ಮುನ್ನವೇ ಪಂದ್ಯ ಮುಕ್ತಾಯದ ಬಳಿಕ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿ ಮಾತನಾಡಿದ ಚಾಂಪಿಯನ್ ತಂಡದ ನಾಯಕ ರೋಹಿತ್ ಶರ್ಮಾ ಕೂಡಾ, ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ತಾವಾಡಿದ ಕೊನೆಯ ಟಿ20 ಮ್ಯಾಚ್ ಎನ್ನುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಶಾಕ್ ನೀಡಿದರು.
ದಶಕದ ಬಳಿಕ ಟೀಂ ಇಂಡಿಯಾವನ್ನು ಟಿ20 ವಿಶ್ವಕಪ್ ಚಾಂಪಿಯನ್ ಮಾಡಿದ ರೋಹಿತ್ ಶರ್ಮಾ, ಇನ್ನಷ್ಟು ವರ್ಷಗಳ ಕಾಲ ಭಾರತ ಟಿ20 ತಂಡವನ್ನು ಮುನ್ನಡೆಸಲಿದ್ದಾರೆ ಎನ್ನುವ ಅವರ ಅಭಿಮಾನಿಗಳ ನಿರೀಕ್ಷೆಯನ್ನು ಹಿಟ್‌ಮ್ಯಾನ್ ಸುಳ್ಳಾಗಿಸಿದರು. ಇನ್ನು ಇದೆಲ್ಲದರ ನಡುವೆ, ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ರೋಹಿತ್ ಶರ್ಮಾ, ಆಡಿದ ಕೆಲವೊಂದು ಮಾತುಗಳನ್ನು ಗಮನಿಸಿದರೆ, ಹಿಟ್‌ಮ್ಯಾನ್ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಪಡೆಯುವಂತೆ ಬಾಹ್ಯಶಕ್ತಿಗಳು ಒತ್ತಡ ಹೇರಿದ್ದವಾ ಎನ್ನುವ ಅನುಮಾನ ಕಾಡಲಾರಂಭಿಸಿದೆ.
ಟೀಂ ಇಂಡಿಯಾ ಕೋಚ್ ಹುದ್ದೆಗೆ ಇಬ್ಬರ ಹೆಸರು ಶಾರ್ಟ್‌ಲಿಸ್ಟ್ ಆಗಿದೆ: BCCI ಕಾರ್ಯದರ್ಶಿ ಜಯ್ ಶಾ ಅಚ್ಚರಿ ಹೇಳಿಕೆ
"ನಾನು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳುವ ಮನಸ್ಸಿರಲಿಲ್ಲ. ಆದರೆ ಅಂತಹ ಪರಿಸ್ಥಿತಿ ಎದುರಾಗಿದ್ದರಿಂದ, ನಿವೃತ್ತಿ ಪಡೆಯಲು ಇದು ಸರಿಯಾದ ಸಮಯ ಎಂದು ಭಾವಿಸುತ್ತಿದ್ದೇನೆ. ದೇಶಕ್ಕಾಗಿ ಟಿ20 ವಿಶ್ವಕಪ್ ಗೆದ್ದು, ಈ ಮಾದರಿಗೆ ಗುಡ್‌ಬೈ ಹೇಳುವುದಕ್ಕಿಂತ ಒಳ್ಳೆಯ ಸಂದರ್ಭ ಮತ್ತೊಂದಿಲ್ಲ ಎಂದು ಭಾವಿಸುತ್ತೇನೆ" ಎಂದು ರೋಹಿತ್ ಶರ್ಮಾ ಹೇಳಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಟಿ20 ವಿಶ್ವಕಪ್ ಟೂರ್ನಿ ಮುಗಿಯುತ್ತಿದ್ದಂತೆಯೇ, ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಒಪ್ಪಂದಾವಧಿ ಕೂಡಾ ಮುಕ್ತಾಯವಾಗಿದೆ. ಇದೀಗ ಭಾರತ ತಂಡದ ನೂತನ ಹೆಡ್‌ಕೋಚ್ ಆಗಿ ಗೌತಮ್ ಗಂಭೀರ್ ಬಹುತೇಕ ನೇಮಕವಾಗುವ ಸಾಧ್ಯತೆಯಿದೆ. ಗಂಭೀರ್ ಭವಿಷ್ಯದ ಭಾರತ ತಂಡ ಕಟ್ಟಲು ತಮಗೆ ಸ್ವತಂತ್ರ ಅವಕಾಶ ಇರಬೇಕು ಎನ್ನುವ ಕಂಡೀಷನ್ ಹಾಕಿದ್ದರು ಎನ್ನಲಾಗುತ್ತಿದೆ. ಹೀಗಾಗಿಯೇ ಟಿ20 ಕ್ರಿಕೆಟ್ ಮಾದರಿಯಲ್ಲಿ ಕಡೆಗಣನೆಗೊಳಗಾಗುವುದಕ್ಕಿಂತ ಮೊದಲೇ ವಿರಾಟ್, ರೋಹಿತ್ ಹಾಗೂ ಜಡೇಜಾ ತಾವೇ ಒತ್ತಡಕ್ಕೆ ಒಳಗಾಗಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ರಾ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ.
6 ಭಾರತೀಯರನ್ನೊಳಗೊಂಡ ಶ್ರೇಷ್ಠ ಟಿ20 ವಿಶ್ವಕಪ್ ತಂಡವನ್ನು ಪ್ರಕಟಿಸಿದ ಐಸಿಸಿ..! ವಿರಾಟ್ ಕೊಹ್ಲಿಗಿಲ್ಲ ಸ್ಥಾನ
ಇನ್ನು ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರೂ, ಭಾರತ ಏಕದಿನ ಹಾಗೂ ಟೆಸ್ಟ್ ತಂಡದಲ್ಲಿ ಮುಂದುವರೆಯುವುದಾಗಿ ಖಚಿತಪಡಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಚುಟುಕು ಕ್ರಿಕೆಟ್ ಮಾದರಿಗೆ ವಿದಾಯ ಹೇಳಿದ್ದರೂ, ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡದಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.