ವೈಜಾಗ್ ಟೆಸ್ಟ್‌ ಗೆಲ್ಲಲು ಭಾರತಕ್ಕೆ ಬೇಕಿದೆ 9 ಬಲಿ; ಇಂಗ್ಲೆಂಡ್‌ ಇನ್ನೂ ಬೇಕು 332 ರನ್

By Naveen KodaseFirst Published Feb 4, 2024, 4:58 PM IST
Highlights

ಇದಕ್ಕೂ ಮೊದಲು ವಿಕೆಟ್ ನಷ್ಟವಿಲ್ಲದೇ 28 ರನ್‌ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್ ಆಂಡರ್‌ಸನ್ ಆರಂಭದಲ್ಲೇ ಶಾಕ್ ನೀಡಿದರು. ಟೀಂ ಇಂಡಿಯಾ ತನ್ನ ಖಾತೆಗೆ ಎರಡು ರನ್ ಸೇರಿಸುವಷ್ಟರಲ್ಲಿ ಆರಂಭಿಕರಿಬ್ಬರನ್ನು ಕಳೆದುಕೊಂಡಿತು. 

ವಿಶಾಖಪಟ್ಟಣ(ಫೆ.04): ಶುಭ್‌ಮನ್ ಗಿಲ್ ಶತಕ, ಅಕ್ಷರ್ ಪಟೇಲ್ ಹಾಗೂ ರವಿಚಂದ್ರನ್ ಅಶ್ವಿನ್ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಎರಡನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆಹಾಕಿದೆ. ಇನ್ನು ಗೆಲ್ಲಲು 399 ರನ್‌ಗಳ ಸವಾಲಿನ ಗುರಿ ಬೆನ್ನತ್ತಿರುವ ಇಂಗ್ಲೆಂಡ್ ತಂಡವು ಚುರುಕಿನ ಆರಂಭ ಪಡೆದಿದೆ. ಮೂರನೇ ದಿನದಾಟದಂತ್ಯದ ವೇಳೆಗೆ ಇಂಗ್ಲೆಂಡ್ ಒಂದು ವಿಕೆಟ್ ಕಳೆದುಕೊಂಡು 67 ರನ್ ಬಾರಿಸಿದ್ದು ಇನ್ನೂ 332 ರನ್‌ಗಳ ಹಿನ್ನಡೆಯಲ್ಲಿದೆ. ವೈಜಾಗ್ ಟೆಸ್ಟ್ ಗೆಲ್ಲಲು ಭಾರತಕ್ಕೆ 9 ಬಲಿ ಬೇಕಿದ್ದರೆ, ಸರಣಿಯಲ್ಲಿ 2-0 ಮುನ್ನಡೆ ಸಾಧಿಸಬೇಕಿದ್ದರೇ ಇಂಗ್ಲೆಂಡ್ 332 ರನ್ ಕಲೆಹಾಕಬೇಕಿದೆ.

ಎರಡನೇ ಇನಿಂಗ್ಸ್‌ನಲ್ಲಿ ಭಾರತವನ್ನು 255 ರನ್‌ಗಳಿಗೆ ಆಲೌಟ್ ಮಾಡಿ, 399 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಎಂದಿನಂತೆ ಜಾಕ್ ಕ್ರಾಲಿ ಹಾಗೂ ಡಕೆಟ್ ಜೋಡಿ ಮೊದಲ ವಿಕೆಟ್‌ಗೆ 50 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಡಕೆಟ್ 27 ಎಸೆತಗಳಲ್ಲಿ 6 ಬೌಂಡರಿ ಸಹಿತ 28 ರನ್ ಬಾರಿಸಿ ರವಿಚಂದ್ರನ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ಸದ್ಯ ಕ್ರಾಲಿ 29 ಹಾಗೂ ನೈಟ್ ವಾಚ್‌ಮನ್ ರೆಹನ್ ಅಹಮದ್ 9 ರನ್ ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

2ND Test. 13.6: Axar Patel to Rehan Ahmed 4 runs, England 67/1 https://t.co/X85JZGt0EV

— BCCI (@BCCI)

ಇನ್ನು ಇದಕ್ಕೂ ಮೊದಲು ವಿಕೆಟ್ ನಷ್ಟವಿಲ್ಲದೇ 28 ರನ್‌ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್ ಆಂಡರ್‌ಸನ್ ಆರಂಭದಲ್ಲೇ ಶಾಕ್ ನೀಡಿದರು. ಟೀಂ ಇಂಡಿಯಾ ತನ್ನ ಖಾತೆಗೆ ಎರಡು ರನ್ ಸೇರಿಸುವಷ್ಟರಲ್ಲಿ ಆರಂಭಿಕರಿಬ್ಬರನ್ನು ಕಳೆದುಕೊಂಡಿತು. 

ವೈಜಾಗ್ ಟೆಸ್ಟ್ ಗೆಲ್ಲಲು ಇಂಗ್ಲೆಂಡ್‌ಗೆ 399 ರನ್ ಗುರಿ

ಇದಾದ ಬಳಿಕ ಟೀಂ ಇಂಡಿಯಾಗೆ ಶುಭ್‌ಮನ್ ಗಿಲ್ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಮೊದಲಿಗೆ ಶ್ರೇಯಸ್ ಅಯ್ಯರ್ ಜತೆಗೂಡಿ ಮೂರನೇ ವಿಕೆಟ್‌ಗೆ 81 ರನ್ ಜತೆಯಾಟವಾಡಿದ ಗಿಲ್, ಬಳಿಕ ಅಕ್ಷರ್ ಪಟೇಲ್ ಜತೆಗೂಡಿ 89 ರನ್‌ಗಳ ಜತೆಯಾಟವಾಡಿದರು. 

ಗಿಲ್ ಭರ್ಜರಿ ಶತಕ: ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಟೀಂ ಇಂಡಿಯಾಗೆ ಗಿಲ್ ಸಮಯೋಚಿತ ಬ್ಯಾಟಿಂಗ್ ಮೂಲಕ ಆಸರೆಯಾದರು. ಇಂಗ್ಲೆಂಡ್‌ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಗಿಲ್ 132 ಎಸೆತಗಳನ್ನು ಎದುರಿಸಿ ಟೆಸ್ಟ್ ವೃತ್ತಿಜೀವನದ ಮೂರನೇ ಶತಕ ಸಿಡಿಸಿ ಸಂಭ್ರಮಿಸಿದರು. ಅಂತಿಮವಾಗಿ ಗಿಲ್ 147 ಎಸೆತಗಳನ್ನು 11 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 104 ರನ್ ಬಾರಿಸಿ ಶೋಯೆಬ್ ಬಷೀರ್‌ಗೆ ವಿಕೆಟ್ ಒಪ್ಪಿಸಿದರು. 

ಇನ್ನು ಶುಭ್‌ಮನ್ ಗಿಲ್‌ಗೆ ಉತ್ತಮ ಸಾಥ್ ನೀಡಿದ ಅಕ್ಷರ್ ಪಟೇಲ್ ಕೇವಲ 5 ರನ್ ಅಂತರದಲ್ಲಿ ಅರ್ಧಶತಕ ಸಿಡಿಸುವ ಅವಕಾಶ ಕೈಚೆಲ್ಲಿದರು. ಅಕ್ಷರ್ ಪಟೇಲ್ 84 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 45 ರನ್ ಬಾರಿಸಿ ಟಾಮ್ ಹಾರ್ಟಿಗೆ ವಿಕೆಟ್ ಒಪ್ಪಿಸಿದರು. 

ಶುಭ್‌ಮನ್ ಗಿಲ್ ಕೆಚ್ಚೆದೆಯ ಶತಕ; ವೈಜಾಗ್ ಟೆಸ್ಟ್ ಮೇಲೆ ಟೀಂ ಇಂಡಿಯಾ ಬಿಗಿ ಹಿಡಿತ..!

ವಿಕೆಟ್ ಕೀಪರ್ ಬ್ಯಾಟರ್ ಕೆ ಎಸ್ ಭರತ್ ಮತ್ತೊಮ್ಮೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ವಿಫಲವಾದರು. ಭರತ್ 28 ಎಸೆತಗಳನ್ನು ಎದುರಿಸಿ ಕೇವಲ ಒಂದು ಬೌಂಡರಿ ಸಹಿತ 6 ರನ್‌ ಗಳಿಸಿ ರೆಹನ್ ಅಹಮದ್‌ಗೆ ವಿಕೆಟ್ ಒಪ್ಪಿಸಿದರು. 

ಇನ್ನು 9ನೇ ವಿಕೆಟ್‌ಗೆ ರವಿಚಂದ್ರನ್ ಅಶ್ವಿನ್ ಹಾಗೂ ಜಸ್ಪ್ರೀತ್ ಬುಮ್ರಾ ಅಮೂಲ್ಯ 26 ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ಅಶ್ವಿನ್ 29 ರನ್ ಬಾರಿಸಿ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು.
 

click me!