IPL 2022 : ಹೊರಬಿದ್ದ ವಿವೋ, 2022 ಐಪಿಎಲ್ ಗೆ TATA ಪ್ರಾಯೋಜಕತ್ವ!

By Suvarna News  |  First Published Jan 11, 2022, 3:32 PM IST

ಐಪಿಎಲ್ 2022 ಮತ್ತು 2023 ಗೆ ಟಾಟಾ ಶೀರ್ಷಿಕೆ ಪ್ರಾಯೋಜಕತ್ವ
ತನ್ನ ಎರಡು ವರ್ಷದ ಒಪ್ಪಂದವನ್ನು ಟಾಟಾ ಗೆ ವರ್ಗಾಯಿಸಿದ ವಿವೋ
2020ರಲ್ಲಿ ತಮ್ಮ ಟೈಟಲ್ ಸ್ಪಾನ್ಸರ್ ಷಿಪ್ ಅನ್ನು ಡ್ರೀಮ್ 11 ಗೆ ವರ್ಗಾಯಿಸಿದ್ದ ವಿವೋ
 


ಬೆಂಗಳೂರು (ಜ. 11): ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ನೊಂದಿಗೆ (IPL) ಚೀನಾದ (China) ಮೊಬೈಲ್ ತಯಾರಕ ಕಂಪನಿ ವಿವೋದ (VIVO) ಜೊತೆಯಾಟ ಮುಕ್ತಾಯವಾಗಿದೆ. 2022 ಹಾಗೂ 2023ರ ಐಪಿಎಲ್ ನ ಶೀರ್ಷಿಕೆ ಪ್ರಾಯೋಜಕತ್ವದ ಒಪ್ಪಂದವನ್ನು ವಿವೋ ಕಂಪನಿ ಟಾಟಾ ಗೆ ವರ್ಗಾವಣೆ ಮಾಡಿದ್ದು, ಮುಂದಿನ ಎರಡು ಆವೃತ್ತಿಯ ಐಪಿಎಲ್ ಗಳು ಟಾಟಾ ಐಪಿಎಲ್ (TATA IPL) ಹೆಸರಿನಿಂದ ಕರೆಯಿಸಿಕೊಳ್ಳುತ್ತದೆ. ಪ್ರಾಯೋಜಕತ್ವದ ಕುರಿತಾಗಿ ಆಗಿರುವ ಬದಲಾವಣೆಯನ್ನು ಮಂಗಳವಾರ ನಡೆದ ಐಪಿಎಲ್ ಆಡಳಿತ ಮಂಡಳಿ (IPL GC) ಸಭೆಯಲ್ಲಿ ಅನುಮೋದನೆ ನೀಡಲಾಯಿತು.

2020ರಲ್ಲಿ ಭಾರತದಲ್ಲಿ ಚೀನಾ ವಿರೋಧಿ ಭಾವನೆಗಳಿದ್ದಾಗ ತನ್ನ ಶೀರ್ಷಿಕೆ ಪ್ರಾಯೋಜಕತ್ವದಿಂದ ಹೊರಗುಳಿದಿದ್ದ ವಿವೋ, ಆ ವರ್ಷ ಡ್ರೀಮ್ 11 ಗೆ ಇದನ್ನು ವರ್ಗಾವಣೆ ಮಾಡಿತ್ತು. ಅದಾದ ಬಳಿಕ 2021ರಲ್ಲಿ ಮತ್ತೆ ವಾಪಸಾಗಿತ್ತು. ಆದರೆ, 2022ರ ಋತುವಿನಿಂದ ಇದು ಸಂಪೂರ್ಣವಾಗಿ ಮುಕ್ತಾಯಗೊಳ್ಳಲಿದೆ. ವಿವೋ ಹಾಗೂ ಬಿಸಿಸಿಐ 2018ರಲ್ಲಿ (BCCI) ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ 440 ಕೋಟಿ ರೂಪಾಯಿ ಒಪ್ಪಂದವನ್ನು ಮಾಡಿಕೊಂಡಿದ್ದವು. ನಿಯಮದ ಅನುಸಾರ 2023ರಲ್ಲಿ ಈ ಒಪ್ಪಂದ ಮುಕ್ತಾಯಗೊಳ್ಳಬೇಕಿತ್ತು. ಆದರೆ, ಅವಧಿಗೂ ಮುನ್ನವೇ ಐಪಿಎಲ್ ಜೊತೆಯಲ್ಲಿ ತಮ್ಮ ಒಪ್ಪಂದವನ್ನು ಕೊನೆಗಳಿಸಲು ವಿವೋ ತೀರ್ಮಾನ ಮಾಡಿದೆ.

ಆಡಳಿತ ಮಂಡಳಿ ಸಭೆಯ ಬಳಿಕ ಮಾತನಾಡಿದ ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್  (IPL chairman Brijesh Patel ) ಟಾಟಾ ಗ್ರೂಪ್ ಟೈಟಲ್ ಸ್ಪಾನ್ಸರ್ ಆಗಿರೋದನ್ನು ಖಚಿತಪಡಿಸಿದರು. "ವಿವೋ ಒಪ್ಪಂದಿಂದ ಹೊರಬಿದ್ದಿದ್ದು, ಟಾಟಾ ನೂತನ ಸ್ಪಾನ್ಸರ್ ಆಗಿರಲಿದ್ದಾರೆ' ಎಂದು ಹೇಳಿದರು. ಅದರೊಂದಿಗೆ ಕಳೆದ ಕೆಲ ತಿಂಗಳುಗಳಿಂದ ಅಹಮದಾಬಾದ್ ಫ್ರಾಂಚೈಸಿಯನ್ನು ಸಿವಿಸಿ ಕ್ಯಾಪಿಟಲ್ಸ್ (CVC Capital) ಸ್ವಾಧೀನ ಪಡಿಸಿಕೊಳ್ಳುವ ವಿಚಾರದಲ್ಲಿ ಇದ್ದ ಆತಂಕ ನಿವಾರಣೆಯಾಗಿದ್ದು. ಮಂಗಳವಾರ ಬಿಸಿಸಿಐ ವತಿಯಿಂದ ಲೆಟರ್ ಅಫ್ ಇಂಟೆಂಟ್ ನೀಡಲಾಗಿದೆ ಎಂದು ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ. 
 

TATA to replace VIVO as IPL title sponsor next year: IPL Chairman Brijesh Patel to ANI pic.twitter.com/n0NVLTqjjG

— ANI (@ANI)


ಟೈಟಲ್ ಸ್ಪಾನ್ಸರ್ ಷಿಪ್ ಹಕ್ಕುಗಳನ್ನು ಬದಲಾವಣೆ ಮಾಡಲು ಸಿದ್ಧರಿದ್ದೇವೆ ಎಂದು ಈಗಾಗಲೇ ಬಿಸಿಸಿಐ ತಿಳಿಸಿತ್ತು. ಟಾಟಾ ಸಮೂಹ ಈ ಹಕ್ಕುಗಳನ್ನು ಖರೀದಿಸಲು ಸಿದ್ಧವಿದೆ ಎಂದೂ ಮನವರಿಕೆ ಮಾಡಿಕೊಟ್ಟಿತ್ತು. ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಇದಕ್ಕೆ ಅಧಿಕೃತ ಅನುಮೋದನೆ ನೀಡಲಾಗಿದೆ. ಮುಂದಿನ ಎರಡು ಋತುವಿನಲ್ಲಿ ಹಣಕಾಸು ವ್ಯವಹಾರದ ನಿಟ್ಟಿನಲ್ಲಿ ಯಾವೆಲ್ಲಾ ಬದಲಾವಣೆಗಳು ಆಗಲಿದೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. 2023ರ ಐಪಿಎಲ್ ಬಳಿಕ ಮತ್ತೊಮ್ಮೆ ಟೈಟಲ್ ಸ್ಪಾನ್ಸರ್ ಹಕ್ಕುಗಳು ಮಾರಾಟವಾಗಲಿದೆ. "ಐಪಿಎಲ್ ಸ್ಪಾನ್ಸರ್ ಷಿಪ್ ಒಪ್ಪಂದದ ಕುರಿತಾಗಿ ವಿವೋ ನಮಗೆ ಮನವಿಯನ್ನು ನೀಡಿತ್ತು. ಇದಕ್ಕೆ ಅಡಳಿತ ಮಂಡಳಿ ಒಪ್ಪಿಗೆ ನೀಡಿದೆ. ವಿವೋ ನೀಡಬೇಕಿದ್ದ ಮೊತ್ತವನ್ನೇ ಬಿಸಿಸಿಐ, ಟಾಟಾ ನಿಂದ ಪಡೆದುಕೊಳ್ಳಲಿದೆ" ಎಂದು ತಿಳಿಸಿದೆ.

IPL 2022: ಮುಂಬೈನಲ್ಲೇ ಸಂಪೂರ್ಣ ಐಪಿಎಲ್‌ ಟೂರ್ನಿ ಆಯೋಜನೆ..?
ಫೆ. 12 ಹಾಗೂ 13ಕ್ಕೆ ಐಪಿಎಲ್ ಹರಾಜು: ಇದೇ ವೇಳೆ ಫೆಬ್ರವರಿ 12 ಹಾಗೂ 13ಕ್ಕೆ 2022 ಐಪಿಎಲ್ ನ ಆಟಗಾರರ ಹರಾಜು (IPL auction)ಪ್ರಕ್ರಿಯೆ ಬೆಂಗಳೂರಿನಲ್ಲಿ (Bengaluru) ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ತೀರ್ಮಾನ ಮಾಡಿದೆ. ಈ ಹಿಂದೆಯೇ ದಿನಾಂಕ ನಿಗದಿಯಾಗಿದ್ದರೂ, ಆಡಳಿತ ಮಂಡಳಿಯ ಅನುಮೋದನೆ ಸಿಕ್ಕಿರಲಿಲ್ಲ. ಇದರ ನಡುವೆ ಹೊಸ ಫ್ರಾಂಚೈಸಿಗೆ ಆಟಗಾರರನ್ನು ಆಯ್ಕೆ ಮಾಡಲು ಎಲ್ಲಿಯವರೆಗೆ ಸಮಯ ನೀಡಲಾಗುತ್ತದೆ ಎನ್ನುವ ಮಾಹಿತಿಯನ್ನು ಬಿಸಿಸಿಐ ನೀಡಿಲ್ಲ. ಬುಹುತೇಕ ಮುಂದಿನ ಕೆಲ ವಾರಗಳಲ್ಲಿ ಲಖನೌ ಹಾಗೂ ಅಹಮದಾಬಾದ್ ಫ್ರಾಂಚೈಸಿ ತಂಡಕ್ಕೆ ಆಟಗಾರರು ಅಂತಿಮ ಮಾಡಲು ಬಿಸಿಸಿಐ ಡೆಡ್ ಲೈನ್ ನಿಗದಿ ಮಾಡಬಹುದು ಎಂದು ಅಂದಾಜಿಸಲಾಗಿದೆ.

Tap to resize

Latest Videos

 

click me!