IND vs SA Test ಕೊಹ್ಲಿ ತಂಡಕ್ಕೆ ವಾಪಸ್, ಸೌತ್ ಆಫ್ರಿಕಾ ನೆಲದಲ್ಲಿ ಚೊಚ್ಚಲ ಸರಣಿ ಗೆಲುವಿನ ಗುರಿ!

By Kannadaprabha NewsFirst Published Jan 11, 2022, 11:14 AM IST
Highlights
  • ಇಂದಿನಿಂದ ದ.ಆಫ್ರಿಕಾ ವಿರುದ್ಧ 3ನೇ ಟೆಸ್ಟ್‌
  • ಕೇಪ್‌ಟೌನ್‌ನಲ್ಲಿ ಒಂದೂ ಟೆಸ್ಟ್‌ ಗೆದ್ದಿಲ್ಲ ಭಾರತ
  • ನಾಯಕ ಕೊಹ್ಲಿ ಫಿಟ್‌, ಸಿರಾಜ್‌ ಔಟ್‌

ಕೇಪ್‌ಟೌನ್‌(ಜ.11): ದಕ್ಷಿಣ ಆಫ್ರಿಕಾ ನೆಲದಲ್ಲಿ(India tour to South Africa) ಚೊಚ್ಚಲ ಟೆಸ್ಟ್‌ ಸರಣಿ ಗೆಲ್ಲುವ ನಿರೀಕ್ಷೆಯೊಂದಿಗೆ ಕೇಪ್‌ಟೌನ್‌ ತಲುಪಿರುವ ಭಾರತ, ಆತಿಥೇಯರ ವಿರುದ್ಧ ಮಂಗಳವಾರ(ಜ.11)ದಿಂದ 3ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ(Cape Town Test) ಸೆಣಸಲಿದೆ.

ಸೆಂಚೂರಿಯನ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಜಯಿಸಿ ಮುನ್ನಡೆ ಸಾಧಿಸಿದ್ದ ಭಾರತ, ಜೋಹಾನ್ಸ್‌ಬರ್ಗ್‌ನಲ್ಲಿ ಸೋಲುಂಡಿತ್ತು. 3 ಪಂದ್ಯಗಳ ಸರಣಿ 1-1ರಲ್ಲಿ ಸಮಗೊಂಡಿದ್ದು, ಎರಡೂ ತಂಡಗಳಿಗೂ(India vs South Africa) ಸರಣಿ ಗೆಲ್ಲುವ ಅವಕಾಶವಿದೆ.

Rahul Dravid Birthday ಕ್ರಿಕೆಟ್‌ನ ಎಲ್ಲಾ ಜವಾಬ್ದಾರಿ ನಿರ್ವಹಿಸಿದ ಮಗಧೀರ, ದಿ ವಾಲ್‌ಗೆ ಹುಟ್ಟುಹಬ್ಬದ ಸಡಗರ!

ಬೆನ್ನು ನೋವಿನಿಂದ 2ನೇ ಟೆಸ್ಟ್‌ಗೆ ಗೈರಾಗಿದ್ದ ನಾಯಕ ವಿರಾಟ್‌ ಕೊಹ್ಲಿ(Virat Kohli Fit) ತಂಡಕ್ಕೆ ವಾಪಸಾಗಲಿದ್ದು, ಹನುಮ ವಿಹಾರಿ ಸ್ಥಾನ ಕಳೆದುಕೊಳ್ಳಬಹುದು. ಕೊಹ್ಲಿಗಿದು 99ನೇ ಟೆಸ್ಟ್‌. ಅವರ ಪುತ್ರಿಯ ಮೊದಲ ಹುಟ್ಟುಹಬ್ಬದ ದಿನವೇ ಪಂದ್ಯ ಆರಂಭವಾಗಲಿರುವ ಕಾರಣ, ಈ ಪಂದ್ಯವನ್ನು ವಿಶೇಷವಾಗಿಸಿಕೊಳ್ಳುವ ತವಕ ಕೊಹ್ಲಿ ಅವರದ್ದು. ಕಳೆದ 2 ವರ್ಷಗಳಿಂದ ಶತಕ ಬಾರಿಸದ ಕೊಹ್ಲಿ, ನ್ಯೂಲ್ಯಾಂಡ್ಸ್‌ ಮೈದಾನದಲ್ಲಿ ಮೂರಂಕಿ ಮೈಲಿಗಲ್ಲು ತಲುಪಲು ಕಾತರಿಸುತ್ತಿದ್ದಾರೆ.

ಭಾರತ ತಂಡ ಸರಣಿ ಗೆಲ್ಲಬೇಕಿದ್ದರೆ ಮಧ್ಯಮ ಕ್ರಮಾಂಕದಿಂದ ಸುಧಾರಿತ ಪ್ರದರ್ಶನ ಮೂಡಿಬರಬೇಕಿದೆ. ಪ್ರಮುಖವಾಗಿ ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ, ರಿಷಭ್‌ ಪಂತ್‌ ಜವಾಬ್ದಾರಿಯುತ ಆಟವಾಡಬೇಕು.

Ind vs SA: ಕೇಪ್‌ಟೌನ್‌ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ, 2 ಮಹತ್ವದ ಬದಲಾವಣೆ..!

ಇಶಾಂತ್‌ಗೆ ಸ್ಥಾನ?: 
ವಾಂಡರರ್ಸ್‌ ಟೆಸ್ಟ್‌ನಲ್ಲಿ ಸ್ನಾಯು ಸೆಳತಕ್ಕೆ ಒಳಗಾಗಿದ್ದ ವೇಗಿ ಮೊಹಮದ್‌ ಸಿರಾಜ್‌ 3ನೇ ಟೆಸ್ಟ್‌ನಲ್ಲಿ ಆಡುವುದಿಲ್ಲ ಎಂದು ವಿರಾಟ್‌ ಕೊಹ್ಲಿ ಖಚಿತಪಡಿಸಿದ್ದಾರೆ. ಆದರೆ ಅವರ ಬದಲು ಯಾರಿಗೆ ಸ್ಥಾನ ಸಿಗಲಿದೆ ಎನ್ನುವುದನ್ನ ತಿಳಿಸಿಲ್ಲ. ಹಿರಿಯ ವೇಗಿ ಇಶಾಂತ್‌ ಶರ್ಮಾ ಆಡುವ ಹನ್ನೊಂದರಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ. ಉಳಿದಂತೆ ಭಾರತ ತಂಡದಲ್ಲಿ ಬೇರಾರ‍ಯವ ಬದಲಾವಣೆ ಆಗುವ ನಿರೀಕ್ಷೆ ಇಲ್ಲ.

ಆತಿಥೇಯರ ಆತ್ಮವಿಶ್ವಾಸ ವೃದ್ಧಿ: 
2ನೇ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ದ.ಆಫ್ರಿಕಾ, ಭಾರತಕ್ಕೆ ಮತ್ತೊಂದು ಆಘಾತ ನೀಡಲು ಕಾಯುತ್ತಿದೆ. ಒಂದೆರಡು ಸೆಷನ್‌ಗಳ ಆಟ ಪಂದ್ಯದ ಫಲಿತಾಂಶ ನಿರ್ಧರಿಸಲಿದ್ದು, ಸಂಘಟಿತ ಪ್ರದರ್ಶನಕ್ಕೆ ಹೆಚ್ಚು ಒತ್ತು ನೀಡಲಿದ್ದೇವೆ ಎಂದು ಆತಿಥೇಯ ತಂಡದ ನಾಯಕ ಡೀನ್‌ ಎಲ್ಗರ್‌ ಹೇಳಿದ್ದಾರೆ.

ವೇಗಿಗಳ ಸ್ವರ್ಗ ಎನಿಸಿರುವ ನ್ಯೂಲ್ಯಾಂಡ್ಸ್‌ ಪಿಚ್‌ನಲ್ಲಿ ಭಾರತ ಹಾಗೂ ದ.ಆಫ್ರಿಕಾದ ವೇಗಿಗಳ ನಡುವೆ ಭಾರೀ ಪೈಪೋಟಿ ನಿರೀಕ್ಷೆ ಮಾಡಲಾಗಿದೆ.

ಸಂಭವನೀಯ ಆಟಗಾರರ ಪಟ್ಟಿ
ಭಾರತ: ರಾಹುಲ್‌, ಮಯಾಂಕ್‌, ಪೂಜಾರ, ಕೊಹ್ಲಿ(ನಾಯಕ), ರಹಾನೆ, ಪಂತ್‌, ಅಶ್ವಿನ್‌, ಶಾರ್ದೂಲ್‌, ಶಮಿ, ಇಶಾಂತ್‌/ಉಮೇಶ್‌, ಬೂಮ್ರಾ.

ದ.ಆಫ್ರಿಕಾ: ಮಾರ್ಕ್ರಮ್‌, ಎಲ್ಗರ್‌(ನಾಯಕ), ಪೀಟರ್‌ಸನ್‌, ಡುಸ್ಸೆನ್‌, ಬವುಮಾ, ವರೈನ್‌, ಯಾನ್ಸನ್‌, ರಬಾಡ, ಮಹಾರಾಜ್‌, ಓಲಿವರ್‌, ಎನ್‌ಗಿಡಿ.

ಪಿಚ್‌ ರಿಪೋರ್ಟ್‌
ನ್ಯೂಲ್ಯಾಂಡ್ಸ್‌ ಕ್ರೀಡಾಂಗಣದಲ್ಲಿ ಟೆಸ್ಟ್‌ ನಡೆದ 2 ವರ್ಷ ಕಳೆದಿದೆ. ಕಳೆದ ಟೆಸ್ಟ್‌ಗೂ ಈ ಟೆಸ್ಟ್‌ಗೂ ನಡುವೆ 8 ಪ್ರಥಮ ದರ್ಜೆ ಪಂದ್ಯಗಳು ನಡೆದಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ಸರಾಸರಿ 361 ರನ್‌ ದಾಖಲಾಗಿದೆ. ಹೀಗಾಗಿ ಬ್ಯಾಟರ್‌ಗಳಿಗೆ ರನ್‌ ಗಳಿಸಲು ಕಷ್ಟವಾಗದಿರಬಹುದು. ಪಿಚ್‌ ವೇಗಿಗಳಿಗೆ ಹೆಚ್ಚಿನ ನೆರವು ನೀಡುವ ನಿರೀಕ್ಷೆ ಇದೆ.

ಟೀಂ ಇಂಡಿಯಾ ಕೇಪ್‌ಟೌನ್‌ನಲ್ಲಿ ಭಾನುವಾರ ಅಭ್ಯಾಸ ಆರಂಭಿಸಿದೆ. ಬೆನ್ನು ನೋವಿನಿಂದಾಗಿ 2ನೇ ಟೆಸ್ಟ್‌ನಿಂದ ಹೊರಗುಳಿದಿದ್ದ ನಾಯಕ ವಿರಾಟ್‌ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರು ನೆಟ್ಸ್‌ನಲ್ಲಿ ಕಠಿಣ ಅಭ್ಯಾಸದಲ್ಲಿ ನಿರತರಾದರು. ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಾಹ ಹೆಚ್ಚು ಸಮಯ ಅಭ್ಯಾಸ ನಡೆಸುವುದು ಕಂಡುಬಂತು. ರಿಷಭ್‌ ಪಂತ್‌ ಬದಲಿಗೆ ಅವರಿಗೆ ಸ್ಥಾನ ಸಿಗುವ ನಿರೀಕ್ಷೆ ಇದೆ.

click me!