ಇದು ಕೇವಲ ಆರಂಭವಷ್ಟೇ, ಇನ್ನೂ ಸಾಗಬೇಕಾದ ದಾರಿ ಬಹಳಷ್ಟಿದೆ: ಮಗನ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ವೀರೇಂದ್ರ ಸೆಹ್ವಾಗ್‌

Published : Nov 19, 2026, 10:30 PM IST
Virender Sehwag

ಸಾರಾಂಶ

ಅಂಡರ್-19 ಏಷ್ಯಾಕಪ್ 2026 ರಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಆರ್ಯವೀರ್ ಸೆಹ್ವಾಗ್ ಸಾಧನೆ ಬಗ್ಗೆ ತಂದೆ ವೀರೇಂದ್ರ ಸೆಹ್ವಾಗ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಆರ್ಯವೀರ್ ಬ್ಯಾಟಿಂಗ್ ತನ್ನ ಯೌವನವನ್ನು ನೆನಪಿಸುತ್ತದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು (ನ.19): ಅಂಡರ್-19 ಏಷ್ಯಾಕಪ್ 2026 (U19 Asia Cup 2026) ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ 'ಸರಣಿ ಶ್ರೇಷ್ಠ' (Player of the Tournament) ಪ್ರಶಸ್ತಿ ಗೆದ್ದಿರುವ ಪುತ್ರ ಆರ್ಯವೀರ್ ಸೆಹ್ವಾಗ್ ಸಾಧನೆಗೆ ಟೀಮ್ ಇಂಡಿಯಾ ದಿಗ್ಗಜ ವೀರೇಂದ್ರ ಸೆಹ್ವಾಗ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಕೇವಲ ಐದು ಪಂದ್ಯಗಳಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳ ಸಹಿತ 361 ರನ್ ಸಿಡಿಸಿ ಭಾರತ ತಂಡ ಟ್ರೋಫಿ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ 19 ವರ್ಷದ ಆರ್ಯವೀರ್‌ಗೆ 'ಇದು ಕೇವಲ ಪಯಣದ ಆರಂಭವಷ್ಟೇ, ಇನ್ನೂ ಸಾಗಬೇಕಾದ ದಾರಿ ಬಹಳಷ್ಟಿದೆ' ಎಂದು ಸೆಹ್ವಾಗ್ ಕಿವಿಮಾತು ಹೇಳಿದ್ದಾರೆ.

'ಸಟಾಕ್ 50' (Sataack 50) ಟೆನಿಸ್-ಬಾಲ್ ಟೂರ್ನಿಯ ವಿಶೇಷವಾಗಿ ಮಾತನಾಡಿದ ವೀರೇಂದ್ರ ಸೆಹ್ವಾಗ್, ತಮ್ಮ ಪುತ್ರನ ಇತ್ತೀಚಿನ ಸಾಧನೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು. 'ಒಬ್ಬ ತಂದೆಯಾಗಿ, ಆರ್ಯವೀರ್ ಸೆಹ್ವಾಗ್ ಅಂಡರ್-19 ಏಷ್ಯಾಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ 'ಸರಣಿ ಶ್ರೇಷ್ಠ' ಪ್ರಶಸ್ತಿ ಗೆದ್ದಿರುವುದು ನನಗೆ ಸಂತೋಷ ತಂದಿದೆ. ಆದರೆ ಇದು ಅವನ ಪಯಣದ ಕೇವಲ ಆರಂಭವಷ್ಟೇ. ಅವನು ಇನ್ನೂ ಬಹಳ ದೂರ ಸಾಗಬೇಕಿದೆ, ಆದ್ದರಿಂದ ಇಷ್ಟಕ್ಕೇ ತೃಪ್ತಿಪಟ್ಟುಕೊಳ್ಳಬಾರದು ಎಂದು ನಾನು ಅವನಿಗೆ ಹೇಳಿದ್ದೇನೆ' ಎಂದು ಹೇಳಿದ್ದಾರೆ.

ಮುಂದೆ ದೆಹಲಿ U19 ತಂಡದ ನಾಯಕನಾಗಿ ಹೊಸ ಜವಾಬ್ದಾರಿ

ಆರ್ಯವೀರ್ ಅವರ ಮುಂದಿನ ಕ್ರಿಕೆಟ್ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಸೆಹ್ವಾಗ್,ಈಗ ಅವನು ದೆಹಲಿ ರಾಜ್ಯದ ಅಂಡರ್-19 ತರಬೇತಿ ಕ್ಯಾಂಪ್‌ ಸೇರಲಿದ್ದು, ಅಲ್ಲಿ ನಾಲ್ಕು ದಿನಗಳ ಪಂದ್ಯಗಳನ್ನು ಆಡಲಿದ್ದಾನೆ. ಅವನು ತಂಡದ ನಾಯಕನೂ (Captain) ಆಗಿರುವುದರಿಂದ, ಅವನ ಮೇಲೆ ಹೆಚ್ಚುವರಿ ಜವಾಬ್ದಾರಿಯಿದೆ ಎಂದು ತಿಳಿಸಿದರು.

'ಅವನ ಶಾಟ್‌ಗಳು ನನ್ನ ಯೌವನದ ದಿನಗಳನ್ನು ನೆನಪಿಸುತ್ತವೆ'

ಆರ್ಯವೀರ್ ಅವರ ಬ್ಯಾಟಿಂಗ್ ಶೈಲಿಯು ಕೆಲವು ಅಂಶಗಳಲ್ಲಿ ತಂದೆ ವೀರೇಂದ್ರ ಸೆಹ್ವಾಗ್ ಅವರನ್ನೇ ಹೋಲುತ್ತದೆ ಎಂಬುದು ಅಚ್ಚರಿಯೇನಲ್ಲ. ತಮ್ಮ ಮಗನ ಸ್ಟ್ರೋಕ್‌ಪ್ಲೇ (Strokeplay) ಹಳೆಯ ನೆನಪುಗಳನ್ನು ಮರುಕಳಿಸುತ್ತದೆ ಎಂಬುದನ್ನು ಸ್ವತಃ ಸೆಹ್ವಾಗ್ ಒಪ್ಪಿಕೊಂಡಿದ್ದಾರೆ. ಅವನ ಕೆಲವು ಶಾಟ್‌ಗಳು ಖಂಡಿತವಾಗಿಯೂ ನನ್ನ ಯೌವನದ ದಿನಗಳನ್ನು ನೆನಪಿಸುತ್ತವೆ. ಅವನನ್ನು ಮೈದಾನದಲ್ಲಿ ನೋಡಲು ತುಂಬಾ ಖುಷಿಯಾಗುತ್ತದೆ ಎಂದು ಸೆಹ್ವಾಗ್ ಹೇಳಿದರು. ಇದರ ಸಂಪೂರ್ಣ ಶ್ರೇಯಸ್ಸು ಅವನಿಗೆ ಮತ್ತು ಅವನ ಕಠಿಣ ಪರಿಶ್ರಮಕ್ಕೆ ಸಲ್ಲಬೇಕು; ಅವನು ನನ್ನ ಮಾತನ್ನು ಕೇಳುವುದೇ ಅಪರೂಪ ಎಂದು ಸೆಹ್ವಾಗ್ ತಮಾಷೆಯಾಗಿ ಚಟಾಕಿ ಹಾರಿಸಿದರು.

ವಿವಿಧ ಕೋಚ್‌ಗಳ ಮಾರ್ಗದರ್ಶನದ ಪ್ರಭಾವ ಸ್ಮರಿಸಿದ ದಿಗ್ಗಜ

ಆರ್ಯವೀರ್ ಅವರ ಆಟದ ಸುಧಾರಣೆಯಲ್ಲಿ ವಿವಿಧ ತರಬೇತುದಾರರ (Coaches) ಪಾತ್ರವನ್ನು ಸೆಹ್ವಾಗ್ ವಿಶೇಷವಾಗಿ ಒತ್ತಿ ಹೇಳಿದರು. ಅವನು ತನ್ನ ಕೋಚ್‌ಗಳ ಮಾತನ್ನು ಹೆಚ್ಚು ಕೇಳುತ್ತಾನೆ, ಉದಾಹರಣೆಗೆ ಕೋಚ್ ರಾಜು ಶರ್ಮಾ (Raju Sharma). ನಂತರ ಅವನು ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ (CoE) ಹೋದನು, ಅಲ್ಲಿ ವಿಭಿನ್ನ ಕೋಚ್‌ಗಳನ್ನು ಭೇಟಿಯಾದನು. ಅಂಡರ್-19 ಏಷ್ಯಾಕಪ್‌ನಲ್ಲಿ ಅವನಿಗೆ ಮತ್ತೊಬ್ಬ ಕೋಚ್ ಇದ್ದರು. ಹೀಗೆ ಅನೇಕ ತರಬೇತುದಾರರಿಂದ ಅವನು ವಿಭಿನ್ನ ವಿಷಯಗಳನ್ನು ಕಲಿಯುತ್ತಿದ್ದಾನೆ ಎಂದು ಸೆಹ್ವಾಗ್ ವಿವರಿಸಿದರು.

ಅಂಡರ್-19 ಏಷ್ಯಾಕಪ್ ಟೂರ್ನಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ವಿರುದ್ಧ ಭಾರತದ ಗೆಲುವಿನಲ್ಲಿ ಆರ್ಯವೀರ್ ಭರ್ಜರಿ 160 ರನ್ ಸಿಡಿಸಿ ಮಿಂಚಿದ್ದರು; ಅಲ್ಲದೆ ಫೈನಲ್ ಪಂದ್ಯದಲ್ಲೂ 58 ರನ್ ಬಾರಿಸಿ ತಂಡದ ಗೆಲುವಿಗೆ ನೆರವಾಗಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

WTC: ಆಫ್ರಿಕಾ ಆರ್ಭಟಕ್ಕೆ ಬಾಂಗ್ಲಾದೇಶ ಉಡೀಸ್! WTC ಫೈನಲ್ ರೇಸ್‌ನಲ್ಲಿ ಭಾರತ ಕಥೆ ಏನು? ಹೀಗಿದೆ ಲೆಕ್ಕಾಚಾರ!
'ಗೌರವ ಸಿಗಬೇಕಾದರೆ ದೊಡ್ಡ ಮೊತ್ತ ಗಳಿಸಬೇಕು': ಮಗ ಆರ್ಯವೀರ್‌ಗೆ ವಿರೇಂದ್ರ ಸೆಹ್ವಾಗ್ ಕಿವಿಮಾತು..!