ವಿರೇಂದ್ರ ಸೆಹ್ವಾಗ್ ಕಾಲರ್ ಹಿಡಿದು ಮುಖಕ್ಕೆ ಗುದ್ದಿದ್ದರು, ಟೀಂ ಇಂಡಿಯಾ ಕೋಚ್ ಆಗಿದ್ದ ಜಾನ್ ರೈಟ್!

Published : Aug 31, 2026, 04:56 PM IST
Virender Sehwag

ಸಾರಾಂಶ

ನಝಾಫ್’ಗಢದ ನವಾಬ ವಿರೇಂದ್ರ ಸೆಹ್ವಾಗ್ ತನ್ನ ನಿರ್ಭೀತ ಬ್ಯಾಟಿಂಗ್​ನಿಂದಲೇ ಹೆಸರುವಾಸಿ. ಆದರೆ 2002ರ ನಾಟ್ ವೆಸ್ಟ್ ಸರಣಿಯಲ್ಲಿ ಬೇಜವಾಬ್ದಾರಿ ಹೊಡೆತಕ್ಕೆ ಔಟಾದಾಗ, ಕೋಚ್ ಜಾನ್ ರೈಟ್ ಡ್ರೆಸ್ಸಿಂಗ್ ರೂಮ್​ನಲ್ಲಿ ಸೆಹ್ವಾಗ್​ರ ಕಾಲರ್ ಹಿಡಿದು ಕೆನ್ನೆಗೆ ಬಾರಿಸಿದ್ದರು. ಈ ಘಟನೆಯಿಂದ ನೊಂದ ಸೆಹ್ವಾಗ್ ಭಾರತಕ್ಕೆ ಮರಳಲು ನಿರ್ಧರಿಸಿದ್ದರಂತೆ.

ಸುದರ್ಶನ್, ಏಷ್ಯಾನೆಟ್ ಸುವರ್ಣ ನ್ಯೂಸ್

ಸುಲ್ತಾನ್ ಆಫ್ ಮುಲ್ತಾನ್. ಸುಮ್ಮನೆ ಬಂದದ್ದಲ್ಲ ಆ ಕೀರ್ತಿ, ಕಿರೀಟ. ಅದೊಂದು ತ್ರಿಶತಕ. ರಾವಲ್ಬಿಂಡಿಯ ಶರವೇಗದ ಸರದಾರ ಶೋಯೆಬ್ ಅಖ್ತರ್, ಮೊಹಮ್ಮದ್ ಸಾಮಿ, ಶಬ್ಬೀರ್ ಅಹ್ಮದ್, ಸಕ್ಲೇನ್ ಮುಷ್ತಾಕ್, ಅಬ್ದುಲ್ ರಜಾಕ್.. ಎಂಥಾ ಗಂಡೆದೆಯ ದಾಂಡಿಗನಾದರೂ ಒಂದು ಕ್ಷಣ ವಿಚಲಿತನಾಗುವಂಥಾ ಬೌಲಿಂಗ್ ಪಡೆ. ಅಂಥಾ ಬೌಲರ್’ಗಳ ಮುಂದೆ ಅದ್ಭುತ ತ್ರಿಶತಕ.. 375 ಎಸೆತಗಳಲ್ಲಿ 309 ರನ್.. ಪಾಕಿಸ್ತಾನದ ಬೌಲರ್’ಗಳನ್ನು ಅವರದ್ದೇ ನೆಲದಲ್ಲಿ ಚಿಂದಿ ಉಡಾಯಿಸಿ ಬಿಟ್ಟಿದ್ದ ನಝಾಫ್’ಗಢದ ಪ್ರಚಂಡ.

ಸಿಕ್ಸರ್ ಬಾರಿಸಿ 300 ಪೂರೈಸಿದ ವಿರೇಂದ್ರ ಸೆಹ್ವಾಗ್

ಆ ತ್ರಿಶತಕದ ಇನ್ನಿಂಗ್ಸ್’ಗೂ ಮುನ್ನ ಸೌರವ್ ಗಂಗೂಲಿ ಜೊತೆ ಮಾತನಾಡುತ್ತಾ ವಿರೇಂದ್ರ ಸೆಹ್ವಾಗ್ ಒಂದು ಮಾತು ಹೇಳಿದ್ದನಂತೆ. ‘‘ದಾದಾ.. ಇನ್ನಿಂಗ್ಸ್’ನಲ್ಲಿ ನಾನು 95 ರನ್ ಗಳಿಸಿ ಆಡುತ್ತಿದ್ದರೆ, ಸಿಕ್ಸರ್ ಬಾರಿಸಿ ಶತಕ ಪೂರ್ತಿ ಮಾಡುತ್ತೇನೆ.. 195ರಲ್ಲಿದ್ದಾಗರೂ ಸಿಕ್ಸರ್ ಬಾರಿಸುತ್ತೇನೆ.. 295 ತಲುಪಿದಾಗಲು ಸಿಕ್ಸರ್ ಬಾರಿಸಿಯೇ ತ್ರಿಶತಕ ಕಂಪ್ಲೀಟ್ ಮಾಡುತ್ತೇನೆ’’. ‘‘ಆಸಾಮಿ ಆಡಿದ ಮಾತಿನಂತೆಯೇ ಆಡಿ ಬಿಟ್ಟ’’ ಎಂದಿದ್ದರು ದಾದಾ.

95 ರನ್ ಗಳಿಸಿದ್ದಾಗ ಶೋಯೆಬ್ ಅಖ್ತರ್’ಗೆ ಸಿಕ್ಸರ್.. ಶತಕ.

195 ರಲ್ಲಿದ್ದಾಗ ಮತ್ತೊಂದು ಸಿಕ್ಸರ್.. ದ್ವಿಶತಕ.

295 ರನ್ ಗಳಿಸಿದ್ದಾಗ ಮಗದೊಂದು ಸಿಕ್ಸರ್.. ತ್ರಿಶತಕ.

95, 195ರಲ್ಲಿದ್ದಾಗ ಸಿಕ್ಸರ್ ಬಾರಿಸಿದ್ದನ್ನು ನೋಡಿದ ಪಾಕಿಸ್ತಾನ ತಂಡದ ಇಂಜಮಾಮ್ ಉಲ್ ಹಕ್, ಸೆಹ್ವಾಗ್ 295 ರನ್ ಗಳಿಸಿದಾಗ ಎಂಥಾ ಕ್ಷೇತ್ರರಕ್ಷಣೆ ವ್ಯೂಹ ಹೆಣೆದನೆಂದರೆ. ಫೈನ್ ಲೆಗ್, ಡೀಪ್ ಸ್ಕ್ವೇರ್ ಲೆಗ್, ಮಿಡ್ ವಿಕೆಟ್, ಲಾಂಗ್ ಆನ್, ಲಾಂಗ್ ಆಫ್. ಹೀಗೆ ಐದು ಕ್ಷೇತ್ರರಕ್ಷಕರು ಬೌಂಡರಿ ಗೆರೆಯ ಬಳಿ ನಿಂತಿದ್ದರು. ಬೌಲರ್ ಸಕ್ಲೈನ್ ಮುಷ್ತಾಕ್.. ಮುನ್ನುಗ್ಗಿ ಬಾರಿಸಿದ ವೀರೂ ಸಿಕ್ಸರ್ ಬಾರಿಸಿ ತ್ರಿಶತಕ ಪೂರ್ತಿಗೊಳಿಸಿದ. ಒಬ್ಬ ಹುಂಬನಿಗಷ್ಟೇ ಅಂಥಾ ಧೈರ್ಯವಿರಲು, ಅಂಥಾ ಧೈರ್ಯ ಬರಲು ಸಾಧ್ಯ.

ವಿರೇಂದ್ರ ಸೆಹ್ವಾಗ್ ಸ್ವಭಾವತಃ ಹುಂಬ.. ಜಗತ್ತಿನ ಭಯಾನಕ ಬೌಲರ್’ಗಳನ್ನು ಬೆಚ್ಚಿ ಬೀಳಿಸಿದ್ದು ಅದೇ ಹುಂಬತನ. ದಕ್ಷಿಣ ಆಫ್ರಿಕಾ ವಿರುದ್ಧ ಚೆನ್ನೈ ಟೆಸ್ಟ್’ನಲ್ಲಿ ತ್ರಿಶತಕ ಬಾರಿಸಿದಾಗಲೂ ಅಷ್ಟೇ. ಎದುರಲ್ಲಿದ್ದ ಬೌಲರ್’ಗಳು ಡೇಲ್ ಸ್ಟೇನ್, ಮಖಾಯ ಎನ್’ಟಿನಿ, ಮೊರ್ನೆ ಮಾರ್ಕೆಲ್, ಜ್ಯಾಕ್ ಕಾಲೀಸ್.

ಅವನು ಲಯದಲ್ಲಿದ್ದನೆಂದರೆ ಎದುರಲ್ಲಿ ಅದೆಂಥಾ ಅತಿರಥನೇ ಇರಲಿ. ಜಂಘಾಬಲವೇ ಉಡುಗಿ ಹೋಗುವಂತೆ ಉಡಾಯಿಸಿ ಬಿಡುತ್ತಿದ್ದ ನಝಾಫ್’ಗಢದ ನವಾಬ.

‘‘ನನ್ನ ಜೀವಮಾನದಲ್ಲಿ ಎದುರಿಸಿದ ಅತ್ಯಂತ ಕಠಿಣ ಬ್ಯಾಟರ್ ವಿರೇಂದ್ರ ಸೆಹ್ವಾಗ್’’ ಎಂದಿದ್ದ 800 ಟೆಸ್ಟ್ ವಿಕೆಟ್’ಗಳ ಸರದಾರ, ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್. ವಿರೇಂದ್ರ ಸೆಹ್ವಾಗ್ ಡೋಂಟ್ ಕೇರ್ ಸ್ವಭಾವದವನು. ಅಂಥಾ ಸೆಹ್ವಾಗ್’ಗೆ ಒಬ್ಬರು ಕಾಲರ್ ಹಿಡಿದು ಮುಖಕ್ಕೆ ಬಾರಿಸಿದ್ದರು. ಅವರು ಭಾರತ ತಂಡದ ಮಾಜಿ ಕೋಚ್ ಜಾನ್ ರೈಟ್.

2002ರ ನಾಟ್ ವೆಸ್ಟ್ ತ್ರಿಕೋನ ಏಕದಿನ ಸರಣಿಯಲ್ಲಿ ಆಗಿದ್ದೇನು?

ಶ್ರೀಲಂಕಾ ವಿರುದ್ಧ 2ನೇ ಲೀಗ್ ಪಂದ್ಯ. ಲಾರ್ಡ್ಸ್’ನಲ್ಲಿ ಇಂಗ್ಲೆಂಡನ್ನು ಹೆಡೆಮುರಿ ಕಟ್ಟಿ ದಿ ಓವಲ್ ಮೈದಾನಕ್ಕೆ ಕಾಲಿಟ್ಟಿತ್ತು ಸೌರವ್ ಗಂಗೂಲಿ ಸಾರಥ್ಯದ ಭಾರತ ತಂಡ. ಸನತ್ ಜಯಸೂರ್ಯ, ರೊಮೇಶ್ ಕಾಲುವಿತರಣ, ಮರ್ವನ್ ಅಟಪಟ್ಟು, ಮಹೇಲ ಜಯವರ್ಧನೆಯಂಥಾ ದಾಂಡಿಗರಿದ್ದ ಶ್ರೀಲಂಕಾ 202ಕ್ಕೆ ಮಗುಚಿ ಬಿದ್ದಿತ್ತು. ಭಾರತದ ಮುಂದೆ 203ರ ಗುರಿ. ಇನ್ನೇನು ಸೌರವ್ ಗಂಗೂಲಿ ಜೊತೆ ಮೈದಾನಕ್ಕಿಳಿಯಬೇಕು. ವಿರೇಂದ್ರ ಸೆಹ್ವಾಗ್’ನನ್ನು ಕೋಚ್ ಜಾನ್ ರೈಟ್ ಪಕ್ಕಕ್ಕೆ ಕರೆಯುತ್ತಾರೆ. ‘‘Listen ವೀರೂ.. ಟಾರ್ಗೆಟ್ ದೊಡ್ಡದೇನಿಲ್ಲ. ನೀನು ಒಂದು ಬದಿಯಲ್ಲಿ ಇನ್ನಿಂಗ್ಸ್ ಅನ್ನು ಮುನ್ನಡೆಸು. ಕನಿಷ್ಠ 40 ಓವರ್’ಗಳವರೆಗೆ ಆಡು’’ ಎಂದಿದ್ದರು ಜಾನ್ ರೈಟ್.

‘‘No problem coach, don’t worry’’ ಎಂದು ಮೈದಾನಕ್ಕಿಳಿದಿದ್ದ ವೀರೂ. ಕ್ರೀಸ್ ಕಚ್ಚಿ ನಿಂತು ಆಡಲು ಅವನೇನು ರಾಹುಲ್ ದ್ರಾವಿಡ್ ಅಲ್ಲವಲ್ಲಾ.. ಸೆಹ್ವಾಗ್, ವೀರಾವೇಶದ ವಿರೇಂದ್ರ ಸೆಹ್ವಾಗ್.. ಅವನಿಗೆ ಗೊತ್ತಿದ್ದದ್ದು ಒಂದೇ, ಹೊಡಿ ಬಡಿ. ಅಷ್ಟೇ.. 19 ಎಸೆತಗಳಲ್ಲಿ 12 ರನ್ ಗಳಿಸಿ ಆಡುತ್ತಿದ್ದಾಗ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟಾಗಿ ಬಿಡುತ್ತಾನೆ. ಕೋಚ್ ಜಾನ್ ರೈಟ್ ಪಿತ್ತ ನೆತ್ತಿಗೇರಿ ಬಿಡುತ್ತದೆ. ಸೆಹ್ವಾಗ್ ಡ್ರೆಸ್ಸಿಂಗ್ ರೂಮ್’ಗೆ ಮರಳುವುದನ್ನೇ ಕಾಯುತ್ತಿದ್ದ ಜಾನ್, ವೀರೂ ಬರುತ್ತಿದ್ದಂತೆ ಕಾಲರ್ ಪಟ್ಟಿ ಹಿಡಿದು ಗೋಡೆಗೆ ಅದುಮಿ ಹಿಡಿದು, ‘‘ನಾನು ಹೇಳಿದ್ದೇನು, ನೀನು ಮಾಡಿದ್ದೇನು’’ ಎಂದವರೇ ಡ್ರೆಸ್ಸಿಂಗ್ ರೂಮ್’ನಲ್ಲಿದ್ದವರ ಮುಂದೆಯೇ ವಿರೇಂದ್ರನ ಮುಖಕ್ಕೆ ಒಂದು ಪಂಚ್ ಕೊಟ್ಟಿದ್ದರಂತೆ.

ವಿರೇಂದ್ರ ಸೆಹ್ವಾಗ್ ಕನಲಿ ಕೆಂಡವಾಗಿ ಬಿಟ್ಟ. ಕಿಟ್ ಬ್ಯಾಗ್ ಪ್ಯಾಕ್ ಮಾಡಿ ಭಾರತಕ್ಕೆ ವಾಪಸ್ ಹೋಗುತ್ತೇನೆ ಎಂದು ಹೊರಟು ನಿಂತವನ.. ಕೊನೆಗೆ ಅವನನ್ನು ಸಹ ಆಟಗಾರರು, ಟೀಮ್ ಮ್ಯಾನೇಜರ್ ಎಲ್ಲರೂ ಸೇರಿ ಸಮಾಧಾನ ಮಾಡುತ್ತಾರೆ. ಇಷ್ಟೆಲ್ಲಾ ನಡೆಯುತ್ತಿದ್ದಾಗ ನಾಯಕ ಸೌರವ್ ಗಂಗೂಲಿ ಬ್ಯಾಟಿಂಗ್ ಮಾಡುತ್ತಿರುತ್ತಾರೆ. ಪಂದ್ಯದ ನಂತರ ವಿಷಯ ಗೊತ್ತಾಗುತ್ತದೆ. ಟೀಮ್ ಬಸ್’ನಲ್ಲಿ ಕೋಚ್ ಜಾನ್ ರೈಟ್’ರನ್ನು ಗಂಗೂಲಿ ಕೇಳುತ್ತಾರೆ.

‘‘ನೀವು ವೀರೂಗೆ ಹೊಡೆದದ್ದು ನಿಜವೇ..?

‘ಹೌದು. ಅವನು ಔಟಾದ ರೀತಿಯನ್ನು ನೋಡಿ ಕೋಪ ಬಂದಿತ್ತು. ಒಂದೇಟು ಹೊಡೆದೆ’ ಎನ್ನುತ್ತಾರೆ ಜಾನ್ ರೈಟ್. ‘‘ಅವನು ನಿಮಗೆ ವಾಪಸ್ ಹೊಡೆಯಲಿಲ್ಲವೇ’’ ಎಂದು ಮರು ಪ್ರಶ್ನೆ ಹಾಕಿದ್ದರಂತೆ ಗಂಗೂಲಿ. ಹುಂಬತನವನ್ನೇ ಮೈಹೊದ್ದಂತಿದ್ದ ವೀರೂ ಹೊಡೆತ ತಿಂದು ಸುಮ್ಮನಿದ್ದದ್ದೇ ಸೌರವ್ ಗಂಗೂಲಿಯವರ ಅಚ್ಚರಿಗೆ ಕಾರಣವಾಗಿತ್ತು. ಕೊನೆಗೆ ಸೆಹ್ವಾಗ್ ಬಳಿ ಜಾನ್ ರೈಟ್ ಕ್ಷಮೆ ಕೇಳುವುದರೊಂದಿಗೆ ಡ್ರೆಸ್ಸಿಂಗ್ ರೂಮ್ ಪಂಚ್ ವಿಚಾರ ಸುಖಾಂತ್ಯವಾಗಿತ್ತು.

(ಸುದ್ದಿ ಮೂಲ: ಈ ಸ್ವಾರಸ್ಯಕರ ಸಂಗತಿಯನ್ನು ಸಂದರ್ಶನವೊಂದರಲ್ಲಿ ಸ್ವತಃ ಸೌರವ್ ಗಂಗೂಲಿಯವರೇ ಹೇಳಿದ್ದರು)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

​ಸೆಲೆಕ್ಟ್ ಆದ್ರೂ ಒಂದೇ ಒಂದು ಪಂದ್ಯವೂ ಆಡದೆ ನಿವೃತ್ತಿಯಾದ ಭಾರತದ ಅಪರೂಪದ ಕ್ರಿಕೆಟ್ ಹೀರೋ: ಧೋನಿ-ಗಂಭೀರ್ ಕಾಲದ ಈ ಆಟಗಾರ ಯಾರು ಗೊತ್ತಾ?
2 ODI, 115 ರನ್, 1 ಪಂದ್ಯಶ್ರೇಷ್ಠ ಪ್ರಶಸ್ತಿ; ಆದರೂ 3ನೇ ಪಂದ್ಯವನ್ನೇ ಆಡದ ಭಾರತದ ಕ್ರಿಕೆಟಿಗ!