ವಿಜಯ್ ಹಜಾರೆ ಟ್ರೋಫಿ ಕಮ್‌ಬ್ಯಾಕ್‌ ಪಂದ್ಯದಲ್ಲಿ ಶತಕ ಚಚ್ಚಿದ ಕಿಂಗ್ ಕೊಹ್ಲಿ! ವಿರಾಟ್‌ಗಿದು ಕಳೆದ 4 ಪಂದ್ಯಗಳಲ್ಲಿ 3ನೇ ಶತಕ

Published : Dec 24, 2025, 05:02 PM IST
Rohit Sharma and Virat Kohli

ಸಾರಾಂಶ

2025-26ನೇ ಸಾಲಿನ ವಿಜಯ್ ಹಜಾರೆ ಟ್ರೋಫಿಯ ಮೊದಲ ದಿನವೇ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಶತಕ ಸಿಡಿಸಿ ಮಿಂಚಿದ್ದಾರೆ. 15 ವರ್ಷಗಳ ಬಳಿಕ ಕಣಕ್ಕಿಳಿದ ಕೊಹ್ಲಿ ಡೆಲ್ಲಿ ಪರ 131 ರನ್ ಗಳಿಸಿದರೆ, ರೋಹಿತ್ ಮುಂಬೈ ಪರ 155 ರನ್ ಚಚ್ಚಿ ತಮ್ಮ ತಂಡಗಳ ಗೆಲುವಿಗೆ ಕಾರಣರಾದರು.

ಬೆಂಗಳೂರು: 2025-26ನೇ ಸಾಲಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಮೊದಲ ದಿನವೇ ಶತಕಗಳ ಸುರಿಮಳೆಯೇ ಸುರಿದಿದೆ. ಬರೋಬ್ಬರಿ 15 ವರ್ಷಗಳ ಬಳಿಕ ಮೊದಲ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ, ತಾವಾಡಿದ ಮೊದಲ ಪಂದ್ಯದಲ್ಲೇ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇನ್ನು ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಕೂಡಾ ಮುಂಬೈ ಪರ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

2010ರಲ್ಲಿ ಕೊನೆಯ ಬಾರಿಗೆ ವಿಜಯ್ ಹಜಾರೆ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಕೊಹ್ಲಿ ಇದೀಗ ಬರೋಬ್ಬರಿ 15 ವರ್ಷಗಳ ಬಳಿಕ ಮತ್ತೆ ಈ ಟೂರ್ನಿಯಾಡಲು ಡೆಲ್ಲಿ ಪರ ಕಣಕ್ಕಿಳಿದರು. ನಗರದ ಹೊರವಲಯದಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ನ ಮೈದಾನದಲ್ಲಿ ನಡೆದ ಆಂಧ್ರ ಪ್ರದೇಶ ಎದುರಿನ ಪಂದ್ಯದಲ್ಲಿ ಕೊಹ್ಲಿ ಕೇವಲ 83 ಎಸೆತಗಳನ್ನು ಎದುರಿಸಿ ಶತಕ ಸಿಡಿಸುವಲ್ಲಿ ಯಶಸ್ವಿಯಾದರು.

ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರು ಶತಕ ಸಿಡಿಸಿದ ಕೊಹ್ಲಿ:

ಈಗಾಗಲೇ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ವಿರಾಟ್ ಕೊಹ್ಲಿ, ಏಕದಿನ ಮಾದರಿಯಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಏಕದಿನ ಕ್ರಿಕೆಟ್ ಮಾದರಿಯಲ್ಲಿ ರೆಡ್ ಹಾಟ್ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ, ಕಳೆದ ನಾಲ್ಕು ಏಕದಿನ ಪಂದ್ಯಗಳ ಪೈಕಿ ಕೊಹ್ಲಿ ಮೂರು ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಕೊಹ್ಲಿ, ದಕ್ಷಿಣ ಆಫ್ರಿಕಾ ಎದುರಿನ ಮೊದಲೆರಡು ಪಂದ್ಯಗಳಲ್ಲಿ ಶತಕ ಸಿಡಿಸಿದ್ದರು. ಇನ್ನು ಮೂರನೇ ಏಕದಿನ ಪಂದ್ಯದಲ್ಲಿ ಅಜೇಯ ಅರ್ಧಶತಕ ಸಿಡಿಸಿದ್ದರು. ಇದೀಗ ಆಂಧ್ರ ಪ್ರದೇಶ ಎದುರು ಶತಕ ಸಿಡಿಸುವ ಮೂಲಕ ತಮ್ಮ ಫಾರ್ಮ್ ಮುಂದುವರೆಸಿದ್ದಾರೆ.

ಆಂಧ್ರ ಪ್ರದೇಶ ಎದುರು ಗೆದ್ದು ಬೀಗಿದ ಡೆಲ್ಲಿ

ಮೊದಲು ಬ್ಯಾಟ್ ಮಾಡಿದ ಆಂಧ್ರಪ್ರದೇಶ ತಂಡವು ರಿಕಿ ಭುಯಿ ಅವರ ಆಕರ್ಷಕ ಶತಕ(122)ದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 298 ರನ್ ಕಲೆಹಾಕಿತು. ಇನ್ನು ಸವಾಲಿನ ಗುರಿ ಬೆನ್ನತ್ತಿದ ಡೆಲ್ಲಿ ತಂಡವು ಮೊದಲ ಓವರ್‌ನಲ್ಲೇ ಒಂದು ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಪ್ರಿಯಾನ್ಶ್‌ ಆರ್ಯಾ ಹಾಗೂ ವಿರಾಟ್ ಕೊಹ್ಲಿ 113 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

ಪ್ರಿಯಾನ್ಶ್‌ ಆರ್ಯಾ 74 ರನ್ ಸಿಡಿಸಿದರೆ, ವಿರಾಟ್ ಕೊಹ್ಲಿ ಕೇವಲ 101 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 131 ರನ್ ಸಿಡಿಸಿ ಸತ್ಯನಾರಾಯಣ ರಾಜು ಅವರಿಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ನಿತೀಶ್ ರಾಣಾ 77 ರನ್ ಸಿಡಿಸುವ ಮೂಲಕ ತಂಡಕ್ಕೆ ಅಮೂಲ್ಯ ರನ್ ಕಾಣಿಕೆ ನೀಡಿದರು. ಅಂತಿಮವಾಗಿ ಡೆಲ್ಲಿ ತಂಡವು ಕೇವಲ 37.4 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಸುಲಭ ಗೆಲುವು ದಾಖಲಿಸಿತು.

ಸಿಕ್ಕಿಂ ಎದುರು ಹಿಟ್‌ಮ್ಯಾನ್ ಶತಕ

ಸಿಕ್ಕಿಂ ಎದುರಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಸ್ಪೋಟಕ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಗೆಲ್ಲಲು 237 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಮುಂಬೈ ತಂಡವು ಕೇವಲ 2 ಎರಡು ವಿಕೆಟ್ ಕಳೆದುಕೊಂಡು ಇನ್ನೂ 117 ಎಸೆತಗಳು ಬಾಕಿ ಇರವಂತೆಯೇ ಗೆಲುವಿನ ನಗೆ ಬೀರಿತು. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಕೇವಲ 94 ಎಸೆತಗಳನ್ನು ಎದುರಿಸಿ 18 ಬೌಂಡರಿ ಹಾಗೂ 9 ಸಿಕ್ಸರ್‌ಗಳ ನೆರವಿನಿಂದ 155 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದು ಗಂಟೆಯೂ ಉಳಿಯಲಿಲ್ಲ ಇಶಾನ್ ಕಿಶನ್ ಅತಿವೇಗದ ಶತಕದ ರೆಕಾರ್ಡ್; ವೈಭವ್ ಸೂರ್ಯವಂಶಿ ಕ್ಯಾಪ್ಟನ್ ಪಾಲಾದ ಹೊಸ ದಾಖಲೆ
ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಬೆನ್ನಲ್ಲೇ ಖಡಕ್ ವಾರ್ನಿಂಗ್ ಕೊಟ್ಟ ಇಶಾನ್ ಕಿಶನ್! ವೈಭವ್ ಸೂರ್ಯವಂಶಿ ರೆಕಾರ್ಡ್ ಧೂಳೀಪಟ