ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಪಾಕ್ ಎದುರಿನ ಇನಿಂಗ್ಸ್ ನೆನಪಿಸಿಕೊಂಡ ವಿರಾಟ್ ಕೊಹ್ಲಿ
ಪಾಕಿಸ್ತಾನ ವಿರುದ್ದ ಅಜೇಯ 82 ರನ್ ಸಿಡಿಸಿ ಮಿಂಚಿದ್ದ ಕಿಂಗ್ ಕೊಹ್ಲಿ
ಆ ಇನಿಂಗ್ಸ್‌ಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದ ಮಾಜಿ ನಾಯಕ
ನವದೆಹಲಿ(ನ.26): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಅವಿಸ್ಮರಣೀಯ ಇನಿಂಗ್ಸ್ ಆಡುವ ಮೂಲಕ ಟೀಂ ಇಂಡಿಯಾವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದ್ದರು. ಇದೀಗ ಕಿಂಗ್ ಕೊಹ್ಲಿ ಆ ಇನಿಂಗ್ಸ್ ಮೆಲುಕು ಹಾಕಿದ್ದು, ಆ ಇನಿಂಗ್ಸ್‌ಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಪಾಕ್ ವಿರುದ್ದ ವಿರಾಟ್ ಕೊಹ್ಲಿ ಆಡಿದ ಆ ಇನಿಂಗ್ಸ್ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ.
ಅಕ್ಟೋಬರ್ 23ರಂದು ಐತಿಹಾಸಿಕ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ 82 ರನ್ ಸಿಡಿಸುವ ಮೂಲಕ ಟೀಂ ಇಂಡಿಯಾ 4 ವಿಕೆಟ್‌ಗಳ ರೋಚಕ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
undefined
"ಅಕ್ಟೋಬರ್ 23, 2022ಕ್ಕೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಹಿಂದೆಂದೂ ಕ್ರಿಕೆಟ್ ಆಡುವಾಗ ಆ ಮಟ್ಟಿಗಿನ ಶಕ್ತಿಯ ಅನುಭವ ನನಗಾಗಿರಲಿಲ್ಲ. ಎಂತಹ ಒಳ್ಳೆಯ ಸಂಜೆ ಅದಾಗಿತ್ತು" ಎಂದು ಮಾಜಿ ನಾಯಕ ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 296 ರನ್ ಬಾರಿಸುವ ಮೂಲಕ ಟೂರ್ನಿಯ ಗರಿಷ್ಠ ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು. ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ತನ್ನ ಪಾಲಿನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಎದುರು ಕಣಕ್ಕಿಳಿದಿತ್ತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 159 ರನ್ ಬಾರಿಸುವ ಮೂಲಕ ಟೀಂ ಇಂಡಿಯಾಗೆ ಸವಾಲಿನ ಗುರಿ ನೀಡಿತ್ತು. ಇನ್ನು ಗುರಿ ಬೆನ್ನತ್ತಿದ ಟೀಂ ಇಂಡಿಯಾ 34 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ 4 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಆದರೆ 5ನೇ ವಿಕೆಟ್‌ಗೆ ಜತೆಯಾದ ಹಾರ್ದಿಕ್ ಪಾಂಡ್ಯ ಹಾಗೂ ವಿರಾಟ್ ಕೊಹ್ಲಿ 113 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ಯದರು. ಹಾರ್ದಿಕ್ ಪಾಂಡ್ಯ 40 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
Ind vs NZ ಶತಕ ಸಿಡಿಸಿ 23 ವರ್ಷಗಳ ಹಳೆಯ ದಾಖಲೆ ಮುರಿದ ಟಾಮ್ ಲೇಥಮ್..!
ಇನ್ನು ಕೊನೆಯ ಓವರ್‌ನಲ್ಲಿ ಟೀಂ ಇಂಡಿಯಾ ಗೆಲ್ಲಲು 16 ರನ್‌ಗಳ ಅಗತ್ಯವಿತ್ತು. ಮೊಹಮ್ಮದ್ ನವಾಜ್ ಎಸೆದ ಹೈ ಫುಲ್‌ಟಾಸ್ ಅನ್ನು ಕೊಹ್ಲಿ ಸಿಕ್ಸರ್ ಬಾರಿಸಿದರು. ಆ ಚೆಂಡು ನೋ ಬಾಲ್ ಎಂದು ಅಂಪೈರ್ ತೀರ್ಪಿತ್ತರು. ಪ್ರೀ ಹಿಟ್ ಎಸೆತ ಕೂಡಾ ವೈಡ್ ಆಯಿತು. ನಂತರದ ಪ್ರೀ ಹಿಟ್ ಅವಕಾಶದಲ್ಲಿ ಕೊಹ್ಲಿ 3 ರನ್ ಓಡುವ ಮೂಲಕ ಗೆಲುವನ್ನು ಮತ್ತಷ್ಟು ಸುಲಭಗೊಳಿಸಿದರು. ಕೊನೆಯ ಎಸೆತದಲ್ಲಿ ರವಿಚಂದ್ರನ್ ಅಶ್ವಿನ್, ಗೆಲುವಿನ ರನ್ ಬಾರಿಸಿದರು.
ಟಿ20 ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ದ 10 ವಿಕೆಟ್‌ಗಳ ಹೀನಾಯ ಸೋಲು ಕಾಣುವ ಮೂಲಕ ತನ್ನ ಅಭಿಯಾನ ಮುಗಿಸಿತ್ತು.