ವಿರಾಟ್ ಕೊಹ್ಲಿ ಮುಂದಿನ ಟಿ20 ವಿಶ್ವಕಪ್ ಆಡಬಹುದು ಆದ್ರೆ ರೋಹಿತ್ ಶರ್ಮಾ ಖಂಡಿತಾ ಆಡಲ್ಲ

By Naveen Kodase  |  First Published Feb 4, 2023, 12:34 PM IST

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ಬಿಡುವು ಪಡೆದಿರುವ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಈ ಇಬ್ಬರ ಭವಿಷ್ಯ ಇನ್ನೂ ಅತಂತ್ರ
ಈ ಇಬ್ಬರ ಟಿ20 ಕ್ರಿಕೆಟ್ ಬಗ್ಗೆ ಭವಿಷ್ಯ ನುಡಿದ ವಾಸೀಂ ಜಾಫರ್


ಮುಂಬೈ(ಫೆ.04): ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಪಾಲ್ಗೊಳ್ಳುವುದು ಅನುಮಾನ. ಆದರೆ ವಿರಾಟ್ ಕೊಹ್ಲಿ 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಬಹುದು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ಪಾಲ್ಗೊಂಡಿದ್ದರು. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತಾದರೂ, ಇಂಗ್ಲೆಂಡ್ ಎದುರು ಹೀನಾಯ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿತ್ತು. ಟಿ20 ವಿಶ್ವಕಪ್ ಟೂರ್ನಿಯ ಬಳಿಕ ವರ್ಕ್‌ಲೋಡ್ ಮ್ಯಾನೇಜ್‌ ಮಾಡುವ ಉದ್ದೇಶದಿಂದ ಈ ಇಬ್ಬರು ಆಟಗಾರರಿಗೆ ಚುಟುಕು ಕ್ರಿಕೆಟ್‌ನಿಂದ ವಿಶ್ರಾಂತಿ ನೀಡಲಾಗಿದೆ.

Tap to resize

Latest Videos

ಈ ಇಬ್ಬರು ಆಟಗಾರರು ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ಎದುರಿನ ಟಿ20 ಸರಣಿಯಿಂದ ಹೊರಗುಳಿದಿದ್ದರು. ಈ ಕುರಿತಂತೆ ಈ ಇಬ್ಬರು ಆಟಗಾರರನ್ನು ಟಿ20 ತಂಡದಿಂದ ಕೈಬಿಡಲಾಗಿದೆಯೇ ಅಥವಾ ವಿಶ್ರಾಂತಿ ನೀಡಲಾಗಿದೆಯೇ ಎನ್ನುವ ಪ್ರಶ್ನೆಗೆ ಟೀಂ ಇಂಡಿಯಾ ಹೆಡ್ ಕೋಚ್ ಸ್ಪಷ್ಟ ಉತ್ತರ ನೀಡಿದ್ದು, ಈ ಇಬ್ಬರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಚುಟುಕಾಗಿಯೇ ಉತ್ತರಿಸಿದ್ದರು. 

ಇದೀಗ ಈ ಕುರಿತಂತೆ ವಾಸೀಂ ಜಾಫರ್ ಕೂಡಾ ಪ್ರತಿಕ್ರಿಯೆ ನೀಡಿದ್ದು, ನನ್ನ ಪ್ರಕಾರ ರೋಹಿತ್ ಶರ್ಮಾ, ಈಗಾಗಲೇ ಕೊನೆಯ ಟಿ20 ವಿಶ್ವಕಪ್ ಪಂದ್ಯವನ್ನಾಡಿದ್ದಾರೆ ಎಂದಿದ್ದಾರೆ. ಪಾಕಿಸ್ತಾನದ ಕ್ರಿಕೆಟಿಗ ಬಾಸಿತ್ ಅಲಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಜಾಫರ್, ಟಿ20 ಪಂದ್ಯವು ಯುವಕರಿಗೆ ಹೆಚ್ಚು ಸೂಕ್ತವಾದದ್ದು. ರೋಹಿತ್ ಶರ್ಮಾ, ಮುಂದಿನ ವಿಶ್ವಕಪ್ ಟೂರ್ನಿಗೆ ಭಾರತದ ಭಾಗವಾಗಿರಲಿದ್ದಾರೆ ಎಂದು ನನಗನಿಸುತ್ತಿಲ್ಲ ಎಂದು ಜಾಫರ್ ಅಭಿಪ್ರಾಯಪಟ್ಟಿದ್ದಾರೆ.

" ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೆ ಕಳೆದೆರಡು ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು, ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಾದ ಬಳಿಕ ಐಪಿಎಲ್ ಹಾಗೂ ಆ ನಂತರ ಏಕದಿನ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ಭಾರತ ತಂಡವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೂ ಅರ್ಹತೆಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಟಿ20 ಕ್ರಿಕೆಟ್ ಯುವಕರ ಕ್ರೀಡೆಯಾಗಿದ್ದು, ನನ್ನ ವೈಯುಕ್ತಿಕ ಅಭಿಪ್ರಾಯದ ಪ್ರಕಾರ ಮುಂದಿನ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ, ಭಾರತ ತಂಡದಲ್ಲಿರುತ್ತಾರೆ ಎಂದೆನಿಸುತ್ತಿಲ್ಲ.  ವಿರಾಟ್ ಕೊಹ್ಲಿ, ಮುಂದಿನ ಟಿ20 ವಿಶ್ವಕಪ್ ವಿಶ್ವಕಪ್ ಆಡುವ ಸಾಧ್ಯತೆಯಿದೆ. ಆದರೆ ರೋಹಿತ್ ಶರ್ಮಾ ಖಂಡಿತವಾಗಿಯೂ ಮುಂಬರುವ ಚುಟುಕು ವಿಶ್ವಕಪ್ ಆಡುವುದಿಲ್ಲ. ಯಾಕೆಂದರೆ, ಅವರಿಗೆ ಈಗಾಗಲೇ 36 ವರ್ಷವಾಗಿದೆ" ಎಂದು ವಾಸೀಂ ಜಾಫರ್ ಹೇಳಿದ್ದಾರೆ. 

T20I ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಹೆಸರಿನಲ್ಲಿರುವ ಈ 3 ದಾಖಲೆ ಶುಭ್‌ಮನ್‌ ಗಿಲ್ ಮುರಿಯಬಹುದು..!

ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಸಮಿತಿ, ಭವಿಷ್ಯದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಹೊರಗಿಟ್ಟೇ ತಂಡವನ್ನು ಕಟ್ಟಬೇಕಾಗುತ್ತದೆ. ಯುವ ಪ್ರತಿಭಾನ್ವಿತ ಆಟಗಾರರಿಗೆ ಪಂದ್ಯದಲ್ಲಿ ಯಾವುದೇ ಆಟಗಾರರ ಸಲಹೆಯ ಅಗತ್ಯವಿಲ್ಲ. ಯಾಕೆಂದರೆ, ಅವರೆಲ್ಲರೂ ಐಪಿಎಲ್ ಸೇರಿದಂತೆ ಹಲವು ಪಂದ್ಯಗಳನ್ನಾಡಿದ ಅನುಭವ ಹೊಂದಿರುತ್ತಾರೆ. ಹೀಗಾಗಿ ಯಾವ ಆಟಗಾರರ ಗೈಡ್‌ಲೈನ್ ಅಗತ್ಯತೆ ಯುವ ಆಟಗಾರರಿಗೆ ಬೇಕಾಗುವುದಿಲ್ಲ ಎಂದು ವಾಸೀಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಬದುಕು ಇಲ್ಲಿಗೆ ಮುಕ್ತಾಯವಾಯಿತಾ ಅಥವಾ ಇನ್ನಷ್ಟು ಕಾಲ ಆಡಲಿದ್ದಾರಾ ಎನ್ನುವ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಿದೆ.

click me!