
ಅಹಮದಾಬಾದ್ (ಮೇ.31): ಐಪಿಎಲ್‌ನಲ್ಲಿ ಮೊದಲ ಟ್ರೊಫಿ ಗೆಲ್ಲಲು ಬರೋಬ್ಬರಿ 18 ವರ್ಷ ಕಾದಿದ್ದ ಆರ್‌ಸಿಬಿ ಈಗ ಎರಡೇ ವರ್ಷಗಳ ಅಂತರದಲ್ಲಿ ತನ್ನ 2ನೇ ಟ್ರೋಫಿ ಗೆಲ್ಲುವ ಮೂಲಕ ಈ ಸಲ ಕೂಡ ಕಪ್ ನಮ್ದೆ ಎಂದು ಬೀಗಿದೆ. ಬೌಲರ್‌ಗಳ ಶಿಸ್ತಿನ ದಾಳಿ, ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿಯ (75* ರನ್, 42 ಎಸೆತ, 9 ಬೌಂಡರಿ, 3 ಸಿಕ್ಸರ್) ಮತ್ತೊಂದು ಮಾಸ್ಟರ್ ಕ್ಲಾಸ್ ಇನ್ನಿಂಗ್ಸ್ ನೆರವಿನಿಂದ ಆರ್‌ಸಿಬಿ 2026ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿದೆ. ಕಳೆದ ವರ್ಷ ಇದೇ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಟ್ರೋಫಿ ಗೆದ್ದಿದ್ದ ಆರ್‌ಸಿಬಿ, ಈ ಬಾರಿ ಟ್ರೋಫಿಗೆ ಮುತ್ತಿಡಲು ಹೆಚ್ಚಿನ ಶ್ರಮ ವಹಿಸಲಿಲ್ಲ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 90 ಸಾವಿರಕ್ಕಿಂತ ಅಧಿಕ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ತಂಡದ ನಾಯಕ ರಜತ್ ಪಟೀದಾರ್ ಗುಜರಾತ್ ತಂಡಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿದರು. ಬಹುತೇಕ ಎಲ್ಲರಿಗೂ ರಜತ್ ಪಟೀದಾರ್ ನಿರ್ಧಾರ ಅಚ್ಚರಿ ತಂದರೂ, ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಆರ್‌ಸಿಬಿ ಬೌಲಿಂಗ್ ಯುನಿಟ್ ದಾಳಿ ಮಾಡಿತು. ಇದರಿಂದಾಗಿ ಗುಜರಾತ್ 8 ವಿಕೆಟ್‌ಗೆ 155 ರನ್ ಬಾರಿಸಲಷ್ಟೇ ಶಕ್ತವಾಯಿತು. ಈ ಸಾಧಾರಣ ಮೊತ್ತವನ್ನು ಆರ್‌ಸಿಬಿ 18 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಸತತ 2ನೇ ವರ್ಷ ಐಪಿಎಲ್ ಚಾಂಪಿಯನ್ ಎನಿಸಿಕೊಂಡಿತು.
ಸಾಧಾರಣ ಗುರಿ ಬೆನ್ನಟ್ಟಿದ ಆರ್‌ಸಿಬಿ ಕೇವಲ 21 ಎಸೆತಗಳಲ್ಲಿ 50 ರನ್ ಗಡಿ ದಾಟಿತ್ತು. ಐಪಿಎಲ್ ಫೈನಲ್ ಪಂದ್ಯದಲ್ಲಿ ಇಷ್ಟುವೇಗವಾಗಿ ಟೀಮ್ ಹಾಫ್ ಸೆಂಚುರಿಯ ಗಡಿ ದಾಟಿದ್ದು ಇದೇ ಮೊದಲು. ಇದಕ್ಕೆ ನೆರವಾಗಿದ್ದ ವಿರಾಟ್ ಕೊಹ್ಲಿ ಹಾಗೂ ವೆಂಕಟೇಶ್ ಅಯ್ಯರ್. ಇಂಪ್ಯಾಕ್ಟರ್ ಪ್ಲೇಯರ್ ಆಗಿ ಆರಂಭಿಕನಾಗಿ ಬಂದ ವೆಂಕಟೇಶ್ ಅಯ್ಯರ್ 16 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಇದ್ದ 32 ರನ್ ಬಾರಿಸಿ ಗುಜರಾತ್‌ಗೆ ಗೆಲುವಿನ ಅವಕಾಶವೇ ಇಲ್ಲದಂತೆ ಮಾಡಿದರು. ಒಂದೆಡೆ ವಿಕೆಟ್ ಉರುಳಿದರೂ, ವಿರಾಟ್ ಕೊಹ್ಲಿ ಮಾತ್ರ ಅನುಭವಿಯಾಗಿ ಆರ್‌ಸಿಬಿ ಇನ್ನಿಂಗ್ಸ್‌ಅನ್ನು ಕಟ್ಟಿ 25 ಎಸೆತಗಳಲ್ಲಿ 68ನೇ ಐಪಿಎಲ್ ಅರ್ಧಶತಕ ಬಾರಿಸಿದರು. ಅದರಲ್ಲೂ ಫೈನಲ್‌ನಂಥ ವೇದಿಕೆಯಲ್ಲಿ ಕೊಹ್ಲಿ ಆಡಿದ ಇನ್ನಿಂಗ್ಸ್ ಸ್ಮರಣೀಯವಾಗಿ ಉಳಿದುಕೊಳ್ಳಲಿದೆ.
ತಂಡದ ಮೊತ್ತ 62 ರನ್ ಆಗಿದ್ದಾಗ ವೆಂಕಟೇಶ್ ಅಯ್ಯರ್ ಔಟಾದರೆ, ದೇವದತ್ ಪಡಿಕ್ಕಲ್ ಕೇವಲ 1 ರನ್ ಬಾರಿಸಿದರು. ಅದಾದ ಬಳಿಕ ಕೆಲಹೊತ್ತು ಕೊಹ್ಲಿ ಹಾಗೂ ನಾಯಕ ರಜತ್ ಪಟೀದಾರ್ (15) ಇನ್ನಿಂಗ್ಸ್ ಕಟ್ಟಿದರು.
ಈ ಹಂತದಲ್ಲಿ ದಾಳಿಗಿಳಿದ ರಶೀದ್ ಖಾನ್ 9ನೇ ಓವರ್‌ನಲ್ಲಿ ರಜತ್ ಪಟೀದಾರ್ ಹಾಗೂ ಕೃನಾಲ್ ಪಾಂಡ್ಯ ಇಬ್ಬರ ವಿಕೆಟ್ ಕೂಡ ಉರುಳಿಸುವ ಮೂಲಕ ಆರ್‌ಸಿಬಿಗೆ ಆಘಾತ ನೀಡಲು ಯತ್ನಿಸಿದರಾದರೂ ವಿರಾಟ್ ಕೊಹ್ಲಿಗೆ ಜೊತೆಯಾದ ಟಿಮ್ ಡೇವಿಡ್ ತಂಡದ ಚಾಂಪಿಯನ್ ಗೆಲುವನ್ನು ಸುಲಭಗೊಳಿಸಿದರು. ಐದನೇ ವಿಕೆಟ್‌ಗೆ ಈ ಜೋಡಿ 31 ಎಸೆತಗಳಲ್ಲಿ 41 ರನ್ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡಕ್ಕೆ ತಂದಿದ್ದರು.
25 ಎಸೆತಗಳಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಅರ್ಧಶತಕ ಐಪಿಎಲ್ ಇತಿಹಾಸದಲ್ಲಿ ಅವರ ಈವರೆಗಿನ ಅತ್ಯಂತ ವೇಗದ ಅರ್ಧಶತಕವಾಗಿದೆ. ಇದಕ್ಕೂ ಮುನ್ನ 2018ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಬೆಂಗಳೂರಿನಲ್ಲಿ 26 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದು ಅವರ ದಾಖಲೆಯಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.