
ಮುಂಬೈ (ಜು.01) ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಸದ್ಯ ಏಕದಿನ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಮಾತ್ರ ಮುಂದುವರಿದ್ದಾರೆ. ಟೆಸ್ಟ್ ಹಾಗೂ ಟಿ20ಯಿಂದ ನಿವೃತ್ತಿಯಾಗಿರುವ ಕೊಹ್ಲಿ ಇದೀಗ ಸಂಪೂರ್ಣವಾಗಿ ಉದ್ಯಮ ಜಗತ್ತಿಗೆ ಕಾಲಿಡುತ್ತಿದ್ದಾರೆ. ಈಗದಾಗಲೇ ಒನ್8 ಸ್ಪೋರ್ಟ್ಸ್ ಬ್ರ್ಯಾಂಡ್ ಲಾಂಚ್ ಮಾಡಿ ಭಾರಿ ಸಂಚಲನ ಸೃಷ್ಟಿಸಿರುವ ವಿರಾಟ್ ಕೊಹ್ಲಿ ಇದೀಗ ಕಾರ್ಪೋರೇಟ್ ವಲಯದಲ್ಲಿ ಮತ್ತೊಂದು ಸಂಚಲನಕ್ಕೆ ಸದ್ದಿಲ್ಲದ ತಯಾರಿ ನಡೆಸಿದ್ದಾರೆ. ವಿರಾಟ್ ಕೊಹ್ಲಿ ಭಾರಿ ಹೂಡಿಕೆ ಮಾಡಿರುವ ಅಗಿಲಿಟಾಸ್ ಸ್ಪೋರ್ಟ್ಸ್ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಯುವರಾಜ್ ಸಿಂಗ್ ಸೇರಿದಂತೆ ದಿಗ್ಗಜ ಕ್ರೀಡಾಪಟುಗಳು ಬೆಂಬಲಿತ ಸ್ಪೋರ್ಟ್ಸ್ 365 ಇ ಕಾಮರ್ಸ್ ಸ್ಟಾರ್ಟ್ಅಪ್ ಕಂಪನಿಯನ್ನು ಖರೀದಿಸಲು ವಿರಾಟ್ ಕೊಹ್ಲಿ ಮುಂದಾಗಿದ್ದಾರೆ. ಎರಡು ಕಂಪನಿಗಳು ಮಾತುಕತೆ ಅಂತಿಮ ಹಂತಕ್ಕೆ ತಲುಪಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ವಿರಾಟ್ ಕೊಹ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿರುವ ಸ್ಪೋರ್ಟ್ಸ್ ಸ್ಟಾರ್ಟ್‌ಅಪ್ ಕಂಪನಿ ಅಗಿಲಿಟಾಸ್. ಈ ಕಂಪನಿ ಮೂಲ ಬೆಂಗಳೂರು. ಪೂಮಾ ಬ್ರ್ಯಾಂಡ್‌ನ ಇಂಡಿಯಾದ ಮಾಜಿ ಮುಖ್ಯಸ್ಥ ಅಭಿಷೇಕ್ ಗಂಗೂಲಿ ಆರಂಭಿಸಿದ ಅಗಿಲಿಟಾಸ್ ಸ್ಪೋರ್ಟ್ಸ್ ಕಂಪನಿಯಲ್ಲಿ ವಿರಾಟ್ ಕೊಹ್ಲಿ 40 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಈ ಮೂಲಕ ಕಂಪನಿಯಲ್ಲಿ ಶೇಕಡಾ 1.94ರಷ್ಟು ಪಾಲು ಹೊಂದಿದ್ದಾರೆ. ಇತ್ತ ಸ್ಪೋರ್ಟ್ಸ್ 365 ಕ್ರೀಡಾ ಉತ್ಪನ್ನಗಳ ಇಕಾಮರ್ಸ್ ವೇದಿಕೆಯಾಗಿದೆ. ಆರಂಭದಲ್ಲೇ ಯುವರಾಜ್ ಸಿಂಗ್ ಭಾರಿ ಮೊತ್ತ ಹೂಡಿಕೆ ಮಾಡಿ ಈ ಕಂಪನಿಯ ಭಾಗವಾಗಿದ್ದರು. ಬಳಿಕ ನಟಿ ಲಾರಾ ದತ್ತಾ, ಸ್ಕ್ವಾಶ್ ಪ್ಲೇಯರ್ ದೀಪಿಕಾ ಪಲ್ಲಿಕಲ್ ಸೇರಿದಂತೆ ಹಲವರು ಸಣ್ಣ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದಾರೆ. ರಿಟೇಲ್ ಹಾಗೂ ಆನ್‌ಲೈನ್ ಮೂಲಕ ಕ್ರೀಡಾ ಉತ್ಪನ್ನಗಳನ್ನು ಮಾರಾಟ ಮಾಡುವ ಸ್ಟಾರ್ಟ್ಅಪ್ ಕಂಪನಿಯಾಗಿ ಬೆಳೆದು ನಿಂತಿದೆ. ಮೂಲಗಳ ಪ್ರಕಾರ ಇದೀಗ ಅಗಿಲಿಟಾಸ್ ಕಂಪನಿ, ಸ್ಪೋರ್ಟ್ಸ್ 365 ಕಂಪನಿಯನ್ನು ಖರೀದಿಸಲು ಮುಂದಾಗಿದೆ.
ವಿರಾಟ್ ಕೊಹ್ಲಿಯ ಒನ್8 ಕ್ರೀಡಾ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಕೊಹ್ಲಿ ಜನಪ್ರಿಯತೆ, ಕೊಹ್ಲಿಯ ಹಲವು ಉತ್ಪನ್ನಗಳಲ್ಲಿ ಒನ್8 ಇದೀಗ ಅತ್ಯಂತ ಜನಪ್ರಿಯ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಅಗಿಲಿಟಾಸ್‌ನಲ್ಲಿ ಹೂಡಿಕೆ ಬಳಿಕ ಕೊಹ್ಲಿಯ ಒನ್8 ಬ್ರ್ಯಾಂಡ್‌ನ್ನು ಅಗಿಲಿಟಾಸ್ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನದಲ್ಲಿದೆ. ಇದಕ್ಕಾಗಿ ಆಸ್ಟ್ರೇಲಿಯಾದ ಲುಟ್ಟೊ ಬ್ರ್ಯಾಂಡ್ ಜೊತೆ ಅಗಿಲಿಟಾಸ್ ಒಪ್ಪಂದ ಮಾಡಿಕೊಂಡಿದೆ. ಇದರ ನಡುವೆ ಸ್ಪೋರ್ಟ್ಸ್ 365 ಖರೀದಿ ಮಾಡಿ ಇಕಾಮರ್ಸ್ ಮೂಲಕ ಭಾರತದ ಮೂಲೆ ಮೂಲೆಗೂ ಕ್ರೀಡಾ ಉತ್ಪನ್ನವನ್ನು ಸುಲಭವಾಗಿ ತಲುಪಿಸಲು ತಮ್ಮದೇ ಇಕಾಮರ್ಸ್ ಮಾರ್ಗ ಹುಡುಕಿದೆ. ಒನ್8 ಶೂ ಹಾಗೂ ಕ್ರೀಡಾ ಉತ್ಪನ್ನಗಳನ್ನು ಪುಮಾ ಸೇರಿದಂತೆ ಇತರ ಜಾಗತಿಕ ಬ್ರ್ಯಾಂಡ್‌ಗಳಿಗೆ ಪ್ರತಿಸ್ಪರ್ಧಿಯಾಗಿಸಲು ಇದೀಗ ಅಗಿಲಿಟಾಸ್ ಮುಂದಾಗಿದೆ.
ಅಗಿಲಿಟಾಸ್ ಬರೋಬ್ಬರಿ 2,058 ಕೋಟಿ ರೂಪಾಯಿ ಮೌಲ್ಯದ ಕಂಪನಿಯಾಗಿದೆ. ವಿರಾಟ್ ಕೊಹ್ಲಿ ಸೇರಿದಂತೆ ಹೂಡಿಕೆದಾರರಿಂದ 600 ಕೋಟಿ ರೂಪಾಯಿ ಬಂಡವಾಳ ಕಲೆಹಾಕಿರುವ ಅಗಿಲಿಟಾಸ್ ಇದೀಗ ಸ್ಪೋರ್ಟ್ಸ್ 365 ಖರೀದಿಯೊಂದಿಗೆ ಮೌಲ್ಯ ವೃದ್ಧಿಕೊಳ್ಳಲಿದೆ. ಇತ್ಕೀಚೆಗಷ್ಟೇ ಅಗಿಲಿಟಾಸ್, ಪುಮಾ, ಅಡಿಡಾಸ್ ಸೇರಿದಂತೆ ಪ್ರತಿಷ್ಠಿತ ಬ್ರ್ಯಾಂಡ್‌ಗಳಿಗೆ ಶೂ ತಯಾರಿಕಾ ಕಂಪನಿಯಾಗಿರುವ ಮೊಚಿಕೋ ಶೂಸ್ ಖರೀದಿಸಿದೆ. ಸದ್ಯ ಅಗಿಲಿಟಾಸ್ ಜಾಗತಿಕ ಶೂ ಪೂರೈಕೆದಾರರನಾಗಿ ಗುರುತಿಸಿಕೊಂಡಿದೆ. ಇದೀಗ ಭಾರತದ ಸ್ಪೋರ್ಟ್ಸ್ ಇ ಕಾಮರ್ಸ್ ಬ್ರ್ಯಾಂಡ್ ಸ್ಪೋರ್ಟ್ಸ್ 365 ಖರೀದಿಯೊಂದಿಗೆ ಭಾರತದ ಕ್ರೀಡಾ ಕ್ಷೇತ್ರದಲ್ಲಿ ಉದ್ಯಮ ಮತ್ತೊಂದು ಹಂತಕ್ಕೆ ಪ್ರವೇಶ ಪಡೆಯಲಿದೆ. ಜೊತೆಗೆ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ದೊಡ್ಡ ಬಲ ನೀಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.