
ಬೆಂಗಳೂರು(ಮಾ.20): 2ನೇ ಆವೃತ್ತಿಯ ಡಬ್ಲ್ಯುಪಿಎಲ್‌ನಲ್ಲಿ ಚಾಂಪಿಯನ್ ಆದ ಮಹಿಳಾ ತಂಡದ ಆಟಗಾರ್ತಿಯರಿಗೆ ಅನ್‌ಬಾಕ್ಸ್ ಕಾರ್ಯಕ್ರಮಕ್ಕೂ ಮುನ್ನ ಪುರುಷರ ತಂಡದ ಆಟಗಾರರು, ಕೋಚ್‌ಗಳು ಗಾರ್ಡ್ ಆಫ್ ಹಾನರ್ ಗೌರವ ನೀಡಿದರು. ಪುರುಷ ಆಟಗಾರರ ನಡುವೆ ಟ್ರೋಫಿ ಹಿಡಿದು ಸ್ಮೃತಿ ಮಂಧನಾ ಮೈದಾನಕ್ಕೆ ಬಂದರೆ ಸಹ ಆಟಗಾರ್ತಿಯರು ಅವರನ್ನು ಹಿಂಬಾಲಿಸಿದರು. ಬಳಿಕ ಮೈದಾನದುದ್ದಕ್ಕೂ ಸಾಗಿದ ಆಟಗಾರ್ತಿಯರು ಅಭಿಮಾನಿಗಳಿಗೆ ಟ್ರೋಫಿ ಪ್ರದರ್ಶಿಸಿದರು.
ಕನ್ನಡದಲ್ಲಿ ಕೊಹ್ಲಿ ಮಾತು! ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ದಿಗ್ಗಜ ವಿರಾಟ್ ಕೊಹ್ಲಿ ಕನ್ನಡದಲ್ಲಿ ಮಾತನಾಡಿದ್ದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಯಿತು. ‘ಇದು ಆರ್‌ಸಿಬಿಯ ಹೊಸ ಅಧ್ಯಾಯ’ ಎಂದು ವಿರಾಟ್ ಹೇಳುತ್ತಿದ್ದಂತೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಸಂಭ್ರಮಿಸಿದರು.
ವಿನಯ್‌ಗೆ ಹಾಲ್ ಆಫ್ ಫೇಮ್
ಆರ್‌ಸಿಬಿಯ ಮಾಜಿ ಆಟಗಾರ, ಕರ್ನಾಟಕದ ವಿನಯ್ ಕುಮಾರ್ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾದರು. ಕಳೆದ ವರ್ಷ ತಂಡದ ಇಬ್ಬರು ದಿಗ್ಗಜ ಆಟಗಾರರಾದ ಕ್ರಿಸ್ ಗೇಲ್ ಹಾಗೂ ಎ ಬಿಡಿ ವಿಲಿಯರ್ಸ್ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದರು.
Watch: ಬೆಂಗಳೂರು ಆಗಿ ಬದಲಾದ ಬ್ಯಾಂಗಲೂರ್, 'ಇದು ಆರ್‌ಸಿಬಿ ಹೊಸ ಅಧ್ಯಾಯ' ಎಂದು ಕನ್ನಡದಲ್ಲೇ ಹೇಳಿದ ಕೊಹ್ಲಿ!
ಆರ್‌ಸಿಬಿ ಇನ್ನು ರಾಯಲ್ ಚಾಲೆಂಜರ್ಸ್ Bengaluru
ಅಪಾರ ಪ್ರಮಾಣದ ಕನ್ನಡಿಗ ಅಭಿಮಾನಿಗಳನ್ನು ಹೊಂದಿರುವ, ಐಪಿಎಲ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಕನ್ನಡಕ್ಕೆ ಮನ್ನಣೆ ನೀಡಿದೆ. ಕೆಲ ದಿನಗಳಿಂದ ಸಾಮಾಜಿಕ ತಾಣಗಳಲ್ಲಿ ಹಲವು ತಾರೆಯರ ಮೂಲಕ ತಂಡದ ಹೆಸರು ಬದಲಾವಣೆಯ ಸುಳಿವು ನೀಡುತ್ತಿದ್ದ ಫ್ರಾಂಚೈಸಿಯು ಮಂಗಳವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ‘ಆರ್‌ಸಿಬಿ ಅನ್‌ಬಾಕ್ಸ್’ ಕಾರ್ಯಕ್ರಮದಲ್ಲಿ ತನ್ನ ಹೆಸರಲ್ಲಿರುವ Bangalore ಅನ್ನು Bengaluru ಎಂದು ಅಧಿಕೃತವಾಗಿ ಬದಲಾಯಿಸಿದೆ.
2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದಲೂ ತಂಡದ ಹೆಸರು ರಾಯಲ್ ಚಾಲೆಂಜರ್ಸ್ Bangalore ಎಂದಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ತಾಣಗಳಲ್ಲಿ ಕನ್ನಡಕ್ಕೆ ಮನ್ನಣೆ ನೀಡಲು ಶುರು ಮಾಡಿರುವ ಫ್ರಾಂಚೈಸಿಯು ಸದ್ಯ ತಂಡದ ಹೆಸರನ್ನೂ ಬದಲಾಯಿಸಿದೆ. ಲೋಗೋ ವಿನ್ಯಾಸದಲ್ಲೂ ಕೂಡಾ ಕೊಂಚ ಬದಲಾವಣೆ ಮಾಡಲಾಗಿದೆ. ಬೆಂಗಳೂರಿನ ಹೆಸರಿನಲ್ಲೇ ಆಡುತ್ತಿರುವ ಫ್ರಾಂಚೈಸಿಯು ಹೆಸರನ್ನೇ ಈಗ ಕನ್ನಡದಲ್ಲಿ ಮರು ನಾಮಕರಣ ಮಾಡಿದ್ದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಆರ್‌ಸಿಬಿಯ ಹೊಸ ಜರ್ಸಿ ಫೋಟೋ ವೈರಲ್, ಕಪ್ ನಮ್ದೇ ಎಂದ ಫ್ಯಾನ್ಸ್!
ಇನ್ನು, ಕಾರ್ಯಕ್ರಮದಲ್ಲಿ ಆರ್‌ಸಿಬಿಯ ಹೊಸ ಜೆರ್ಸಿಯನ್ನೂ ಅನಾವರಣ ಮಾಡಲಾಯಿತು. ನಾರ್ವೆಯ ಸಂಗೀತ ಕಲಾವಿದ ಅಲಾನ್ ವಾಕರ್, ರಘು ದೀಕ್ಷಿತ್ ಸೇರಿದಂತೆ ಪ್ರಮುಖರು ಪ್ರದರ್ಶನ ನೀಡಿದರು. ಸಮಾರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರು ಕೆಲ ಗಂಟೆಗಳ ಕಾಲ ನೆಟ್ಸ್ ಅಭ್ಯಾಸ ನಡೆಸಿದರು. ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ತಮ್ಮ ನೆಚ್ಚಿನ ಆಟಗಾರರನ್ನು ಕಣ್ತುಂಬಿ ಸಂತಸ ಪಟ್ಟರು. ಕಾರ್ಯಕ್ರಮದುದ್ದಕ್ಕೂ ಆರ್‌ಸಿಬಿ...ಆರ್‌ಸಿಬಿ ಘೋಷಣೆ ಮುಗಿಲು ಮುಟ್ಟಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.