
ಜೈಪುರ(ಏ.21): 4 ವರ್ಷಗಳ ಬಳಿಕ ಐಪಿಎಲ್ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಬುಧವಾರದ ರಾಜಸ್ಥಾನ ಹಾಗೂ ಲಖನೌ ಪಂದ್ಯಕ್ಕೂ ಮುನ್ನ ಹೈಡ್ರಾಮಾ ನಡೆದಿದ್ದು, ಪಂದ್ಯಕ್ಕೆ ಕೆಲ ಗಂಟೆಗಳು ಬಾಕಿ ಇದ್ದಾಗ ರಾಜ್ಯ ಕ್ರೀಡಾ ಸಚಿವ ಅಶೋಕ್ ಚಂದ್ನಾ ವಿಐಪಿ ಸ್ಟ್ಯಾಂಡ್‌ಗೆ ಬೀಗ ಜಡಿದ ಘಟನೆ ನಡೆದಿದೆ.
ಸರ್ಕಾರದ ಒಪ್ಪಿಗೆ ಇಲ್ಲದೆ ತಾತ್ಕಾಲಿಕವಾಗಿ ವಿಐಪಿ ಬಾಕ್ಸ್ ನಿರ್ಮಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಸ್ಟ್ಯಾಂಡ್‌ಗೆ ಬೀಗ ಜಡಿದಿದ್ದಾರೆ. ಕ್ರೀಡಾ ಇಲಾಖೆ ಅಧಿಕಾರಿಗಳ ದೂರಿನ ಹಿನ್ನೆಲೆಯಲ್ಲಿ ಅವರು ಈ ಬೀಗ ಜಡಿದಿದ್ದಾರೆ. ಆದರೆ ಮಾತುಕತೆ ಬಳಿಕ ಪಂದ್ಯದ ಆರಂಭಕ್ಕೂ ಮುನ್ನ ಬೀಗ ತೆರವುಗೊಳಿಸಿ ಪ್ರೇಕ್ಷಕರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಈ ಬಗ್ಗೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಸ್ಪಷ್ಟನೆ ನೀಡಿದ್ದು, ಅನುಮತಿ ಪಡೆಯದೆ ಯಾವುದೇ ಕೆಲಸ ಮಾಡಿಲ್ಲ ಎಂದಿದೆ.
ರಾಹುಲ್ಗೆ 12 ಲಕ್ಷ ರುಪಾಯಿ ದಂಡ
ಜೈಪುರ: 16ನೇ ಆವೃತ್ತಿ ಐಪಿಎಲ್ನಲ್ಲಿ ನಿಧಾನಗತಿ ಬೌಲಿಂಗ್ ಪ್ರಕರಣಗಳು ಹೆಚ್ಚುತ್ತಿದ್ದು, ಇದೀಗ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್.ರಾಹುಲ್ ಕೂಡಾ ಇದೇ ಕಾರಣಕ್ಕೆ ದಂಡಕ್ಕೆ ಗುರಿಯಾಗಿದ್ದಾರೆ. ಬುಧವಾರದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ನಿಧಾನಗತಿ ಬೌಲಿಂಗ್ಗಾಗಿ ಅವರಿಗೆ 12 ಲಕ್ಷ ರು. ದಂಡ ವಿಧಿಸಲಾಗಿದೆ.
ಈ ಬಾರಿಯೂ ಏಷ್ಯಾಡ್‌ನಲ್ಲಿ ಭಾರತ ಕ್ರಿಕೆಟ್ ತಂಡವಿಲ್ಲ..!
ನವದೆಹಲಿ: ಈ ಬಾರಿಯು ಭಾರತ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಆಡುವ ಅವಕಾಶ ಕಳೆದುಕೊಂಡಿದೆ. ಇದನ್ನು ಬಿಸಿಸಿಐ ಅಧಿಕಾರಿಗಳು ಖಚಿತಪಡಿಸಿದ್ದು, "ಏಷ್ಯನ್ ಗೇಮ್ಸ್ ವೇಳೆ ನಮ್ಮ ತಂಡಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿರತವಾಗಿರಲಿವೆ. ಹೀಗಾಗಿ ಕ್ರೀಡಾಕೂಟದಲ್ಲಿ ಆಡುವುದಿಲ್ಲ' ಎಂದು ತಿಳಿಸಿವೆ.
ಏಷ್ಯನ್ ಗೇಮ್ಸ್ ಕ್ರೀಡಾಕೂಟವು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಚೀನಾದ ಹ್ಯಾಂಗ್ಝೂನಲ್ಲಿ ನಡೆಯಲಿದ್ದು, ಇದರಲ್ಲಿ ಭಾರತ ಕ್ರಿಕೆಟ್ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯಿತ್ತು. ಆದರೆ ಅಕ್ಟೋಬರ್-ನವೆಂಬರ್ ನವೆಂಬರ್ ತಿಂಗಳಿನಲ್ಲಿ ಭಾರತ ಪುರುಷರ ಕ್ರಿಕೆಟ್ ತಂಡವು ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ. ಇನ್ನು ಭಾರತ ಮಹಿಳಾ ಕ್ರಿಕೆಟ್ ತಂಡವು ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಸಮಯದಲ್ಲಿ ಯಾವುದೇ ಸರಣಿ ನಿಗದಿಯಾಗಿಲ್ಲ. ಆದರೂ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಕಳಿಸಿಕೊಡಲು ಬಿಸಿಸಿಐ ನಿರಾಕರಿಸಿದೆ ಎನ್ನಲಾಗಿದೆ.
IPL 2023 ಚೆನ್ನೈನಲ್ಲಿ ಸನ್ರೈಸರ್ಸ್ಗೆ ಚೆನ್ನೈ ಸೂಪರ್ ಕಿಂಗ್ಸ್ ಸ್ಪಿನ್ ಪರೀಕ್ಷೆ!
ಈ ಮೊದಲು 2010 ಮತ್ತು 2014ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಕ್ರಿಕೆಟ್ ಟೂರ್ನಿ ನಡೆದಿತ್ತು. ಆದರೆ ಭಾರತ ಕ್ರಿಕೆಟ್ ತಂಡಗಳು ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಂಡಿರಲಿಲ್ಲ. ಇನ್ನು ಕಳೆದ ವರ್ಷ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಪಾಲ್ಗೊಂಡು ಬೆಳ್ಳಿ ಪದಕ ಜಯಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.