
ರಾಜ್ಯ ರಾಜಕಾರಣದಲ್ಲಿ ಈಗ ಹೈಡ್ರಾಮಾವೊಂದು ಶುರುವಾಗಿದೆ. ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್‌ನಿಂದ ಸಿಕ್ಕಿರುವ ಬಿಗ್ ರಿಲೀಫ್, ಕೇವಲ ಅವರ ವೈಯಕ್ತಿಕ ಜೀವನಕ್ಕಷ್ಟೇ ಅಲ್ಲದೆ, ಕಾಂಗ್ರೆಸ್ ಅಂಗಳದ ಸಚಿವ ಸಂಪುಟ ವಿಸ್ತರಣೆಯ ಲೆಕ್ಕಾಚಾರಗಳನ್ನೂ ಬುಡಮೇಲು ಮಾಡುವಂತಿದೆ. ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ ಗೌಡರ್ ಕೊಲೆ ಪ್ರಕರಣದಲ್ಲಿ ಸೆಷನ್ಸ್ ಕೋರ್ಟ್‌ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವಿನಯ್ ಕುಲಕರ್ಣಿಗೆ, ಇವತ್ತು ಹೈಕೋರ್ಟ್ ಮಂಜೂರು ಮಾಡಿರುವ ಜಾಮೀನು ಮತ್ತು ಶಿಕ್ಷೆಯ ಮೇಲಿನ ತಡೆ (Stay) ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ವಿನಯ್ ಕುಲಕರ್ಣಿ ಎಂದರೆ ಪ್ರಬಲ ಪಂಚಮಸಾಲಿ ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡ. 2023ರ ವಿಧಾನಸಭಾ ಚುನಾವಣೆಯ ವೇಳೆಗೆ ಅವರು ಜೈಲಿನಲ್ಲಿದ್ದರು, ಜೊತೆಗೆ ಅವರಿಗೆ ಧಾರವಾಡ ಜಿಲ್ಲೆಯನ್ನು ಪ್ರವೇಶಿಸದಂತೆ ಕೋರ್ಟ್ ನಿರ್ಬಂಧ ವಿಧಿಸಿತ್ತು. ಮೈದಾನಕ್ಕೆ ಇಳಿದು ಪ್ರಚಾರ ಮಾಡಲು ಸಾಧ್ಯವಾಗದಿದ್ದರೂ, ಜೈಲಿನಲ್ಲಿದ್ದುಕೊಂಡೇ ಅವರು ಭರ್ಜರಿ ಗೆಲುವು ಸಾಧಿಸಿ ತಮ್ಮ ಜನಪ್ರಿಯತೆ ಮತ್ತು ರಾಜಕೀಯ ಶಕ್ತಿ ಸಾಬೀತುಪಡಿಸಿದ್ದರು. ಆದರೆ ಜನಪ್ರತಿನಿಧಿ ಇಂತ ಕೇಸ್‌ನಲ್ಲಿ ಭಾಗಿಯಾಗಿದ್ದಾರಾ? ಎಂದು ಜನರ ಬಾಯಿಗೂ ಆಹಾರವಾಗಿದ್ದರು.
ಸಂಪುಟ ರಚನೆಯಾದ ದಿನದಿಂದಲೂ "ನಾನು ಸಚಿವ ಸ್ಥಾನದ ಆಕಾಂಕ್ಷಿ" ಎಂದು ಮುಕ್ತವಾಗಿ ಹೇಳಿಕೊಳ್ಳುತ್ತಿದ್ದ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡವರು. ಆದರೆ ಕೋರ್ಟ್‌ನಲ್ಲಿದ್ದ ಶಿಕ್ಷೆಯ ತಲಬುಡವಿಲ್ಲದ ತೂಗುಕತ್ತಿ ಅವರ ಕ್ಯಾಬಿನೆಟ್ ಎಂಟ್ರಿಗೆ ಅಡ್ಡವಾಗಿತ್ತು. ಈಗ ಹೈಕೋರ್ಟ್ ಆದೇಶದ ಬೆನ್ನಲ್ಲೇ, "ಡಿಕೆ ಕ್ಯಾಬಿನೆಟ್" ಅಥವಾ ಮುಂದಿನ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸ್ಥಾನ ಸಿಗುವುದು ಖಚಿತ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ಸಮೀಕರಣವನ್ನು ಸರಿದೂಗಿಸಲು ಹೈಕಮಾಂಡ್‌ಗೂ ವಿನಯ್ ಕುಲಕರ್ಣಿ ಸೇರ್ಪಡೆ ಅನಿವಾರ್ಯವೆನಿಸಬಹುದು.
ಆದರೆ, ಈ ಖುಷಿ ಮತ್ತು ಸಚಿವ ಸ್ಥಾನದ ಲೆಕ್ಕಾಚಾರಗಳು ಅಂದುಕೊಂಡಷ್ಟು ಸುಲಭವಾಗಿಲ್ಲ. ವಿನಯ್ ಕುಲಕರ್ಣಿ ಪಡೆದಿರುವ ಈ ಮಧ್ಯಂತರ ರಿಲೀಫ್ ಮೇಲ್ಮನವಿ ಹಂತದಲ್ಲಿದೆ. ಪ್ರಕರಣದ ದೂರುದಾರರು (ಯೋಗೀಶ ಗೌಡರ್ ಕುಟುಂಬ) ಅಥವಾ ತನಿಖಾ ಸಂಸ್ಥೆಯಾದ ಸಿಬಿಐ, ಹೈಕೋರ್ಟ್ ನೀಡಿದ ಜಾಮೀನು ಮತ್ತು ಶಿಕ್ಷೆಯ ತಡೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋಗುವುದು ಬಹುತೇಕ ಖಚಿತ. ಒಂದು ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ಹೈಕೋರ್ಟ್ ನೀಡಿದ ತಡೆಗೆ ಸವಾಲು ಎದುರಾಗಿ, ಅಲ್ಲಿ ಆದೇಶ ರಿವರ್ಸ್ ಆದರೆ ಅಥವಾ ಜಾಮೀನು ರದ್ದಾದರೆ ರಾಜಕೀಯವಾಗಿ ಭಾರಿ ಹಿನ್ನಡೆಯಾಗಲಿದೆ.
ಒಂದು ವೇಳೆ ಅವರನ್ನು ಆತುರವಾಗಿ ಸಂಪುಟಕ್ಕೆ ಸೇರಿಸಿಕೊಂಡು, ಆನಂತರ ಸುಪ್ರೀಂ ಕೋರ್ಟ್‌ನಿಂದ ಹಿನ್ನಡೆಯಾದರೆ ಸರ್ಕಾರಕ್ಕೆ ಭಾರೀ ಮುಜುಗರ ಉಂಟಾಗಲಿದೆ. ಜನಪ್ರತಿನಿಧಿ ಕಾಯ್ದೆಯಡಿ ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾದರೆ ಶಾಸಕತ್ವ ರದ್ದಾಗುತ್ತದೆ. ಹೈಕೋರ್ಟ್ ಶಿಕ್ಷೆಗೆ ತಡೆ ನೀಡಿದೆಯಾದರೂ, ಸುಪ್ರೀಂ ಕೋರ್ಟ್ ಈ ತಡೆಯನ್ನು ತೆರವುಗೊಳಿಸಿದರೆ ಶಾಸಕತ್ವದ ಮೇಲೆಯೂ ಕಪ್ಪುಚುಕ್ಕೆ ಬೀಳುವ ಭೀತಿಯಿದೆ.
ಒಂದೆಡೆ ಸಚಿವ ಸಂಪುಟ ಪುನಾರಚನೆಗೆ ಮುಹೂರ್ತ ಹತ್ತಿರವಾಗುತ್ತಿದ್ದರೆ, ಇನ್ನೊಂದೆಡೆ ವಿನಯ್ ಕುಲಕರ್ಣಿ ಬೆಂಬಲಿಗರಲ್ಲಿ ಸಚಿವ ಪಟ್ಟದ ಉತ್ಸಾಹ ಕಳೆಗಟ್ಟಿದೆ. ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಹೈಕಮಾಂಡ್ ವಿನಯ್ ಕುಲಕರ್ಣಿ ಅವರಿಗೆ ತಕ್ಷಣವೇ ಮಂತ್ರಿ ಪಟ್ಟ ನೀಡಿ ರಿಸ್ಕ್ ತಗೆದುಕೊಳ್ಳುತ್ತಾರಾ? ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಎದುರಾಳಿಗಳು ಹೂಡುವ ಮುಂದಿನ ಐನ್ ಹೆಜ್ಜೆ ನೋಡಿ 'ವೇಟ್ ಅಂಡ್ ವಾಚ್' ತಂತ್ರ ಅನುಸರಿಸುತ್ತಾರಾ? ಎಂಬುದೇ ಸದ್ಯದ ಯಕ್ಷಪ್ರಶ್ನೆ. ವಿನಯ್ ಕುಲಕರ್ಣಿ ಅವರ ರಾಜಕೀಯ ಭವಿಷ್ಯ ಮತ್ತು ಸಚಿವ ಸ್ಥಾನದ ಕನಸು ಈಗ ಸುಪ್ರೀಂ ಕೋರ್ಟ್ ತೆಗೆದುಕೊಳ್ಳುವ ಮುಂದಿನ ನಡೆಯ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.