
ಬೆಂಗಳೂರು: ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ನೂತನ ಹೆಡ್‌ಕೋಚ್ ಆಗಿ ನ್ಯೂಜಿಲೆಂಡ್ ಮೂಲದ ಸ್ಟಿಫನ್ ಫ್ಲೆಮಿಂಗ್ ನೇಮಕವಾಗಿದ್ದಾರೆ. ಇದೀಗ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್, ಫ್ಲೆಮಿಂಗ್‌ಗೆ ಈ ವರ್ಷಾಂತ್ಯದಲ್ಲಿ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಪ್ರವಾಸದ ತನಕ ಕಾಯದೇ ತಕ್ಷಣದಿಂದಲೇ ತಂಡವನ್ನು ಬಲಿಷ್ಠವಾಗಿ ಕಟ್ಟುವ ನಿಟ್ಟಿನಲ್ಲಿ ಕಾರ್ಯಪ್ರೌವೃತ್ತರಾಗಬೇಕು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಇತ್ತೀಚೆಗಷ್ಟೇ ಇಂಗ್ಲೆಂಡ್ ಟೆಸ್ಟ್ ತಂಡದ ಹೆಡ್ ಕೋಚ್ ಸ್ಥಾನದಿಂದ ಬ್ರೆಂಡನ್ ಮೆಕ್ಕಲಂ ಅವರನ್ನು ಕೆಳಗಿಳಿಸಲಾಗಿತ್ತು. ಇದೀಗ ಇಂಗ್ಲೆಂಡ್ ಟೆಸ್ಟ್ ತಂಡದ ನೂತನ ಕೋಚ್ ಆಗಿ ಕೀವೀಸ್ ಮೂಲದ ಸ್ಟಿಫನ್ ಫ್ಲೆಮಿಂಗ್ ನೇಮಕವಾಗಿದ್ದಾರೆ. ಇನ್ನು ಬ್ರೆಂಡನ್ ಮೆಕ್ಕಲಂ ಟೆಸ್ಟ್ ತಂಡದ ಹೆಡ್ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದರೂ, ಇಂಗ್ಲೆಂಡ್ ಏಕದಿನ ಹಾಗೂ ಟಿ20 ತಂಡದ ಹೆಡ್ ಕೋಚ್ ಆಗಿ ಮುಂದುವರೆಯಲಿದ್ದಾರೆ. ಇನ್ನು ಸ್ಟಿಫನ್ ಫ್ಲೆಮಿಂಗ್ ಈಗಾಗಲೇ ಇಂಗ್ಲೆಂಡ್ ಟೆಸ್ಟ್ ತಂಡದ ಹೆಡ್ ಕೋಚ್ ಆಗಿ ನೇಮಕವಾಗಿದ್ದರೂ, ಇದೇ ಆಗಸ್ಟ್ 19ರಿಂದ ಪಾಕಿಸ್ತಾನ ವಿರುದ್ದ ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿಲ್ಲ. ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವು ಹೆಡಿಂಗ್ಲೆಯಲ್ಲಿ ಆರಂಭವಾಗಲಿದೆ.
ಈ ಕುರಿತಂತೆ ಮಾತನಾಡಿರುವ ವಾನ್, 'ಸ್ಟಿಫನ್ ಫ್ಲೆಮಿಂಗ್ ಅವರನ್ನು ಟೆಸ್ಟ್ ತಂಡದ ಹೆಡ್ ಕೋಚ್ ಆಗಿ ನೇಮಕ ಮಾಡಿದ್ದು ಒಳ್ಳೆಯ ನಿರ್ಧಾರ. ಆದರೆ ಅವರು ಡಿಸೆಂಬರ್‌ನಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಎದುರಿನ ಸರಣಿಗಿಂತ ಪಾಕಿಸ್ತಾನ ಎದುರಿನ ಸರಣಿಯಿಂದಲೇ ಅವರು ಕಾರ್ಯಾಚರಣೆಗಿಳಿಯಬೇಕಿತ್ತು' ಎಂದು ಟೆಲಿಗ್ರಾಫ್‌ಗೆ ಬರೆದ ಲೇಖನದಲ್ಲಿ ವಾನ್ ತಮ್ಮ ಅಭಿಪ್ರಾಯಪಟ್ಟಿದ್ದಾರೆ.
ಸ್ಟಿಫನ್ ಫ್ಲೆಮಿಂಗ್, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕಂಡ ಅತ್ಯಂತ ಯಶಸ್ವಿ ಕೋಚ್ ಆಗಿ ಗುರುತಿಸಿಕೊಂಡಿದ್ದರು. ಫ್ಲೆಮಿಂಗ್ ಮಾರ್ಗದರ್ಶನದಲ್ಲಿ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬರೋಬ್ಬರಿ ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಈ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ವಾನ್, ಫ್ಲೆಮಿಂಗ್‌ಗೆ ಚೆನ್ನೈ ಸೂಪರ್ ಕಿಂಗ್ಸ್‌ನಂತಹ ಒಳ್ಳೆಯ ತಂಡ ಸಿಗುವುದರ ಜತೆಗೆ ಧೋನಿಯಂತಹ ಒಳ್ಳೆಯ ಕ್ಯಾಪ್ಟನ್ ಕೂಡಾ ಸಿಕ್ಕಿದರು. ಹೀಗಾಗಿ ಫ್ಲೆಮಿಂಗ್ ಮೈದಾನದಲ್ಲಿ ಒಳ್ಳೆಯ ರಣತಂತ್ರವನ್ನು ಹೆಣೆಯಲು ಅನುಕೂಲವಾಯಿತು. ಫ್ಲೆಮಿಂಗ್ ಒಳ್ಳೆಯ ಟೀಂ ಮ್ಯಾನೇಜರ್ ಹಾಗೂ ರಣತಂತ್ರಗಾರ. ಆದರೆ ಇಂಗ್ಲೆಂಡ್‌ನಲ್ಲಿ ಸಿಎಸ್‌ಕೆ ಫಾರ್ಮೂಲ ವರ್ಕೌಟ್ ಆಗಲ್ಲ, ಯಾಕೆಂದರೆ ಇಲ್ಲಿ ಧೋನಿಯಂತಹ ಕ್ಯಾಪ್ಟನ್ ಸಿಗಲ್ಲ' ಎಂದು ವಾನ್ ಹೇಳಿದ್ದಾರೆ.
ಇನ್ನು ಮೈಕಲ್ ವಾನ್ ಪ್ರಕಾರ, ಸ್ಟಿಫನ್ ಫ್ಲೆಮಿಂಗ್ ಇಂಗ್ಲೆಂಡ್ ಟೆಸ್ಟ್ ತಂಡದ ಹೆಡ್ ಕೋಚ್ ಆದ ಬಳಿಕ ಬೌಲಿಂಗ್ ವಿಭಾಗದಲ್ಲಿ ಮಹತ್ವದ ಬದಲಾವಣೆಯಾಗುವ ನಿರೀಕ್ಷೆಯಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. 'ಸಿಎಸ್‌ಕೆ ತಂಡವು ಎಕ್ಸ್‌ಪ್ರೆಸ್ ವೇಗಕ್ಕಿಂತ, ಕೌಶಲ್ಯಯುತ ಬೌಲರ್‌ಗಳಿಗೆ ಹೆಚ್ಚಿನ ಒತ್ತು ನೀಡಿತ್ತು. ಇದೇ ಕಾರಣಕ್ಕಾಗಿ ಮುಂಬಬರುವ ದಿನಗಳಲ್ಲಿ ಫ್ಲೆಮಿಂಗ್ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ತಂಡವು ಮಾರಕ ವೇಗಕ್ಕಿಂತ ಸ್ವಿಂಗ್ ಹಾಗೂ ಚೆಂಡಿನ ಮೇಲೆ ಹಿಡಿತ ಸಾಧಿಸಿ ಚಾಣಾಕ್ಷವಾಗಿ ಬೌಲಿಂಗ್ ಮಾಡುವುದರಿಂದ ಆಗುವ ಲಾಭದ ಬಗ್ಗೆ ಹೆಚ್ಚು ಒತ್ತು ನೀಡುವ ಸಾಧ್ಯತೆಯಿದೆ ಎಂದು ವಾನ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.