ವಿಜಯ್‌ ಹಜಾರೆ ಟೂರ್ನಿ: ಕರ್ನಾಟಕದ ಫೈನಲ್‌ ಕನಸು ಭಗ್ನ..!

By Suvarna NewsFirst Published Mar 11, 2021, 6:09 PM IST
Highlights

ವಿಜಯ್‌ ಹಜಾರೆ ಟೂರ್ನಿಯಲ್ಲಿ ಕರ್ನಾಟಕದ ಹೋರಾಟ ಸೆಮಿಫೈನಲ್‌ನಲ್ಲೇ ಅಂತ್ಯವಾಗಿದ್ದು, ಇದೀಗ 2020-21ನೇ ಸಾಲಿನ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಮುಂಬೈ ಹಾಗೂ ಉತ್ತರ ಪ್ರದೇಶ ತಂಡಗಳು ಕಾದಾಟ ನಡೆಸಲಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ದೆಹಲಿ(ಮಾ.11): ಪೃಥ್ವಿ ಶಾ ಕೆಚ್ಚೆದೆಯ ಶತಕ ಹಾಗೂ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿ ಹಾಲಿ ಚಾಂಪಿಯನ್‌ ಕರ್ನಾಟಕ ವಿಜಯ್‌ ಹಜಾರೆ ಟೂರ್ನಿಯ ಸೆಮಿಫೈನಲ್‌ನಲ್ಲಿ 72 ರನ್‌ಗಳ ಸೋಲುಂಡು ಟೂರ್ನಿಯಿಂದ ಹೊರಬಿದ್ದಿದೆ. ಇದರೊಂದಿಗೆ 2020-21ನೇ ಸಾಲಿನ ವಿಜಯ್ ಹಜಾರೆ ಟ್ರೋಫಿಗಾಗಿ ಮುಂಬೈ ಹಾಗೂ ಉತ್ತರ ಪ್ರದೇಶ ತಂಡಗಳು ಕಾದಾಟ ನಡೆಸಲಿವೆ.

ಹೌದು, ಮುಂಬೈ ನೀಡಿದ್ದ 323 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಕರ್ನಾಟಕ ಆರಂಭದಲ್ಲೇ ನಾಯಕ ರವಿಕುಮಾರ್ ಸಮರ್ಥ್‌ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದರ ಬೆನ್ನಲ್ಲೇ ಕೆ. ಸಿದ್ದಾರ್ಥ್‌ ಸಹಾ 8 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಇನ್ನು ಅನುಭವಿ ಬ್ಯಾಟ್ಸ್‌ಮನ್‌ ಮನೀಶ್‌ ಪಾಂಡೆ ಕೇವಲ ಒಂದು ರನ್‌ ಬಾರಿಸಿ ವಿಕೆಟ್‌ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು.

Mumbai Won by 72 Run(s) (Qualified) Scorecard:https://t.co/eBzWq6ZLsn

— BCCI Domestic (@BCCIdomestic)

ಸೋಲಿನಿಂದ ಪಾರು ಮಾಡದ ಪಡಿಕ್ಕಲ್‌-ಶರತ್ ಅರ್ಧಶತಕ: ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ್ದ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ಇಂದು ಮತ್ತೊಂದು ಶತಕ ಮೂಡಿಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಪಡಿಕ್ಕಲ್‌ 64 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 64 ರನ್‌ ಬಾರಿಸಿ ವಿಕೆಟ್‌ ಒಪ್ಪಿಸುವ ಮೂಲಕ ಶತಕದ ನಾಗಾಲೋಟಕ್ಕೆ ಬ್ರೇಕ್‌ ಬಿದ್ದಿತು. ಇನ್ನು ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಬಿ. ಆರ್.ಶರತ್ ಕೇವಲ 39 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 61 ರನ್‌ ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. 

ಮಧ್ಯಮ ಕ್ರಮಾಂಕದಲ್ಲಿ ಕರುಣ್‌ ನಾಯರ್(29), ಶ್ರೇಯಸ್ ಗೋಪಾಲ್(33) ಹಾಗೂ ಕೃಷ್ಣಪ್ಪ ಗೌತಮ್‌ 28 ರನ್‌ ಬಾರಿಸಿದರಾದರೂ ಅದು ಕರ್ನಾಟಕದ ಸೋಲಿನ ಅಂತರವನ್ನು ತಗ್ಗಿಸಿತೇ ಹೊರತು, ಗೆಲುವಿಗೆ ಸಹಕಾರಿಯಾಗಲಿಲ್ಲ. ಅಂತಿಮವಾಗಿ ಕರ್ನಾಟಕ 250 ರನ್‌ಗಳಿಗೆ ಸರ್ವಪತನ ಕಂಡಿತು.

ವಿಜಯ್‌ ಹಜಾರೆ ಟ್ರೋಫಿ: ಪೃಥ್ವಿ ಶಾ ಸ್ಫೋಟಕ ಶತಕ, ಕರ್ನಾಟಕಕ್ಕೆ ಕಠಿಣ ಗುರಿ

ಇನ್ನು ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಮುಂಬೈ ಆರಂಭಿಕ ಆಘಾತದ ಹೊರತಾಗಿಯೂ ನಾಯಕ ಪೃಥ್ವಿ ಶಾ ಬಾರಿಸಿದ ಸಿಡಿಲಬ್ಬರದ ಶತಕದ ನೆರವಿನಿಂದ ತಂಡ 322 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಪೃಥ್ವಿ ಕೇವಲ 122 ಎಸೆತಗಳಲ್ಲಿ 17 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 165  ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಅಂದಹಾಗೆ ಇದು ಪ್ರಸಕ್ತ ಆವೃತ್ತಿಯಲ್ಲಿ ಪೃಥ್ವಿ ಸಿಡಿಸಿದ 4ನೇ ಶತಕವಾಗಿದೆ.

ಮಯಾಂಕ್ ದಾಖಲೆ ಮುರಿದ ಪೃಥ್ವಿ: 2017-18ನೇ ಆವೃತ್ತಿಯ ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕದ ಮಯಾಂಕ್‌ ಅಗರ್‌ವಾಲ್‌ 8 ಪಂದ್ಯಗಳನ್ನಾಡಿ 723 ರನ್‌ ಬಾರಿಸಿದ್ದರು, ಆದರೆ ಇದೀಗ ಪೃಥ್ವಿ ಶಾ ಕೇವಲ ಪಂದ್ಯಗಳಲ್ಲೇ 754 ಚಚ್ಚುವ ಮೂಲಕ ಮಯಾಂಕ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಉತ್ತರ ಪ್ರದೇಶಕ್ಕೆ ಶರಣಾದ ಗುಜರಾತ್‌:

ವಿಜಯ್ ಹಜಾರೆ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಕೇವಲ 184 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಉತ್ತರ ಪ್ರದೇಶಕ್ಕೆ ಸಾಧಾರಣ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಉತ್ತರ ಪ್ರದೇಶ ಕೇವಲ 5 ವಿಕೆಟ್‌ ಕಳೆದುಕೊಂಡು ಸುಲಭವಾಗಿ ಗೆಲುವಿನ ನಗೆ ಬೀರಿತು.

ಇದೀಗ ಮಾರ್ಚ್ 14ರಂದು ನವದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ಪ್ರಶಸ್ತಿಗಾಗಿ ಮುಂಬೈ ಹಾಗೂ ಉತ್ತರ ಪ್ರದೇಶ ತಂಡಗಳು ಕಾದಾಡಲಿವೆ.

click me!