ಐಪಿಎಲ್ 2021: ಚೆನ್ನೈ ಸೂಪರ್‌ಕಿಂಗ್ಸ್‌ ಬ್ರ್ಯಾಂಡ್‌ ಮೌಲ್ಯ ಭಾರೀ ಕುಸಿತ!

By Suvarna NewsFirst Published Mar 11, 2021, 2:45 PM IST
Highlights

13ನೇ ಆವೃತ್ತಿಯ ಐಪಿಎಲ್‌ನಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ರ್ಯಾಂಡ್‌ ವ್ಯಾಲ್ಯೂ ಸಾಕಷ್ಟು ಕುಸಿತ ಕಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಮಾ.11): 2020ರ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಕಾರಣ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಬ್ರ್ಯಾಂಡ್‌ ಮೌಲ್ಯ ಶೇ.16.5ರಷ್ಟು ಕುಸಿತ ಕಂಡಿದೆ. ಕಳೆದ ಆವೃತ್ತಿಗೂ ಮುನ್ನ 732 ಕೋಟಿ ರುಪಾಯಿ ಇದ್ದ ಮೌಲ್ಯ ಇದೀಗ 611 ಕೋಟಿ ರುಪಾಯಿಗೆ ಇಳಿಕೆಯಾಗಿದೆ ಎಂದು ಡಫ್‌ ಹಾಗೂ ಫೆಲ್ಪ್ಸ್ ಇಂಡಿಯಾ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ತಿಳಿದುಬಂದಿದೆ. 

ಆಡಿದ ಎಲ್ಲಾ ಆವೃತ್ತಿಗಳಲ್ಲೂ ಪ್ಲೇ ಆಫ್‌ ಪ್ರವೇಶಿಸಿದ ಏಕೈಕ ತಂಡ ಎನ್ನುವ ಕೀರ್ತಿಗೆ ಭಾಜನವಾಗಿದ್ದ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಪ್ಲೇ ಆಫ್‌ ಪ್ರವೇಶಿಸಲು ವಿಫಲವಾಗಿತ್ತು. ನೀರಸ ಪ್ರದರ್ಶನ ತೋರಿದ್ದ ಸಿಎಸ್‌ಕೆ ತಂಡ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಐಪಿಎಲ್‌ ನಡೆವ ಸ್ಥಳದಲ್ಲೇ ಟಿ20 ವಿಶ್ವಕಪ್ ಪಂದ್ಯಗಳು..?

ಇದೇ ವೇಳೆ ಕೋಲ್ಕತಾ ನೈಟ್‌ರೈಡ​ರ್ಸ್‌ ತಂಡದ ಬ್ರ್ಯಾಂಡ್‌ ಮೌಲ್ಯ ಸಹ 629 ಕೋಟಿ ರುಪಾಯಿಯಿಂದ 543 ಕೋಟಿಗೆ ಇಳಿಕೆಯಾಗಿದೆ. ಆದರೆ ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್‌ನಲ್ಲಿ 5ನೇ ಬಾರಿಗೆ ಚಾಂಪಿಯನ್‌ ಆದ ಮುಂಬೈ ಇಂಡಿಯನ್ಸ್‌ ತಂಡದ ಬ್ರ್ಯಾಂಡ್‌ ಮೌಲ್ಯ ಶೇ.5.9ರಷ್ಟು ಏರಿಕೆ ಕಂಡಿದ್ದು, ಸದ್ಯ ತಂಡದ ಮೌಲ್ಯ 761 ಕೋಟಿ ರುಪಾಯಿ ಆಗಿದೆ ಎಂದು ಸಮೀಕ್ಷೆ ವರದಿಯಲ್ಲಿ ತಿಳಿಸಲಾಗಿದೆ.

ಇದೀಗ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ವೇಳಾಪಟ್ಟಿ ಪ್ರಕಟಗೊಂಡಿದ್ದು, ಏಪ್ರಿಲ್‌ 09ರಿಂದ ಟೂರ್ನಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಹಾಗೂ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ.

click me!