ವಿಜಯ್ ಹಜಾರೆ ಟ್ರೋಫಿ: ಕರ್ನಾಟಕಕ್ಕಿಂದು ಬಲಿಷ್ಠ ಕೇರಳ ಸವಾಲು

By Suvarna NewsFirst Published Feb 26, 2021, 8:06 AM IST
Highlights

ವಿಜಯ್ ಹಜಾರೆ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕ ತಂಡವಿಂದು ಬೆಂಗಳೂರಿನಲ್ಲಿ ಬಲಿಷ್ಠ ಕೇರಳ ತಂಡವನ್ನು ಎದುರಿಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು(ಫೆ.26): ಹಾಲಿ ಚಾಂಪಿಯನ್‌ ಕರ್ನಾಟಕ ವಿಜಯ್‌ ಹಜಾರೆ ಏಕದಿನ ಟೂರ್ನಿಯ ನಾಕೌಟ್‌ ಹಂತಕ್ಕೆ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ವಿಶ್ವಾಸದಲ್ಲಿದ್ದು, ಶುಕ್ರವಾರ ಬಲಿಷ್ಠ ಕೇರಳ ವಿರುದ್ಧ ಸೆಣಸಲಿದೆ. ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದ್ದು, ರಾಜ್ಯ ತಂಡ ಹ್ಯಾಟ್ರಿಕ್‌ ಜಯದ ನಿರೀಕ್ಷೆಯಲ್ಲಿದೆ.

ಬಿಹಾರ, ಒಡಿಶಾ ವಿರುದ್ಧ ದೊಡ್ಡ ಗೆಲುವು ದಾಖಲಿಸಿದ್ದ ಕರ್ನಾಟಕಕ್ಕೆ, ಕೇರಳ ತಂಡದಿಂದ ಭರ್ಜರಿ ಪೈಪೋಟಿ ಎದುರಾಗಲಿದೆ. ಕೇರಳ ಆಡಿರುವ 3 ಪಂದ್ಯಗಳಲ್ಲಿ ಮೂರರಲ್ಲೂ ಜಯ ಸಾಧಿಸಿದ್ದು, ‘ಸಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.

ಕರ್ನಾಟಕ ಮತ್ತೊಮ್ಮೆ ತನ್ನ ತಾರಾ ಆರಂಭಿಕ ಜೋಡಿಯಾದ ನಾಯಕ ಆರ್‌.ಸಮರ್ಥ್ ಹಾಗೂ ದೇವದತ್‌ ಪಡಿಕ್ಕಲ್‌ ಮೇಲೆ ಹೆಚ್ಚು ವಿಶ್ವಾಸವಿರಿಸಲಿದೆ. ಪಡಿಕ್ಕಲ್‌ ಸತತ 2 ಅರ್ಧಶತಕದ ಬಳಿಕ ಕಳೆದ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ್ದರು. ಕೆ.ವಿ.ಸಿದ್ಧಾರ್ಥ್ ಸಹ ಉತ್ತಮ ಲಯದಲ್ಲಿದ್ದಾರೆ. ಆದರೆ ಕರುಣ್‌ ನಾಯರ್‌ ಇನ್ನೂ ನಂಬಿಕೆ ಉಳಿಸಿಕೊಳ್ಳುವಂತಹ ಆಟವಾಡಿಲ್ಲ. ಅಭಿಮನ್ಯು ಮಿಥುನ್‌ ಆಲ್ರೌಂಡ್‌ ಪ್ರದರ್ಶನ ತೋರುತ್ತಿದ್ದು, ಪ್ರಸಿದ್ಧ್ ಕೃಷ್ಣ, ಶ್ರೇಯಸ್‌ ಗೋಪಾಲ್‌, ಜೆ.ಸುಚಿತ್‌ ಉತ್ತಮ ಬೌಲಿಂಗ್‌ ದಾಳಿ ನಡೆಸುತ್ತಿದ್ದಾರೆ.

ವಿಜಯ್ ಹಜಾರೆ ಟ್ರೋಫಿ: ದಾಖಲೆಯ ದ್ವಿಶತಕ ಚಚ್ಚಿದ ಪೃಥ್ವಿ ಶಾ..!

ಭರ್ಜರಿ ಲಯದಲ್ಲಿ ಕೇರಳ: ರಾಬಿನ್‌ ಉತ್ತಪ್ಪ, ಸಂಜು ಸ್ಯಾಮ್ಸನ್‌, ವಿಷ್ಣು ವಿನೋದ್‌, ಸಚಿನ್‌ ಬೇಬಿ, ಮೊಹಮದ್‌ ಅಜರುದ್ದೀನ್‌ರಂತಹ ಉತ್ತಮ ಬ್ಯಾಟ್ಸ್‌ಮನ್‌ಗಳ ಬಲ ತಂಡಕ್ಕಿದೆ. ಉತ್ತಪ್ಪ 3 ಪಂದ್ಯಗಳಲ್ಲಿ 2 ಶತಕ ಬಾರಿಸಿದ್ದಾರೆ. ಶ್ರೀಶಾಂತ್‌ ನೇತೃತ್ವದ ಬೌಲಿಂಗ್‌ ಪಡೆ ಸಹ ಉತ್ತಮ ಲಯದಲ್ಲಿದೆ. ಕರ್ನಾಟಕ ನಾಕೌಟ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ ಬಾಕಿ ಇರುವ 2 ಪಂದ್ಯಗಳಲ್ಲಿ ಗೆಲ್ಲಲೇಬೇಕಿದೆ. ಅದರಲ್ಲೂ ಕೇರಳವನ್ನು ಸೋಲಿಸಿದರೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲು ಅನುಕೂಲವಾಗಲಿದೆ.

ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ

click me!