
ಅಹಮದಾಬಾದ್ ಟೆಸ್ಟ್(ಫೆ.25): ಅಕ್ಷರ್ ಪಟೇಲ್ ಹಾಗೂ ರವಿಚಂದ್ರನ್ ಅಶ್ವಿನ್ ಮಿಂಚಿನ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 81 ರನ್‌ಗಳಿಗೆ ಸರ್ವಪತನ ಕಂಡಿದ್ದು, ಭಾರತಕ್ಕೆ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಗೆಲ್ಲಲು ಕೇವಲ 49 ರನ್‌ಗಳ ಗುರಿ ನೀಡಿದೆ. ಎರಡನೇ ದಿನದಾಟದಲ್ಲಿ ಇಲ್ಲಿಯವರೆಗೆ ಒಟ್ಟು 17 ವಿಕೆಟ್‌ಗಳು ಪತನವಾಗಿದ್ದು, ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಎರಡೇ ದಿನಕ್ಕೆ ಟೆಸ್ಟ್ ಪಂದ್ಯ ಮುಕ್ತಾಯವಾಗುವುದು ಬಹುತೇಕ ಖಚಿತ ಎನಿಸಿದೆ.
ಭಾರತವನ್ನು 145 ರನ್‌ಗಳಿಗೆ ಆಲೌಟ್ ಮಾಡಿ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಮೊದಲ ಎಸೆತದಲ್ಲೇ ಅಕ್ಷರ್ ಪಟೇಲ್ ಶಾಕ್ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದ ಜಾಕ್ ಕ್ರಾವ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ಅದೇ ಓವರ್‌ನಲ್ಲಿ ಜಾನಿ ಬೇರ್‌ಸ್ಟೋವ್ ಸಹ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ರೂಟ್(19), ಬೆನ್ ಸ್ಟೋಕ್ಸ್(25) ಹಾಗೂ ಓಲಿ ಪೋಪ್(12) ಕೆಲಕಾಲ ಪ್ರತಿರೋಧ ತೋರಿದರಾದರೂ ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ಭಾರತೀಯ ಸ್ಪಿನ್ನರ್‌ಗಳು ಅವಕಾಶ ನೀಡಲಿಲ್ಲ.
ಅಶ್ವಿನ್‌ಗೆ ಆರ್ಚರ್ 400ನೇ ಬಲಿ, ಹೊಸ ದಾಖಲೆ ಬರೆದ ಸ್ಪಿನ್ ಮಾಂತ್ರಿಕ..!
ತವರಿನಲ್ಲಿ ಮತ್ತೆ ಮಿಂಚಿದ ಅಕ್ಷರ್ ಪಟೇಲ್: ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಬಳಿಸಿದ್ದ ಅಕ್ಷರ್ ಪಟೇಲ್ ಎರಡನೇ ಇನಿಂಗ್ಸ್‌ನಲ್ಲೂ 5 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಕಂಟಕವಾಗಿ ಪರಿಣಮಿಸಿದರು. ಇನ್ನು ಅಶ್ವಿನ್ 4 ಹಾಗೂ ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ತಂಡವನ್ನು 100 ರನ್‌ಗಳೊಳಗಾಗಿ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಇನ್ನು ಇದೇ ಪಂದ್ಯದಲ್ಲಿ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ಕ್ರಿಕೆಟಿಗ ಜೋಫ್ರಾ ಆರ್ಚರ್ ವಿಕೆಟ್ ಕಬಳಿಸುವ ಮೂಲಕ 400 ವಿಕೆಟ್ ಕಬಳಿಸಿದ ಸಾಧನೆ ಮಾಡಿದರು.
ಎರಡೇ ದಿನಕ್ಕೆ ಪಂದ್ಯ ಮುಕ್ತಾಯ.?:
ಸದ್ಯ ಇಂಗ್ಲೆಂಡ್ ತಂಡ 81 ರನ್‌ಗಳಿಗೆ ಆಲೌಟ್ ಆಗಿದ್ದು, ಭಾರತಕ್ಕೆ ಗೆಲ್ಲಲು 49 ರನ್‌ಗಳ ಸಾದಾರಣ ಗುರಿ ನೀಡಿದೆ. ಗುರಿ ಬೆನ್ನತ್ತಿರುವ ಭಾರತ ಲಂಚ್ ಬ್ರೇಕ್ ವೇಳೆಗೆ ವಿಕೆಟ್ ನಷ್ಟವಿಲ್ಲದೇ 11 ರನ್ ಬಾರಿಸಿದ್ದು, ಟೆಸ್ಟ್ ಪಂದ್ಯ ಕೈವಶ ಮಾಡಿಕೊಳ್ಳಲು ಕೇವಲ 38 ರನ್‌ಗಳನ್ನು ಬಾರಿಸಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.