Vijay Hazare Trophy ಜಾರ್ಖಂಡ್‌ ಮಣಿಸಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ

By Naveen KodaseFirst Published Nov 26, 2022, 4:28 PM IST
Highlights

ವಿಜಯ್ ಹಜಾರೆ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ
ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಜಾರ್ಖಂಡ್ ಎದುರು ಭರ್ಜರಿ ಜಯ
ಆಕರ್ಷಕ ಅರ್ಧಶತಕ ಸಿಡಿಸಿದ ಆರ್ ಸಮರ್ಥ್, ನಿಕಿನ್ ಜೋಸ್

ಅಹಮದಾಬಾದ್(ನ.26): ನಿಕಿನ್ ಜೋಸ್(63*) ಹಾಗೂ ರವಿಕುಮಾರ್‌ ಸಮರ್ಥ್‌(53) ಬಾರಿಸಿದ ಸಮಯೋಚಿತ ಅರ್ಧಶತಕಗಳ ನೆರವಿನಿಂದ ಜಾರ್ಖಂಡ್ ವಿರುದ್ದ ಕರ್ನಾಟಕ ತಂಡವು 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಜಾರ್ಖಂಡ್‌ ನೀಡಿದ್ದ 188 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಕರ್ನಾಟಕ ತಂಡವು ಆರಂಭದಲ್ಲೇ ನಾಯಕ ಮಯಾಂಕ್‌ ಅಗರ್‌ವಾಲ್ ವಿಕೆಟ್ ಕಳೆದುಕೊಂಡಿತು. ಮಯಾಂಕ್ ಅಗರ್‌ವಾಲ್ ಕೇವಲ 12 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ರವಿಕುಮಾರ್ ಸಮರ್ಥ್ ಹಾಗೂ ನಿಕಿನ್ ಜೋಸ್ ಜೋಡಿ 64 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಆರ್. ಸಮರ್ಥ್‌ 60 ಎಸೆತಗಳನ್ನು ಎದುರಿಸಿ 7 ಬೌಂಡರಿ 53 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. 

ಇನ್ನು ಇದಾದ ಬಳಿಕ ನಿಕಿನ್‌ ಜೋಸ್‌, ಮನೀಶ್ ಪಾಂಡೆ ಹಾಗೂ ಶ್ರೇಯಸ್ ಗೋಪಾಲ್ ಜತೆಗೋಡಿ ತಂಡಕ್ಕೆ ಆಸರೆಯಾದರು. ಮನೀಶ್ ಪಾಂಡೆ 18 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರೆ, ಶ್ರೇಯಸ್‌ ಗೋಪಾಲ್ 12 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರು. ಆದರೆ ಮತ್ತೊಂದು ತುದಿಯಲ್ಲಿ ಆಕರ್ಷಕ ಬ್ಯಾಟಿಂಗ್‌ ನಡೆಸಿದ ನಿಕಿನ್‌ ಜೋಸ್ 93 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ ಅಜೇಯ 63 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

ಅಷ್ಟೊಂದು ಶಕ್ತಿ ಹಿಂದೆಂದೂ ಅನುಭವವಾಗಿರಲಿಲ್ಲ; ಪಾಕ್ ಎದುರಿನ ದಿಟ್ಟ ಹೋರಾಟ ಸ್ಮರಿಸಿಕೊಂಡ ವಿರಾಟ್ ಕೊಹ್ಲಿ..!

ಇನ್ನು ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಜಾರ್ಖಂಡ್ ತಂಡವು ಆರಂಭದಲ್ಲೇ ಆಘಾತ ಅನುಭವಿಸಿತು. ಆರಂಭಿಕ ಬ್ಯಾಟರ್‌ಗಳಾದ ಅರ್ನವ್‌ ಸಿನ್ಹಾ ಹಾಗೂ ಉತ್ಕರ್ಷ್ ಸಿಂಗ್ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿ ಪೆವಿಲಿಯನ್‌ ಸೇರಿದರು. ರಾಜ್ಯದ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ಜಾರ್ಖಂಡ್ ತಂಡವು 40 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡು ಅಲ್ಪಮೊತ್ತಕ್ಕೆ ಖುಷಿಯುವ ಭೀತಿಗೆ ಸಿಲುಕಿತ್ತು. ಆದರೆ ಆರನೇ ವಿಕೆಟ್‌ಗೆ ಕುಶಾಗ್ರಾ(74) ಹಾಗೂ ಅನ್ಕೂಲ್ ರಾಯ್(57) ಜೋಡಿ 115 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಆದರೆ ಈ ಜೋಡಿ ಬೇರ್ಪಡುತ್ತಿದ್ದಂತೆಯೇ ನಾಟಕೀಯ ಕುಸಿತ ಕಂಡ ಜಾರ್ಖಂಡ್ ತಂಡವು 47.1 ಓವರ್‌ಗಳಲ್ಲಿ 187 ರನ್ ಗಳಿಸಿ ಸರ್ವಪತನ ಕಂಡಿತು.

ಕರ್ನಾಟಕ ತಂಡದ ಪರ ವಿದ್ವತ್ ಕಾವೇರಪ್ಪ, ರೋನಿತ್ ಮೋರೆ ಹಾಗೂ ಎಂ ವೆಂಕಟೇಶ್ ತಲಾ 3 ವಿಕೆಟ್ ಪಡೆದರೆ, ಮನೋಜ್ ಭಂಡಾಜೆ ಒಂದು ವಿಕೆಟ್ ಪಡೆದರು.

click me!