ಫಿಟ್ನೆಸ್ ಅಫ್‌ಡೇಟ್ ನೀಡಿದ ಜಸ್ಪ್ರೀತ್ ಬುಮ್ರಾ; ಯಾವಾಗ ಮೈದಾನಕ್ಕೆ ಟೀಂ ಇಂಡಿಯಾ ವೇಗಿಯ ಎಂಟ್ರಿ?

By Naveen KodaseFirst Published Nov 26, 2022, 2:35 PM IST
Highlights

ಗಾಯದಿಂದ ಚೇತರಿಸಿಕೊಳ್ಳುತ್ತಿರುವ ವೇಗಿ ಜಸ್ಪ್ರೀತ್ ಬುಮ್ರಾ
ಬೆಂಗಳೂರಿನ ಎನ್‌ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿರುವ ಟೀಂ ಇಂಡಿಯಾ ವೇಗಿ
ಸದ್ಯದಲ್ಲಿಯೇ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ಸುಳಿವು ನೀಡಿದ ಬುಮ್ರಾ

ಮುಂಬೈ(ನ.26): ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ, 2022ರ ಸೆಪ್ಟೆಂಬರ್‌ನಿಂದ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದಾರೆ. ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಜಸ್ಪ್ರೀತ್ ಬುಮ್ರಾ, ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದಲೂ ಹೊರಬಿದ್ದಿದ್ದರು. ಇದೀಗ ಚೇತರಿಸಿಕೊಳ್ಳುವತ್ತ ಬುಮ್ರಾ ದಿಟ್ಟ ಹೆಜ್ಜೆಯಿಟ್ಟಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಗಾಯಕ್ಕೆ ತುತ್ತಾಗಿದ್ದು ಟೀಂ ಇಂಡಿಯಾ ಪಾಲಿಗೆ ದೊಡ್ಡ ಹಿನ್ನೆಡೆಯಾಗಿ ಪರಿಣಮಿಸಿತ್ತು. ಸದ್ಯ ಜಸ್ಪ್ರೀತ್ ಬುಮ್ರಾ, ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಇದೀಗ ಬುಮ್ರಾ, ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸದ್ಯದಲ್ಲಿಯೇ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡುವ ಸುಳಿವು ನೀಡಿದ್ದಾರೆ.

ಸದ್ಯ ಟೀಂ ಇಂಡಿಯಾ, ನ್ಯೂಜಿಲೆಂಡ್ ಪ್ರವಾಸದಲ್ಲಿದ್ದು, ಸೀಮಿತ ಓವರ್‌ಗಳ ಸರಣಿಯಲ್ಲಿ ಪಾಲ್ಗೊಂಡಿದೆ. ಈ ಸರಣಿಯಿಂದ ಜಸ್ಪ್ರೀತ್ ಬುಮ್ರಾ ಹೊರಗುಳಿದಿದ್ದಾರೆ. ಇನ್ನು ಮುಂಬರುವ ಬಾಂಗ್ಲಾದೇಶ ಪ್ರವಾಸದಿಂದಲೂ ಬುಮ್ರಾ ಹೊರಗುಳಿದಿದ್ದಾರೆ. 28 ವರ್ಷದ ಬಲಗೈ ವೇಗಿ ಬುಮ್ರಾ, ಟೀಂ ಇಂಡಿಯಾ ಮೂರು ಮಾದರಿಯ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಬುಮ್ರಾ ಇನ್ನೂ ಪುನಶ್ಚೇತನ ಶಿಬಿರದಲ್ಲಿಯೇ ಚೇತರಿಸಿಕೊಳ್ಳುತ್ತಿದ್ದು, ಬುಮ್ರಾ ಕಮ್‌ಬ್ಯಾಕ್ ಕುರಿತಂತೆ ಬಿಸಿಸಿಐ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಇದೀಗ ಜಸ್ಪ್ರೀತ್ ಬುಮ್ರಾ, ಕಸರತ್ತು ನಡೆಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಅದಕ್ಕೆ ಸುಲಭವೇನಲ್ಲ ಆದರೆ ಯಾವಾಗಲೂ ತುಂಬಾ ಒಳ್ಳೆಯದ್ದಿದು ಎಂದು ಕ್ಯಾಪ್ಶನ್ ನೀಡಿದ್ದಾರೆ.

Never easy, but always worth it 💪 pic.twitter.com/aJhz7jCsxQ

— Jasprit Bumrah (@Jaspritbumrah93)

ಜಸ್ಪ್ರೀತ್ ಬುಮ್ರಾ, ಯುಎಇನಲ್ಲಿ ನಡೆದ ಏಷ್ಯಾಕಪ್ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿ ಹೀಗೆ ಎರಡು ಮಹತ್ವದ ಟೂರ್ನಿಗಳಲ್ಲಿಯೂ ಹೊರಗುಳಿದಿದ್ದರು. ಬುಮ್ರಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಬೌಲಿಂಗ್ ಕೊಂಚ ದುರ್ಬಲವಾಗಿ ಕಂಡುಬಂದಿತ್ತು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ, 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಅಷ್ಟೊಂದು ಶಕ್ತಿ ಹಿಂದೆಂದೂ ಅನುಭವವಾಗಿರಲಿಲ್ಲ; ಪಾಕ್ ಎದುರಿನ ದಿಟ್ಟ ಹೋರಾಟ ಸ್ಮರಿಸಿಕೊಂಡ ವಿರಾಟ್ ಕೊಹ್ಲಿ..!

2023ರಲ್ಲಿ ಭಾರತದಲ್ಲಿಯೇ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಜರುಗಲಿದ್ದು, ಆಟಗಾರರು ಫಿಟ್ನೆಸ್ ಕಾಪಾಡಿಕೊಳ್ಳಲು ಮಹತ್ತರವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗಾಗಿ ಸಂಪೂರ್ಣ ಚೇತರಿಸಿಕೊಂಡ ಬಳಿಕವಷ್ಟೇ ಜಸ್ಪ್ರೀತ್ ಬುಮ್ರಾ ಅವರಿಗೆ ಸೂಕ್ತ ಕಾಲಾವಕಾಶ ನೀಡಲಾಗಿದೆ ಎನ್ನಲಾಗುತ್ತಿದೆ.

ಟೀಂ ಇಂಡಿಯಾಗೆ ಗಾಯದ ಸಮಸ್ಯೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಲವಾದ ಪೆಟ್ಟನ್ನೇ ನೀಡಿತ್ತು. ಜಸ್ಪ್ರೀತ್ ಬುಮ್ರಾ ಮಾತ್ರವಲ್ಲದೇ ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡಾ ಗಾಯದ ಸಮಸ್ಯೆಯಿಂದಾಗಿ ಟಿ20  ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದರು. ಜಡೇಜಾ ಅನುಪಸ್ಥಿತಿ ಕೂಡಾ ಟೀಂ ಇಂಡಿಯಾವನ್ನು ಬಹುವಾಗಿ ಕಾಡಿತ್ತು.

click me!