
ಬೆಂಗಳೂರು: ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲೂ ವಿಜಯ್ ಹಜಾರೆ ಟ್ರೋಫಿಯಲ್ಲಿ ಡೆಲ್ಲಿ ಭರ್ಜರಿ ಜಯ ಸಾಧಿಸಿದೆ. ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಮೂರು ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಸೌರಾಷ್ಟ್ರ ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 320 ರನ್ ಗಳಿಸಿತು. ವಿಶ್ವರಾಜ್ ಜಡೇಜಾ (115) ಶತಕ ಬಾರಿಸಿದರು. ರುಚಿತ್ ಅಹಿರ್ 95 ರನ್‌ಗಳಿಸಿ ಅಜೇಯರಾಗಿ ಉಳಿದರು. ಸವಾಲಿನ ಗುರಿ ಬೆನ್ನತ್ತಿ ಬ್ಯಾಟಿಂಗ್ ಮಾಡಿದ ಡೆಲ್ಲಿ 48.5 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು ರೋಚಕ ಜಯ ಸಾಧಿಸಿತು. ಪ್ರಿಯಾಂಶ್ ಆರ್ಯ (78), ತೇಜಸ್ವಿ (53), ಹರ್ಷ್ ತ್ಯಾಗಿ (49), ಮತ್ತು ನವದೀಪ್ ಸೈನಿ (29 ಎಸೆತಗಳಲ್ಲಿ ಅಜೇಯ 34) ಅವರ ಇನ್ನಿಂಗ್ಸ್‌ಗಳು ಡೆಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿತು.
ಮೂರನೇ ಪಂದ್ಯಕ್ಕೆ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಆಯ್ಕೆಗೆ ಅಲಭ್ಯರಾಗಿದ್ದರಿಂದ, ನಾಯಕ ರಿಷಭ್ ಪಂತ್ ಮೇಲೆ ಹೆಚ್ಚಿನ ನಿರೀಕ್ಷೆಗಳಿದ್ದವು. ಆದರೆ ನಾಯಕ ರಿಷಭ್ ಪಂತ್ (22) ನಿರಾಸೆ ಮೂಡಿಸಿದರು. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಪ್ರಕಟಿಸಲಿರುವ ಹೊತ್ತಿನಲ್ಲೇ ಪಂತ್ ಅವರ ಕಳಪೆ ಪ್ರದರ್ಶನ ಬಂದಿದೆ. ಹೀಗಾಗಿ ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಗೆ ರಿಷಭ್ ಪಂತ್ ಬದಲಿಗೆ ಇಶಾನ್ ಕಿಶನ್‌ಗೆ ಸ್ಥಾನ ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈಗಾಗಲೇ ಕನ್ನಡಿಗ ಕೆ ಎಲ್ ರಾಹುಲ್, ಏಕದಿನ ತಂಡದಲ್ಲಿ ಮೊದಲ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ.
ಇನ್ನೊಂದು ಪಂದ್ಯದಲ್ಲಿ, ಬರೋಡಾ ವಿರುದ್ಧ ಉತ್ತರ ಪ್ರದೇಶದ ಧ್ರುವ್ ಜುರೆಲ್ ಶತಕ ಬಾರಿಸಿದರು. ಈ ಪಂದ್ಯದಲ್ಲಿ ಉತ್ತರ ಪ್ರದೇಶ 54 ರನ್‌ಗಳಿಂದ ಜಯಗಳಿಸಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಉತ್ತರ ಪ್ರದೇಶ ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 369 ರನ್ ಗಳಿಸಿತು. 101 ಎಸೆತಗಳಲ್ಲಿ 160 ರನ್ ಗಳಿಸಿ ಅಜೇಯರಾಗಿ ಉಳಿದ ಜುರೆಲ್ ಜೊತೆಗೆ, ರಿಂಕು ಸಿಂಗ್ 67 ಎಸೆತಗಳಲ್ಲಿ 63 ರನ್ ಗಳಿಸಿದರು. ಅಭಿಷೇಕ್ ಗೋಸ್ವಾಮಿ 51 ರನ್ ಗಳಿಸಿದರು. ಪ್ರಶಾಂತ್ ವೀರ್ (35) ಮತ್ತು ಆರ್ಯನ್ ಜುಯಲ್ (26) ಕೂಡ ಮಿಂಚಿದರು.
ಉತ್ತರವಾಗಿ ಬ್ಯಾಟಿಂಗ್ ಮಾಡಿದ ಬರೋಡಾ 315 ರನ್‌ಗಳಿಗೆ ಆಲೌಟ್ ಆಯಿತು. 77 ಎಸೆತಗಳಲ್ಲಿ 82 ರನ್ ಗಳಿಸಿದ ಕೃನಾಲ್ ಪಾಂಡ್ಯ ಟಾಪ್ ಸ್ಕೋರರ್ ಎನಿಸಿಕೊಂಡರು. ಶಾಶ್ವತ್ ರಾವತ್ (60), ವಿಷ್ಣು ಸೋಲಂಕಿ (43), ಮತ್ತು ಶೇತ್ (46) ಕೂಡ ಮಿಂಚಿದರು. ಹೀಗಿದ್ದೂ ಬರೋಡ ತಂಡವು ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ. ಉತ್ತರ ಪ್ರದೇಶ ಪರ ಜೀಶನ್ ಅನ್ಸಾರಿ ಮೂರು ವಿಕೆಟ್ ಪಡೆದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.