ಪರಿಶ್ರಮಕ್ಕೆ ಸಿಕ್ಕ ಬೆಲೆ: ಟೀಂ ಇಂಡಿಯಾಗೆ ಭರ್ಜರಿ ಕಮ್‌ಬ್ಯಾಕ್‌ ಮಾಡಿದ ದಿನೇಶ್ ಕಾರ್ತಿಕ್‌...!

Published : May 23, 2022, 05:29 PM IST
 ಪರಿಶ್ರಮಕ್ಕೆ ಸಿಕ್ಕ ಬೆಲೆ: ಟೀಂ ಇಂಡಿಯಾಗೆ ಭರ್ಜರಿ ಕಮ್‌ಬ್ಯಾಕ್‌ ಮಾಡಿದ ದಿನೇಶ್ ಕಾರ್ತಿಕ್‌...!

ಸಾರಾಂಶ

* ಟೀಂ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡಿದ ದಿನೇಶ್‌ ಕಾರ್ತಿಕ್‌ * ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಮಿಂಚುತ್ತಿರುವ ಡಿಕೆ ಬಾಸ್ * ಮ್ಯಾಚ್ ಫಿನಿಶರ್ ಆಗಿ ಗಮನ ಸೆಳೆದಿರುವ ಅನುಭವಿ ವಿಕೆಟ್ ಕೀಪರ್‌

ನವದೆಹಲಿ(ಮೇ.23): ಅನುಭವಿ ವಿಕೆಟ್‌ ಕೀಪರ್‌ ಬ್ಯಾಟರ್‌ ದಿನೇಶ್ ಕಾರ್ತಿಕ್‌ (Team India Wicket-keeper Dinesh Karthik), 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ತೋರುವ ಮೂಲಕ ಬಿಸಿಸಿಐ ಆಯ್ಕೆ ಸಮಿತಿ (BCCI Selction Committee) ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ತಂಡದ ಪರ ದಿನೇಶ್ ಕಾರ್ತಿಕ್‌ ಮ್ಯಾಚ್ ಫಿನಿಶರ್ ಆಗಿ ಗಮನ ಸೆಳೆದಿದ್ದು, ಡೆತ್‌ ಓವರ್‌ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಗ್ರೂಪ್‌ ಹಂತದಲ್ಲಿ ದಿನೇಶ್ ಕಾರ್ತಿಕ್‌, ಆರ್‌ಸಿಬಿ ಪರ 191ರ ಸ್ಟ್ರೈಕ್‌ರೇಟ್‌ನಲ್ಲಿ 287 ರನ್ ಸಿಡಿಸುವ ಮೂಲಕ ಮಿಂಚಿದ್ದು, ಇದೀಗ ದಕ್ಷಿಣ ಆಫ್ರಿಕಾ ಎದುರು ತವರಿನಲ್ಲಿ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಭರ್ಜರಿಯಾಗಿಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಿದ್ದಾರೆ.

2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ (ICC ODI World Cup 2019) ಟೂರ್ನಿಯ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಭಾರತ ಕ್ರಿಕೆಟ್ ತಂಡವು ಆಘಾತಕಾರಿ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿತ್ತು. ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್‌ ನಿರಾಶಾದಾಯಕ ಪ್ರದರ್ಶನ ತೋರಿದ್ದರಿಂದಾಗಿ ತಂಡದಿಂದಲೇ ಹೊರಬಿದ್ದಿದ್ದರು. ಇದಾದ ಬಳಿಕ ಭಾರತ ತಂಡದಲ್ಲಿ ಸ್ಥಾನಗಿಟ್ಟಿಸಲು ದಿನೇಶ್ ಕಾರ್ತಿಕ್ ಸಾಕಷ್ಟು ಪ್ರಯತ್ನಪಟ್ಟರಾದರೂ ಯಶಸ್ವಿಯಾಗಿರಲಿಲ್ಲ. ಆದರೆ 2022ರ ಐಪಿಎಲ್‌ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು  ತಂಡದ ಪಾಲಿಗೆ ದಿನೇಶ್‌ ಕಾರ್ತಿಕ್ ಉಪಯುಕ್ತ ಸಂದರ್ಭದಲ್ಲಿ ರನ್‌ಗಳಿಸುವ ಮೂಲಕ ಅಕ್ಷರಶಃ ಆಪತ್ಬಾಂದವ ಎನಿಸಿದ್ದಾರೆ.
 
15ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ ಚೆಂಡನ್ನು ಬೌಂಡರಿಯ ಮೂಲೆ ಮೂಲೆಗೆ ಅಟ್ಟಿದ್ದಾರೆ. ಕಾರ್ತಿಕ್ ಸ್ಪಷ್ಟವಾದ ಮನಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದ್ದು, ಡಿಕೆ ನಿರ್ಭಯವಾಗಿ ಬ್ಯಾಟ್‌ ಬೀಸುತ್ತಿರುವ ರೀತಿಯು ಆಯ್ಕೆ ಸಮಿತಿಯ ಮನಗೆಲ್ಲುವಂತೆ ಮಾಡಿದೆ. ಮುಂಬರುವ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಆಯ್ಕೆ ಸಮಿತಿಯು ಮ್ಯಾಚ್‌ ಫಿನಿಶರ್‌ ರೂಪದಲ್ಲಿ ದಿನೇಶ್‌ ಕಾರ್ತಿಕ್‌ಗೆ  ತಂಡದಲ್ಲಿ ಮಣೆ ಹಾಕಿದೆ.

Team India Squad ಟಿ20 ಸರಣಿ ಹಾಗೂ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟ, ಉಮ್ರಾನ್ ಮಲಿಕ್‌‌ಗೆ ಚಾನ್ಸ್!

ದಿನೇಶ್ ಕಾರ್ತಿಕ್‌, ಟೀಂ ಇಂಡಿಯಾಗೆ ಆಯ್ಕೆಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ತಮಿಳುನಾಡು ಮೂಲದ ಬ್ಯಾಟರ್, ನಿಮ್ಮ ಮೇಲೆ ನಿಮಗೆ ವಿಶ್ವಾಸವಿದ್ದರೆ, ಎಲ್ಲವೂ ಅಂದುಕೊಂಡಂತೆಯೇ ಆಗುತ್ತದೆ. ನನ್ನ ಮೇಲೆ ನಂಬಿಕೆಯಿಟ್ಟು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಕಠಿಣ ಪರಿಶ್ರಮ ಮುಂದುವರೆಯಲಿದೆ ಎಂದು ದಿನೇಶ್ ಕಾರ್ತಿಕ್ ಟ್ವೀಟ್‌ ಮಾಡಿದ್ದಾರೆ. 

ದಕ್ಷಿಣ ಆಫ್ರಿಕಾ ವಿರುದ್ದದ ಜೂನ್ 09ರಿಂದ 5 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, ಭಾರತ ತಂಡದಲ್ಲಿ ನಾಯಕ ಕೆ ಎಲ್ ರಾಹುಲ್, ರಿಷಭ್ ಪಂತ್, ಇಶಾನ್ ಕಿಶನ್ ಹಾಗೂ ದಿನೇಶ್ ಕಾರ್ತಿಕ್‌ ಹೀಗೆ ನಾಲ್ವರು ತಜ್ಞ ವಿಕೆಟ್‌ ಕೀಪರ್‌ ಬ್ಯಾಟರ್‌ಗಳಿದ್ದು, ಆಡುವ ಹನ್ನೊಂದರ ಬಳಗದಲ್ಲಿ ಯಾರೆಲ್ಲಾ ಸ್ಥಾನ ಪಡೆಯಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ. 

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟಿಂ ಇಂಡಿಯಾ 

ಕೆಎಲ್ ರಾಹುಲ್(ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶಾನ್, ದೀಪಕ್ ಹೂಡ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶದೀಪ್ ಸಿಂಗ್, ಉಮ್ರಾನ್ ಮಲಿಕ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ