
ದಂಬೊಲ್ಲ: ಭಾರತ 'ಎ' ಹಾಗೂ ಶ್ರೀಲಂಕಾ 'ಎ' ತಂಡಗಳ ನಡುವಿನ ತ್ರಿಕೋನ ಸರಣಿಯ ಮೂರನೇ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದ ಶ್ರೀಲಂಕಾ 'ಎ' ತಂಡವು ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಭಾರತ 'ಎ' ತಂಡಕ್ಕೆ ಈ ಪಂದ್ಯದಲ್ಲಿ ಉತ್ತಮ ಆರಂಭ ಪಡೆಯಲು ವಿಫಲವಾಯಿತು. 2026ರ ಐಪಿಎಲ್ ಟೂರ್ನಿಯಲ್ಲಿ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ವೈಭವ್ ಸೂರ್ಯವಂಶಿ, ಭಾರತ 'ಎ' ತಂಡದ ಪರ ಮತ್ತೊಮ್ಮೆ ವೈಫಲ್ಯ ಅನುಭವಿಸಿದ್ದಾರೆ. ಐಪಿಎಲ್ ಬಳಿಕ ಭಾರತ 'ಎ' ಪರ ವೈಭವ್ ಕಳಪೆ ಫಾರ್ಮ್ ಭಾರತ ತಂಡದ ತಲೆನೋವು ಹೆಚ್ಚಿಸಿದೆ.
2026ರ ಐಪಿಎಲ್ ಟೂರ್ನಿಯಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ, ರಾಜಸ್ಥಾನರ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದು ಆರೆಂಜ್ ಕ್ಯಾಪ್ ಸೇರಿದಂತೆ ಐದು ಪ್ರಮುಖ ಪ್ರಶಸ್ತಿಗಳನ್ನು ಜಯಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಬಿಸಿಸಿಐ ಆಯ್ಕೆ ಸಮಿತಿ ಗಮನ ಸೆಳೆದ ವೈಭವ್ ಸೂರ್ಯವಂಶಿ, ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಸೀನಿಯರ್ಸ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ. ಇದಕ್ಕೂ ಮುನ್ನ ವೈಭವ್ ಸೂರ್ಯವಂಶಿ, ಭಾರತ ಎ ತಂಡದ ಪರವಾಗಿ ತ್ರಿಕೋನ ಸರಣಿಯನ್ನಾಡಲು ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾರೆ. ವೈಭವ್ ಸೂರ್ಯವಂಶಿ ಈ ತ್ರಿಕೋನ್ ಸರಣಿಯಲ್ಲಿ ಇದುವರೆಗೂ ಮೂರು ಪಂದ್ಯಗಳನ್ನಾಡಿದ್ದಾರೆ. ಮೊದಲಿಗೆ ಶ್ರೀಲಂಕಾ 'ಎ' ತಂಡದ ವಿರುದ್ದ ವೈಭವ್ 12 ಎಸೆತಗಳಲ್ಲಿ 14 ರನ್ ಬಾರಿಸಿದ್ದರು. ಇದಾದ ಬಳಿಕ ಎರಡನೇ ಪಂದ್ಯದಲ್ಲಿ ಆಫ್ಘಾನಿಸ್ತಾನ 'ಎ' ತಂಡದ ವಿರುದ್ದ 22 ಎಸೆತಗಳಲ್ಲಿ 44 ರನ್ ಬಾರಿಸಿದ್ದರು. ಈ ಇನ್ನಿಂಗ್ಸ್ ನೋಡಿದ ಅಭಿಮಾನಿಗಳು ವೈಭವ್ ಸೂರ್ಯವಂಶಿ ಮತ್ತೆ ಫಾರ್ಮ್‌ಗೆ ಬಂದರು ಎಂದು ಖುಷಿ ಪಟ್ಟಿದ್ದರು. ಆದರೆ ಇದೀಗ ಮತ್ತೆ ಶ್ರೀಲಂಕಾ 'ಎ' ತಂಡದ ಎದುರು ವೈಭವ್ ಸೂರ್ಯವಂಶಿ ಕೇವಲ 14 ಎಸೆತಗಳಲ್ಲಿ 21 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಕಳೆದ ಮೂರು ಪಂದ್ಯಗಳಿಂದ ವೈಭವ್ ಸೂರ್ಯವಂಶಿ ಕೇವಲ 79 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.
ಅಂದಹಾಗೆ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಗಿದೆ. ಪ್ರಭ್‌ಸಿಮ್ರನ್ ಸಿಂಗ್ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ವೈಭವ್ ಸೂರ್ಯವಂಶಿ ಬ್ಯಾಟಿಂಗ್ 21 ರನ್‌ಗೆ ಸೀಮಿತವಾಯಿತು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಋತುರಾಜ್ ಗಾಯಕ್ವಾಡ್ 37 ರನ್ ಗಳಿಸುವ ಮೂಲಕ ತಂಡಕ್ಕೆ ಅಸರೆಯಾಗಲು ಪ್ರಯತ್ನಿಸಿದರು. ಇನ್ನುಳಿದಂತೆ ನಾಯಕ ತಿಲಕ್ ವರ್ಮಾ(23), ಆಯುಷ್ ಬದೋನಿ(15) ತಮಗೆ ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲವಾದರು. ಸದ್ಯ ಭಾರತ 'ಎ' ತಂಡವು 36 ಓವರ್ ಅಂತ್ಯದ ವೇಳೆಗೆ 7 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿದೆ. ಸೂರ್ಯಾನ್ಶ್ ಶೆಡ್ಗೆ(15) ಹಾಗೂ ವಿಪ್ರಾಜ್ ನಿಗಮ್(9) ಕ್ರೀಸ್ ಕಾಯ್ದುಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.