ಆತ 15 ವರ್ಷದ ಕ್ರಿಕೆಟಿಗನೇ ಅಲ್ಲ, ವೈಭವ್‌ ಸೂರ್ಯವಂಶಿ ವಯಸ್ಸಿಗೆ ಅನುಮಾನ ವ್ಯಕ್ತಪಡಿಸಿದ ಪಾಕ್‌ ಮಾಜಿ ವೇಗಿ

Published : Nov 25, 2026, 09:06 AM IST
Pak Pacer Tanvir Ahmed Questions Vaibhav Suryavanshi Age

ಸಾರಾಂಶ

ಭಾರತದ ಯುವ ಕ್ರಿಕೆಟಿಗ 15 ವರ್ಷದ ವೈಭವ್ ಸೂರ್ಯವಂಶಿ ಅವರ ಅದ್ಭುತ ಬ್ಯಾಟಿಂಗ್ ಕಂಡು ಪಾಕಿಸ್ತಾನದ ಮಾಜಿ ಬೌಲರ್ ತನ್ವೀರ್ ಅಹ್ಮದ್ ಅವರ ವಯಸ್ಸಿನ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಆತ 15 ವರ್ಷದವನಲ್ಲ, ಆತನ ವಯಸ್ಸಿನ ಬಗ್ಗೆ ತನಿಖೆ ನಡೆಸಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನವದೆಹಲಿ (ನ.25): ಭಾರತದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮೈದಾನಕ್ಕಿಳಿದರೆ ಸಾಕು, ಬೌಂಡರಿ-ಸಿಕ್ಸರ್‌ಗಳ ಸುರಿಮಳೆಯೇ ಸುರಿಯುತ್ತದೆ. ಇತ್ತೀಚೆಗಷ್ಟೇ ಯುಎಇ (UAE) ವಿರುದ್ಧ ಸಿಡಿಲಬ್ಬರದ ದ್ವಿಶತಕ ಸಿಡಿಸಿ ಇಡೀ ಕ್ರಿಕೆಟ್ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ್ದ 15 ವರ್ಷದ ವೈಭವ್ ಅವರ ಬ್ಯಾಟಿಂಗ್ ಶಕ್ತಿಯನ್ನು ಕಂಡು ಪಾಕಿಸ್ತಾನದ ಮಾಜಿ ವೇಗದ ಬೌಲರ್ ತನ್ವೀರ್ ಅಹ್ಮದ್ ಅಸಮಾಧಾನ ಹೊರಹಾಕಿದ್ದಾರೆ. ಆತ 15 ವರ್ಷದ ಕ್ರಿಕೆಟಿಗನೇ ಅಲ್ಲ, ಆತನ ವಯಸ್ಸಿನ ಬಗ್ಗೆ ತನಿಖೆ ನಡೆಸಬೇಕು ಎಂದು ತನ್ವೀರ್ ಅಹ್ಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಿರಿಯ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ-ದೊಡ್ಡ ಸಿಕ್ಸರ್‌ಗಳನ್ನು ಬಾರಿಸುತ್ತಾ ಎದುರಾಳಿ ಬೌಲರ್‌ಗಳ ನಿದ್ದೆಗೆಡಿಸಿರುವ ವೈಭವ್ ಸೂರ್ಯವಂಶಿ ಅವರ ಪವರ್-ಹಿಟ್ಟಿಂಗ್ (Power-hitting) ಸಾಮರ್ಥ್ಯವನ್ನು ಅರಗಿಸಿಕೊಳ್ಳಲಾಗದ ತನ್ವೀರ್ ಅಹ್ಮದ್, ವೈಭವ್ ಅವರ ಜನ್ಮ ದಿನಾಂಕ ಮತ್ತು ದೈಹಿಕ ಸಾಮರ್ಥ್ಯದ ಬಗ್ಗೆಯೇ ಪ್ರಶ್ನೆ ಎತ್ತಿದ್ದಾರೆ.

ವೈಭವ್ ಸೂರ್ಯವಂಶಿ ಅವರ ವಯಸ್ಸಿನ ಕುರಿತು ನೇರ ಮಾತುಗಳಲ್ಲಿ ಅನುಮಾನ ವ್ಯಕ್ತಪಡಿಸಿರುವ ತನ್ವೀರ್ ಅಹ್ಮದ್, 'ಆತ 15 ಅಥವಾ 16 ವರ್ಷದ ಹುಡುಗನಲ್ಲ ಎಂಬ ನನ್ನ ಹಿಂದಿನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ಇದಕ್ಕೆ ಕಾರಣವೇನೆಂದರೆ, ನಮ್ಮ ದೃಷ್ಟಿಯಲ್ಲಿ ವಿಶ್ವ ಕ್ರಿಕೆಟ್‌ಗೆ ಹಲವಾರು ಅಂಡರ್-19 (19 ವರ್ಷದೊಳಗಿನ) ಆಟಗಾರರು ಬಂದು ಹೋಗಿದ್ದಾರೆ; ಆದರೆ ಆತ ಸಿಕ್ಸರ್‌ಗಳನ್ನು ಬಾರಿಸುವ ರೀತಿಯನ್ನು ನೋಡಿದರೆ, ಅದು 15 ಅಥವಾ 16 ವರ್ಷದ ಬಾಲಕನಿಂದ ಸಾಧ್ಯವಾಗುವ ಕೆಲಸವೇ ಅಲ್ಲ ಎಂದಿದ್ದಾರೆ.

ಅಂದರೆ, 15 ವರ್ಷದ ಹುಡುಗನ ದೇಹದ ಬೇಸ್‌, ದೇಹರಚನೆ ಅಥವಾ ಆತನ ಸ್ನಾಯುಗಳಲ್ಲಿ (Muscles) ಅಷ್ಟೊಂದು ಶಕ್ತಿ ಹೇಗೆ ಬರಲು ಸಾಧ್ಯ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ನನ್ನ ಇಡೀ ಜೀವನದಲ್ಲಿ ಕ್ರಿಕೆಟ್‌ನಲ್ಲಿ ಇಂತಹದ್ದನ್ನು ನಾನು ಎಂದಿಗೂ ನೋಡಿಲ್ಲ, ಮತ್ತು ಆತ 15 ಅಥವಾ 16 ವರ್ಷದ ಹುಡುಗ ಎಂದು ನಂಬಲೂ ಸಾಧ್ಯವಿಲ್ಲ ಎಂದು ತನ್ವೀರ್ ಹೇಳಿದ್ದಾರೆ. ಆತನ ಜನ್ಮ ದಿನಾಂಕವನ್ನು ಪರಿಶೀಲನೆ ಮಾಡಬೇಕು. ಆತನ ಬಗ್ಗೆ ತನಿಖೆ ನಡೆಸಿ. ಎಲ್ಲೋ ಒಂದು ಕಡೆ ಆತ 15 ವರ್ಷದವನಲ್ಲ, ಬದಲಾಗಿ 19 ವರ್ಷ ಅಥವಾ ಅದಕ್ಕಿಂತಲೂ ಹೆಚ್ಚು ವಯಸ್ಸಿನವನು ಎಂಬುದು ಬಯಲಾಗಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಪೋಷಕರನ್ನು ವಿಚಾರಿಸಿ, ಮುಂದೊಂದು ದಿನ ಸತ್ಯ ಹೊರಬರುತ್ತದೆ

ತಮ್ಮ ಮಾತನ್ನು ಮುಂದುವರಿಸಿದ ತನ್ವೀರ್ ಅಹ್ಮದ್, ವೈಭವ್ ಪೋಷಕರನ್ನೂ ಈ ವಿವಾದದೊಳಗೆ ಎಳೆದು ತಂದಿದ್ದಾರೆ. 'ಸರಿ, ಆತನ ಬಗ್ಗೆ ತನಿಖೆ ನಡೆಸಿ, ಆತನ ಪೋಷಕರನ್ನು ಕರೆಸಿ ವಯಸ್ಸನ್ನು ಕಡಿಮೆ ಮಾಡಿಸಿದ್ದಾರೆಯೇ ಎಂದು ಕೇಳಿ. ಆತ ಸಿಕ್ಸರ್‌ಗಳನ್ನು ಸಿಡಿಸುವ ರೀತಿಯ ಬಗ್ಗೆ ಖಂಡಿತಾ ಚರ್ಚೆಯಾಗುತ್ತದೆ ಮತ್ತು ಮುಂದೊಂದು ದಿನ ಆತನ ವಯಸ್ಸಿನ ಬಗ್ಗೆ ಸತ್ಯ ಹೊರಬರುತ್ತದೆ. ಆತ 15 ವರ್ಷದ ಹುಡುಗನಲ್ಲ ಎಂಬುದು ಸಾಬೀತಾಗುತ್ತದೆ ಎಂದು ನಾನು ಈಗಲೂ ಹೇಳುತ್ತಿದ್ದೇನೆ ಎಂದು ತನ್ವೀರ್ ಅಹ್ಮದ್ ಹೇಳಿದ್ದಾರೆ.

ಯುಎಇ ವಿರುದ್ಧ ಸಿಡಿಲಬ್ಬರದ ದ್ವಿಶತಕ ಬಾರಿಸಿ ವಿಶ್ವದ ಗಮನ ಸೆಳೆದಿದ್ದ ವೈಭವ್ ಸೂರ್ಯವಂಶಿ

ತನ್ವೀರ್ ಅಹ್ಮದ್ ಅವರ ಈ ಹೊಟ್ಟೆಕಿಚ್ಚಿನ ಮಾತುಗಳಿಗೆ ಮುಖ್ಯ ಕಾರಣ ವೈಭವ್ ಸೂರ್ಯವಂಶಿ ಅವರ ಇತ್ತೀಚಿನ ವಸ್ಫೋಟಕ ಬ್ಯಾಟಿಂಗ್ ಪ್ರದರ್ಶನ. ವಿಶೇಷವಾಗಿ ಯುಎಇ (UAE) ವಿರುದ್ಧದ ಪಂದ್ಯದಲ್ಲಿ ವೈಭವ್ ಬಾರಿಸಿದ ಭರ್ಜರಿ ದ್ವಿಶತಕ (Double Century) ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಯುಎಇ ಬೌಲಿಂಗ್ ಪಡೆಯನ್ನು ನಿರ್ದಯವಾಗಿ ದಂಡಿಸಿದ್ದ ವೈಭವ್, ಮೈದಾನದ ಮೂಲೆಮೂಲೆಗೂ ಚೆಂಡನ್ನು ಅಟ್ಟಿದ್ದರು. ಹಿರಿಯ ಅಂತರರಾಷ್ಟ್ರೀಯ ಆಟಗಾರರನ್ನೂ ನಾಚಿಸುವಂತಹ ಕ್ಲೀನ್ ಹಿಟ್ಟಿಂಗ್ (Clean hitting) ಮತ್ತು ಅಮೋಘ ಟೈಮಿಂಗ್ ಮೂಲಕ ಅವರು ಗಗನಚುಂಬಿ ಸಿಕ್ಸರ್‌ಗಳನ್ನು ಸಿಡಿಸಿ ದ್ವಿಶತಕ ಪೂರೈಸಿದ್ದರು.

ಯುಎಇ ವಿರುದ್ಧದ ಈ ಸ್ಮರಣೀಯ ದ್ವಿಶತಕದ ಇನ್ನಿಂಗ್ಸ್‌ನಲ್ಲಿ ವೈಭವ್ ತೋರಿದ ಆಕ್ರಮಣಕಾರಿ ಆಟ, ದೈಹಿಕ ಕ್ಷಮತೆ ಮತ್ತು ಒತ್ತಡದಲ್ಲೂ ಅಬ್ಬರಿಸುವ ಪರಿ ಕಂಡು ದಿಗ್ಗಜ ಕ್ರಿಕೆಟಿಗರೇ ಬೆರಗಾಗಿದ್ದರು. ಆದರೆ, ಭಾರತೀಯ ಯುವ ಪ್ರತಿಭೆಯ ಈ ಅಸಾಧಾರಣ ಯಶಸ್ಸನ್ನು ಸಹಿಸಲಾಗದ ಪಾಕಿಸ್ತಾನದ ಮಾಜಿ ವೇಗಿ ತನ್ವೀರ್ ಅಹ್ಮದ್, ಈಗ ವಯಸ್ಸಿನ ವಿವಾದವನ್ನು ಕೆದಕುವ ಮೂಲಕ ಸುದ್ದಿಯಾಗಲು ಯತ್ನಿಸಿದ್ದಾರೆ ಎಂಬ ಅಭಿಪ್ರಾಯ ಕ್ರಿಕೆಟ್ ಅಭಿಮಾನಿಗಳಿಂದ ವ್ಯಕ್ತವಾಗುತ್ತಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL ಹರಾಜಿಗೆ ಸೆಹ್ವಾಗ್‌ ಮಗ ಎಂಟ್ರಿ, ಮೂಲ ಬೆಲೆ ಎಷ್ಟು? ದ್ರಾವಿಡ್‌ ಪುತ್ರರ ನಡೆ ಕುತೂಹಲ
ವೈಭವ್ ಸೂರ್ಯವಂಶಿ ವಿಶ್ವದಾಖಲೆಯ ದ್ವಿಶತಕ ಬೆನ್ನಲ್ಲೇ ಸುರೇಶ್ ರೈನಾ ಟ್ರೆಂಡ್ ಆಗ್ತಿರೋದೇಕೆ?