ವೈಭವ್ ಪ್ರತಿಭೆಗೆ ಇಂಗ್ಲೆಂಡ್ ದಿಗ್ಗಜ ಫಿದಾ; 3 ಫಾರ್ಮ್ಯಾಟ್‌ನಲ್ಲಿ ನಂಬರ್ 1 ಆಗುವ ತಾಕತ್ತಿದೆ ಎಂದು ಮೆಚ್ಚುಗೆ!

Published : Nov 28, 2026, 10:24 PM IST
vaibhav suryavanshi

ಸಾರಾಂಶ

15 ವರ್ಷದ ಭಾರತೀಯ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಅದ್ಭುತ ಪ್ರದರ್ಶನಕ್ಕೆ ಇಂಗ್ಲೆಂಡ್ ದಿಗ್ಗಜ ಅಲಸ್ಟೈರ್ ಕುಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುಎಇ ವಿರುದ್ಧ 53 ಎಸೆತಗಳಲ್ಲಿ ದ್ವಿಶತಕ ಸಿಡಿಸಿ ವಿಶ್ವ ದಾಖಲೆ ಬರೆದ ವೈಭವ್, 3 ಫಾರ್ಮ್ಯಾಟ್‌ಗಳಲ್ಲೂ ನಂಬರ್ 1 ಆಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಕುಕ್ ಹೇಳಿದ್ದಾರೆ.

ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಮೆಂಟ್‌ನಲ್ಲಿ ಕೇವಲ 53 ಎಸೆತಗಳಲ್ಲಿ ಭರ್ಜರಿ ದ್ವಿಶತಕ ಸಿಡಿಸಿ ವಿಶ್ವ ದಾಖಲೆ ಬರೆದಿರುವ ಭಾರತದ ಯುವ ಬ್ಯಾಟಿಂಗ್ ವೈಭವ್ ಸೂರ್ಯವಂಶಿ ಪ್ರಸ್ತುತ ರಜೆಯ ಮೂಡ್‌ನಲ್ಲಿದ್ದಾರೆ. ಪ್ರಸ್ತುತ ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಯಲ್ಲಿರುವ ಈ 15 ವರ್ಷದ ಪ್ರತಿಭೆಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ದಿಗ್ಗಜ ಆಟಗಾರ ಅಲಸ್ಟೈರ್ ಕುಕ್ ಮುಕ್ತಕಂಠದ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವೈಭವ್ ಕೇವಲ ಟಿ20ಗೆ ಸೀಮಿತವಾಗದೆ, ಕ್ರಿಕೆಟ್‌ನ ಮೂರೂ ಸ್ವರೂಪಗಳಲ್ಲೂ (ಟೆಸ್ಟ್, ಏಕದಿನ, ಟಿ20) ಜಗತ್ತಿನ ಅತ್ಯುತ್ತಮ ಆಟಗಾರನಾಗುವ ಪ್ರಚಂಡ ಸಾಮರ್ಥ್ಯ ಹೊಂದಿದ್ದಾರೆ ಎಂದು ಕುಕ್ ಬಣ್ಣಿಸಿದ್ದಾರೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಯುಎಇ ವಿರುದ್ಧ 53 ಎಸೆತಗಳಲ್ಲಿ 204ರನ್!

ದೋಹಾದಲ್ಲಿ ನಡೆದ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಮೆಂಟ್‌ನಲ್ಲಿ ಭಾರತ 'ಎ' ಪರ ಕಣಕ್ಕಿಳಿದ ವೈಭವ್ ಸೂರ್ಯವಂಶಿ, ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ಕೇವಲ 53 ಎಸೆತಗಳಲ್ಲಿ 28 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 204 ರನ್ ಚಚ್ಚಿದ್ದಾರೆ. ಈ ಮೂಲಕ ಲಿಸ್ಟ್ 'ಎ' ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಶತಕ, 150 ರನ್ ಹಾಗೂ ದ್ವಿಶತಕ ಗಳಿಸಿದ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರ ದಶಕಗಳ ಹಳೆಯ ದಾಖಲೆ ಧೂಳೀಪಟ!

ಜುಲೈ 2026ರಲ್ಲಿ ಕೇವಲ 15 ವರ್ಷ 99 ದಿನಗಳ ವಯಸ್ಸಿನಲ್ಲಿ ಇಂಗ್ಲೆಂಡ್ ವಿರುದ್ಧ ಟಿ೨೦ ಅಂತರರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡುವ ಮೂಲಕ ವೈಭವ್ ಸೂರ್ಯವಂಶಿ, ಭಾರತದ ಪರ ಆಡಿದ ಅತ್ಯಂತ ಕಿರಿಯ ಪುರುಷ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಕ್ರಿಕೆಟ್ ರತ್ನ ಸಚಿನ್ ತೆಂಡೂಲ್ಕರ್ ಅವರ ದಶಕಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. 14ನೇ ವಯಸ್ಸಿನಲ್ಲಿ ರಾಜಸ್ಥಾನ ರಾಯಲ್ಸ್ ಪರ ಪಾದಾರ್ಪಣೆ ಮಾಡಿ 7 ಪಂದ್ಯಗಳಲ್ಲಿ 206.56 ಸ್ಟ್ರೈಕ್ ರೇಟ್‌ನಲ್ಲಿ 1 ಶತಕದೊಂದಿಗೆ 252 ರನ್ ಬಾರಿಸಿದ್ದರು.

2026ರ ಋತುವಿನಲ್ಲಿ ಆರೆಂಜ್ ಕ್ಯಾಪ್!

16 ಪಂದ್ಯಗಳಲ್ಲಿ 48.50 ಸರಾಸರಿ ಹಾಗೂ 237 ಪ್ರಚಂಡ ಸ್ಟ್ರೈಕ್ ರೇಟ್‌ನಲ್ಲಿ 226 ರನ್ ಗಳಿಸಿ 'ಆರೆಂಜ್ ಕ್ಯಾಪ್' ಪಡೆದಿದ್ದರು. ಈ ಋತುವಿನಲ್ಲಿ 72 ಸಿಕ್ಸರ್ ಮತ್ತು 63 ಬೌಂಡರಿ ಹೊಡೆದು 'ಅತ್ಯಂತ ಮೌಲ್ಯಯುತ ಆಟಗಾರ' ಹಾಗೂ 'ಉದಯೋನ್ಮುಖ ಆಟಗಾರ' ಪ್ರಶಸ್ತಿ ಬಾಚಿಕೊಂಡರು. ಆಡಿದ 23 ಐಪಿಎಲ್‌ ಪಂದ್ಯಗಳಲ್ಲಿ 228 ಸ್ಟ್ರೈಕ್ ರೇಟ್‌ನೊಂದಿಗೆ 2 ಶತಕ, 6 ಅರ್ಧಶತಕ ಹಾಗೂ 96 ಸಿಕ್ಸರ್‌ಗಳ ನೆರವಿನಿಂದ ಒಟ್ಟು 1028 ರನ್ ಕಲೆಹಾಕಿದ್ದಾರೆ.

ವೈಭವ್ ಬ್ಯಾಟಿಂಗ್ ಶೈಲಿ ವಿಶಿಷ್ಟವಾದದ್ದು; ಕುಕ್ ಶ್ಲಾಘನೆ!

ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಶೈಲಿಯನ್ನು ವಿಶ್ಲೇಷಿಸಿದ ಅಲಸ್ಟೈರ್ ಕುಕ್, "ಸಾಮಾನ್ಯವಾಗಿ ಪವರ್ ಹಿಟ್ಟರ್‌ಗಳು ಚೆಂಡು ಸ್ಲಾಟ್‌ನಲ್ಲಿ ಬೀಳುವವರೆಗೆ ಕಾಯುತ್ತಾರೆ. ಆದರೆ ವೈಭವ್ ಯಾವುದೇ ಸನ್ನಿವೇಶದ ಚೆಂಡಿಗೂ ತಕ್ಷಣ ಸ್ಪಂದಿಸಿ ಸಿಕ್ಸರ್ ಬಾರಿಸುವ ವಿಶಿಷ್ಟ ಸಾಮರ್ಥ್ಯ ಹೊಂದಿದ್ದಾರೆ. ಪ್ರತಿಯೊಂದು ಪೀಳಿಗೆಗೂ ಇಂತಹ ನಿರ್ಭೀತ ಆಟಗಾರನ ಅಗತ್ಯವಿದೆ. ವೈಭವ್ ಮೂರೂ ಸ್ವರೂಪಗಳಲ್ಲಿ ಇದೇ ರೀತಿ ಪ್ರದರ್ಶನ ನೀಡಿದರೆ, ಅದು ಟೆಸ್ಟ್ ಕ್ರಿಕೆಟ್‌ನ ಜನಪ್ರಿಯತೆ ಹಾಗೂ ಭವಿಷ್ಯಕ್ಕೆ ದೊಡ್ಡ ಉತ್ತೇಜನ ನೀಡಲಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

‘ಇದಕ್ಕಿಂತ ವಿಶೇಷ ಗೆಲುವು ಮತ್ತೊಂದಿಲ್ಲ’: ಆಸ್ಪತ್ರೆಯಲ್ಲಿದ್ದಾಗಲೂ ಆ ಹೈವೋಲ್ಟೇಜ್ ಮ್ಯಾಚ್ ವೀಕ್ಷಿಸಿದ್ದ ವಿರಾಟ್ ಕೊಹ್ಲಿ..! ನಿಮಗೆ ಆ ಪಂದ್ಯ ನೆನಪಿದೆಯಾ?
Kohli vs Rohit: ಐಪಿಎಲ್‌ನಲ್ಲಿ ಸ್ಯಾಲರಿಗಾಗಿ ಬಿಗ್ ಫೈಟ್, 19 ಆವೃತ್ತಿಗಳಲ್ಲಿ ಹೆಚ್ಚು ಸಂಭಾವನೆ ಪಡೆದಿದ್ದು ಯಾರು?